ತಮಿಳುನಾಡು: 4 ವಾಹನಗಳು ಪರಸ್ಪರ ಡಿಕ್ಕಿ, ನಾಲ್ವರು ಸಾವು; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

|

Updated on: Jan 25, 2024 | 3:05 PM

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಆರ್ಥಿಕ ನೆರವು ಘೋಷಿಸಿದ್ದಾರೆ. ಸ್ಟಾಲಿನ್, ಮೃತರ ಕುಟುಂಬಕ್ಕೆ ₹ 2 ಲಕ್ಷ ಹಾಗೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ₹ 50,000 ಪರಿಹಾರ ಘೋಷಿಸಿದ್ದಾರೆ.

ತಮಿಳುನಾಡು: 4 ವಾಹನಗಳು ಪರಸ್ಪರ ಡಿಕ್ಕಿ, ನಾಲ್ವರು ಸಾವು; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸಿಸಿಟಿವಿ ದೃಶ್ಯ
Follow us on

ಧರ್ಮಪುರಿ ಜನವರಿ 25: ತಮಿಳುನಾಡಿನ (Tamil nadu) ಧರ್ಮಪುರಿ (Dharmapuri) ಜಿಲ್ಲೆಯಲ್ಲಿ ನಾಲ್ಕು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ. ತೋಪ್ಪುರ್ ಘಾಟ್‌ನಲ್ಲಿ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಇತರ ಎಂಟು ಜನರು ಗಾಯಗೊಂಡಿದ್ದಾರೆ.  ಘಟನಾ ಸ್ಥಳದಿಂದ ದೊರೆತ ಸಿಸಿಟಿವಿ ದೃಶ್ಯಗಳನ್ನು ನೋಡಿದರೆ ವೇಗವಾಗಿ ಚಲಿಸುತ್ತಿರುವ ಟ್ರಕ್ ಮತ್ತೊಂದು ಟ್ರಕ್‌ಗೆ ಗುದ್ದಿದ್ದು, ಇದು ಸರಣಿ ಅಪಘಾತಕ್ಕೆ ಕಾರಣವಾಗುತ್ತದೆ. ಡಿಕ್ಕಿ ಹೊಡೆದ ಟ್ರಕ್ ನಿಯಂತ್ರಣ ತಪ್ಪಿ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಎರಡು ವಾಹನಗಳ ನಡುವೆ ಕಾರು ಸಿಲುಕಿಕೊಂಡಿದೆ.

ಪರಿಣಾಮ ಕಾರು ಸ್ಥಳದಲ್ಲೇ ನಜ್ಜುಗುಜ್ಜಾಗಿದ್ದು, ಟ್ರಕ್ ರೈಲಿಂಗ್‌ಗೆ ಡಿಕ್ಕಿ ಹೊಡೆದು ಸೇತುವೆಯಿಂದ ಪಲ್ಟಿಯಾಗಿ ಕೆಳಗೆ ಬಿದ್ದಿದೆ.


ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಆರ್ಥಿಕ ನೆರವು ಘೋಷಿಸಿದ್ದಾರೆ. ಸ್ಟಾಲಿನ್, ಮೃತರ ಕುಟುಂಬಕ್ಕೆ ₹ 2 ಲಕ್ಷ ಹಾಗೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ₹ 50,000 ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ:ಉತ್ತರ ಪ್ರದೇಶ: ಟೆಂಪೋ-ಡಂಪರ್​ ಡಿಕ್ಕಿ, 12 ಮಂದಿ ಸಾವು

ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು, ಅಗ್ನಿಶಾಮಕ ದಳ ಮತ್ತು ಇತರ ತುರ್ತು ಸೇವೆಗಳು ಸಹಾಯಕ್ಕಾಗಿ ಘಟನಾ ಸ್ಥಳಕ್ಕೆ ಧಾವಿಸಿವೆ. ಎಲ್ಲಾ ಮೂರು ಟ್ರಕ್‌ಗಳು ಬೆಂಕಿಗೆ ಆಹುತಿಯಾದಾಗ ಅಪಘಾತದ ಸ್ಥಳದಿಂದ ಹೊಗೆ ಉಗುಳುತ್ತಿರುವುದನ್ನು ಪ್ರದೇಶದ ಇತರ ವಿಡಿಯೊಗಳು ತೋರಿಸಿವೆ.

ಅಪಘಾತದ ಸ್ಥಳದಲ್ಲಿ ಕೊಯಮತ್ತೂರು ಮೂಲದ ಸಂತ್ರಸ್ತರ ಸುಟ್ಟ ಅವಶೇಷಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಮೃತರನ್ನು ಕೊಯಮತ್ತೂರಿನ ಟೌನ್ ಹಾಲ್‌ನ ಅಶೋಕ್ ನಗರದ ನಿವಾಸಿಗಳಾದ ಮಂಜು (56), ವಿಮಲ್ (28), ಅನುಷ್ಕಾ (23), ಮತ್ತು ಜೆನ್ನಿಫರ್ (29) ಎಂದು ಗುರುತಿಸಲಾಗಿದೆ.

ಸಂತ್ರಸ್ತರಿಗೆ ಉಂಟಾದ ಗಾಯಗಳು ಮಾರಣಾಂತಿಕವಾಗಿರುವುದರಿಂದ ಅವರ ಸ್ಥಿತಿ ಗಂಭೀರವಾಗಿದೆ. ಹಾಗಾಗಿ ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ವರದಿಗಳಿವೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ಇಂತಹ ಅಪಘಾತಗಳನ್ನು ತಡೆಯಲು ಎಲಿವೇಟೆಡ್ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಧರ್ಮಪುರಿ ಸಂಸದ ಮತ್ತು ಡಿಎಂಕೆ ಮುಖಂಡರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ