ರಾಜಸ್ಥಾನ: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ಶಿರಚ್ಛೇದನ ಮಾಡಿದ್ದ ಹಂತಕರಿಬ್ಬರು ಅರೆಸ್ಟ್

| Updated By: ಆಯೇಷಾ ಬಾನು

Updated on: Jun 28, 2022 | 10:02 PM

ರಾಜಸ್ಥಾನದ ಉದಯಪುರದಲ್ಲಿ ಅಂಗಡಿ ಮಾಲೀಕ ಕನ್ಹಯ್ಯಾ ಲಾಲ್‌ರ ಶಿರಚ್ಛೇದನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸಮಂದ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಉದಯಪುರ ಪೊಲೀಸರು ಬಂಧಿಸಿದ್ದು ಮೊಬೈಲ್ ಸೀಜ್‌ ಮಾಡಲಾಗಿದೆ.

ರಾಜಸ್ಥಾನ: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ಶಿರಚ್ಛೇದನ ಮಾಡಿದ್ದ ಹಂತಕರಿಬ್ಬರು ಅರೆಸ್ಟ್
ಗೌಸ್ ಮೊಹಮ್ಮದ್ ಮತ್ತು ಮೊಹಮ್ಮದ್ ರಿಯಾಜ್ ಅನ್ಸಾರಿ
Follow us on

ರಾಜಸ್ಥಾನ: ಪ್ರವಾದಿ ಮೊಹಮ್ಮದ್ ಪೈಗಂಬರ್(Mohammad Paigambar) ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ(Nupur Sharma) ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಅಂಗಡಿ ಮಾಲೀಕ ಕನ್ಹಯ್ಯಾ ಲಾಲ್‌ರ ಶಿರಚ್ಛೇದನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸಮಂದ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಉದಯಪುರ ಪೊಲೀಸರು ಬಂಧಿಸಿದ್ದು ಮೊಬೈಲ್ ಸೀಜ್‌ ಮಾಡಲಾಗಿದೆ.

ಇನ್ನು ರಾಜಸ್ಥಾನದ ಉದಯಪುರದಲ್ಲಿ 24 ಗಂಟೆ ಕಾಲ ಇಂಟರ್​ನೆಟ್​ ಸ್ಥಗಿತಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇಂಟರ್​ನೆಟ್​ ಬಂದ್ ಮಾಡುವುದಾಗಿ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ಮಾಹಿತಿ ನೀಡಿದ್ದಾರೆ. ಹಾಗೂ ಉದಯಪುರ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹತ್ಯೆಯಾದ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದೆ. ಈ ಘಟನೆ ಸಂಬಂಧ ರಾಹುಲ್‌ ಗಾಂಧಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಉದಯಪುರದಲ್ಲಿ ನಡೆದ ಭೀಕರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಕ್ರೌರ್ಯದಿಂದ ಭಯೋತ್ಪಾದನೆಯನ್ನು ಹರಡುವವರಿಗೆ ತಕ್ಷಣ ಶಿಕ್ಷೆಯಾಗಬೇಕು. ನಾವೆಲ್ಲರೂ ಒಟ್ಟಾಗಿ ದ್ವೇಷವನ್ನು ಸೋಲಿಸಬೇಕು. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ದಯವಿಟ್ಟು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಇನ್ನು ಉದಯಪುರದ ಘಟನೆಗೆ ಪ್ರಿಯಾಂಕ ಗಾಂಧಿ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಇಂತಹ ಹಿಂಸಾತ್ಮಕ ಕೃತ್ಯವನ್ನು ಎಷ್ಟು ಖಂಡಿಸಿದರೂ ಸಾಲದು. ಧರ್ಮದ ಹೆಸರಿನಲ್ಲಿ ದ್ವೇಷ, ಹಿಂಸೆ ಹರಡುವುದು ದೇಶಕ್ಕೆ ಮಾರಕ. ನಾವು ಒಟ್ಟಾಗಿ ಶಾಂತಿ, ಅಹಿಂಸೆಗಾಗಿ ಪ್ರಯತ್ನ ಬಲಪಡಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.

ಘಟನೆ ಹಿನ್ನೆಲೆ
ರಾಜಸ್ಥಾನದ ಉದಯಪುರ ನಗರದ ಮಾಲ್ದಾಸ್ ಸ್ಟ್ರೀಟ್ ನಲ್ಲಿ ಇಂದು ಹಾಡಹಗಲೇ ಭೀಕರ ಹತ್ಯೆ ನಡೆದಿದೆ. ಕನ್ನಯ್ಯಲಾಲ್ ಎಂಬ ಟೈಲರ್ ಅಂಗಡಿ ನಡೆಸುತ್ತಿದ್ದವರನ್ನು ರಫೀಕ್ ಮೊಹಮ್ಮದ್ ಮತ್ತು ಅಬ್ದುಲ್ ಜಬ್ಬಾರ್ ಎಂಬ ದುಷ್ಕರ್ಮಿಗಳು ಹಾಡಹಗಲೇ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾರೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಹೇಳಿಕೆಯನ್ನ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ. ಕನ್ನಯ್ಯಲಾಲ್ ಅವರ ಎಂಟು ವರ್ಷದ ಮಗ ತಂದೆಯ ಮೊಬೈಲ್ ನಿಂದ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಇದಾದ ಬಳಿಕ ಧನ್ಮಂಡಿ ಪೋಲೀಸರು ಕನ್ನಯ್ಯಲಾಲ್ ರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೇ, ಕನ್ನಯ್ಯಲಾಲ್ ಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇದ್ದವು. ಇದರಿಂದ ಜೀವ ಭಯಕ್ಕೊಳಗಾದ ಕನ್ನಯ್ಯಲಾಲ್, ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಆದರೇ, ಪೊಲೀಸರು ಕನ್ನಯ್ಯಲಾಲ್ ಮನವಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕನ್ನಯ್ಯಲಾಲ್ ಗೆ ಪೊಲೀಸ್ ರಕ್ಷಣೆ ನೀಡಿರಲಿಲ್ಲ. ಇಂದು ಪೊಲೀಸ್ ಠಾಣೆಯಿಂದ ಬಂದ ಕನ್ನಯ್ಯಲಾಲ್ ರನ್ನ ಹತ್ಯೆ ಮಾಡಿದ್ದಾರೆ. ರಸ್ತೆಯಲ್ಲಿ ಕನ್ನಯ್ಯಲಾಲ್ ಶವ ಬಿದ್ದಿತ್ತು. ಹತ್ಯೆ ಘಟನೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಎಂ.ಬಿ. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಹತ್ಯೆಯ ಸ್ಥಳದಲ್ಲಿ ರಕ್ತದ ಕೋಡಿಯೇ ಹರಿದಿದೆ.

Published On - 8:26 pm, Tue, 28 June 22