ರಾಯ್ಪುರ: ದಸರಾ ಮೆರವಣಿಗೆ ಮೇಲೆ ಕಾರು ಹರಿದು ನಾಲ್ವರು ಮೃತಪಟ್ಟಿರುವ ಘಟನೆ ಛತ್ತೀಸಗಡದ ಜಶ್ಪುರ ಪಟ್ಟಣದಲ್ಲಿ ನಡೆದಿದೆ. ದಸರಾ ಮೆರವಣಿಗೆ ಮೂರ್ತಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರವಣಿಗೆಯಲ್ಲಿದ್ದವರ ಮೇಲೆ ನುಗ್ಗಿದ ಕಾರನ್ನು ಬೆನ್ನಟ್ಟಿ ಹೋದ ಸ್ಥಳೀಯರು ಆಕ್ರೋಶದಿಂದ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದು ಕಾರು ನುಗ್ಗಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಛತ್ತೀಸಗಡ-ಜಾರ್ಖಂಡ್ ರಾಜ್ಯದ ಗಡಿಯಲ್ಲಿರುವ ಜಶಪುರದಲ್ಲಿ ದುರಂತ ಸಂಭವಿಸಿದೆ. ಗಾಂಜಾ ತುಂಬಿದ್ದ ಕಾರನ್ನು ಪೊಲೀಸರು ಹಿಡಿಯಬಹುದು ಎಂದು ವೇಗವಾಗಿ ಓಡಿಸಿದ್ದಾರೆ. ಈ ವೇಳೆ ದುರ್ಗಾ ವಿಸರ್ಜನೆಯ ಮೆರವಣಿಗೆಯಲ್ಲಿದ್ದ ಭಕ್ತರ ಮೇಲೆ ಕಾರು ಹರಿದಿದೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದು, ಶೋಧದ ವೇಳೆ ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ. ಮೃತರಿಗೆ ತಲಾ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ರಮಣ್ ಸಿಂಗ್ ಒತ್ತಾಯಿಸಿದ್ದಾರೆ.
ಈ ಅಪಘಾತದ ವಿಚಾರದಲ್ಲಿಯೂ ಬಿಜೆಪಿ-ಕಾಂಗ್ರೆಸ್ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿವೆ. ಲಖೀಂಪುರ ಖೇರಿ ಕಾರ್ ದುರಂತ ಸಂತ್ರಸ್ತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಒತ್ತಾಯಿಸಿತ್ತು. ಛತ್ತೀಸಗಡ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಇಲ್ಲಿಯೂ ಮೃತರಿಗೆ ತಲಾ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಒಂದು ಮೃತದೇಹವನ್ನು ಆಸ್ಪತ್ರೆಗೆ ತರಲಾಗಿದ್ದು, 16 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂಳೆ ಮುರಿತದಿಂದ ತೀವ್ರ ನೋವು ಅನುಭವಿಸುತ್ತಿದ್ದ ಇಬ್ಬರನ್ನು ಇತರ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗಿದೆ ಎಂದು ವಲಯ ವೈದ್ಯಾಧಿಕಾರಿ ಜೇಮ್ಸ್ ಮಿಂಜ್ ಹೇಳಿದರು.
ಯಾವುದೇ ಹಾರ್ನ್ ಇಲ್ಲದೆ ವಾಹನ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ನುಗ್ಗಿ ಬಂತು. ಕೆಂಪು ವಸ್ತ್ರಗಳನ್ನು ತೊಟ್ಟು ಮೆರವಣಿಗೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ಏನಾಗುತ್ತಿದೆ ಎಂಬುದು ಅರಿವಾಗುವ ಮೊದಲೇ ಅವರ ಮೇಲೆ ಮಧ್ಯಪ್ರದೇಶದ ನಂಬರ್ ಪ್ಲೇಟ್ ಇದ್ದ ಮಹೀಂದ್ರ ಕ್ಸೈಲೊ ವಾಹನ ಹರಿದಿತ್ತು. ಮಧ್ಯಪ್ರದೇಶ ಸಾರಿಗೆ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಈ ವಾಹನದ ಮಾಲೀಕನ ಹೆಸರು ಕಾಮೇಶ್ವರ್ ಸಿಂಗ್.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ‘ಜಶ್ಪುರ ಘಟನೆಯು ಹೃದಯವಿದ್ರಾವಕವಾಗಿದೆ. ಅಪರಾಧಿಗಳನ್ನು ತಕ್ಷಣ ಬಂಧಿಸಲಾಗಿದೆ. ತನಿಖೆ ನಡೆಸಲಾಗುತ್ತಿದ್ದು, ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದ್ದು ಎನ್ನಲಾದ ಈ ವಿಡಿಯೊ ತುಣುಕು ವೈರಲ್ ಆಗಿದೆ.
Chhattisgarh?? pic.twitter.com/C26NTuebWD
— Atul Ahuja (@atulahuja_) October 15, 2021
ಇದನ್ನೂ ಓದಿ: Lakhimpur Kheri ಲಖಿಂಪುರ್ ಖೇರಿ ರೈತರ ಹತ್ಯೆ: ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಸಚಿವರ ಮಗನನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸ್
ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ: ಮೃತ ರೈತರಿಗೆ ಅಂತಿಮ ನಮನ ಸಲ್ಲಿಸಲು ಶಹೀದ್ ರೈತರ ದಿನ ಆಚರಣೆ
Published On - 5:43 pm, Fri, 15 October 21