2024ರ ಲೋಕಸಭೆ ಚುನಾವಣೆಗೆ ಡಿಎಂಕೆ, ಕಾಂಗ್ರೆಸ್ ಜೊತೆ ಕೈಜೋಡಿಸಲಿದ್ದಾರೆ ಕಮಲ್ ಹಾಸನ್
ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ದಕ್ಷಿಣ ಚೆನ್ನೈ ಮತ್ತು ಕೊಯಮತ್ತೂರು ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಬ್ಲಾಕ್ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಕಮಲ್ ಹಾಸನ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಚೆನ್ನೈ ಫೆಬ್ರುವರಿ 02: ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮೈಯಂ (NMM) ಮುಖ್ಯಸ್ಥ ಕಮಲ್ ಹಾಸನ್ (Kamal Haasan) 2024 ರ ಲೋಕಸಭೆ ಚುನಾವಣೆಗೆ (Lok sabha Election) ಡಿಎಂಕೆ ಮತ್ತು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2018 ರಲ್ಲಿ ತಮ್ಮ ರಾಜಕೀಯ ಪಕ್ಷ ಪ್ರಾರಂಭಿಸಿದ ಕಮಲ್ ಹಾಸನ್, ಫೆಬ್ರವರಿ 3 ಮತ್ತು 4 ರಂದು ಕ್ರಮವಾಗಿ ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ನಡೆಯಲಿರುವ ಪಕ್ಷದ ಪ್ರಮುಖ ಸಭೆಯ ನಂತರವೇ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಿದ್ದಾರೆ.
ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಹೆಚ್ಚಾಗಿ ದಕ್ಷಿಣ ಚೆನ್ನೈ ಮತ್ತು ಕೊಯಮತ್ತೂರು ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಬ್ಲಾಕ್ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ. ಈ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಕಮಲ್ ಹಾಸನ್ ಸ್ಪರ್ಧಿಸುವ ಸಾಧ್ಯತೆ ಇದೆ.
ಚೆನ್ನೈ ಮತ್ತು ಕೊಯಮತ್ತೂರಿನಲ್ಲಿ ಪಕ್ಷದ ವಲಯ ಕಾರ್ಯಕಾರಿಣಿ ಸಭೆಯು ಮೈತ್ರಿ, ಅಭ್ಯರ್ಥಿಗಳು ಮತ್ತು ಚುನಾವಣಾ ಕೆಲಸದ ಬಗ್ಗೆ ಚರ್ಚೆ ಈ ಮೂರು ಅಜೆಂಡಾಗಳ ಮೇಲೆ ಕೇಂದ್ರೀಕರಿಸುತ್ತದೆ. ಸಭೆಯ ನಂತರ, ಚುನಾವಣೆಗೆ ಮೈತ್ರಿ ಮತ್ತು ಸಮಿತಿಗಳ ರಚನೆಯ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಪ್ರಕಟಿಸಲಾಗುವುದು ಎಂದು ಎಂಎನ್‌ಎಂನ ಹಿರಿಯ ಕಾರ್ಯಕಾರಿಯೊಬ್ಬರು ನ್ಯೂಸ್ 9 ಗೆ ತಿಳಿಸಿದರು.
ಏತನ್ಮಧ್ಯೆ, ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮುಂಬರುವ ಸಂಸತ್ತಿನ ಚುನಾವಣೆಗೆ ಈಗಾಗಲೇ ಸಜ್ಜಾಗಿವೆ, ಅವರು ತಮ್ಮ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆಯನ್ನು ಪ್ರಾರಂಭಿಸಿದ್ದಾರೆ. ಇಂಡಿಯಾ ಬಣದ ಪ್ರಮುಖ ಪಾಲುದಾರರಲ್ಲಿ ಒಂದಾಗಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಈಗಾಗಲೇ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆಯ ಮೊದಲ ಸುತ್ತಿನ ಮಾತುಕತೆಯನ್ನು ಪೂರ್ಣಗೊಳಿಸಿದೆ. ಡಿಎಂಕೆ ಪಕ್ಷವು ಇತರ ಮಿತ್ರಪಕ್ಷಗಳೊಂದಿಗೆ ಫೆಬ್ರವರಿ 4 ಮತ್ತು 5 ರಂದು ಚೆನ್ನೈನಲ್ಲಿ ಮುಂದಿನ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ‘ಕೆಜಿಎಫ್’ ಸ್ಟಂಟ್ ಮಾಸ್ಟರ್ಸ್ ಈಗ ಡೈರೆಕ್ಟರ್; ಕಮಲ್ ಹಾಸನ್ ಜೊತೆ ಕೈ ಜೋಡಿಸಿದ ಸಹೋದರರು
ತಮಿಳುನಾಡಿನ ಡಿಎಂಕೆ ಮಿತ್ರಪಕ್ಷಗಳಲ್ಲಿ ಕಾಂಗ್ರೆಸ್, ಸಿಪಿಎಂ, ಸಿಪಿಐ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಎಂಡಿಎಂಕೆ, ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮುಂತಾದ ಪಕ್ಷಗಳು ಸೇರಿವೆ. ಹಾಗಾಗಿ ಕಮಲ್ ಹಾಸನ್ ಅವರ ಎಂಎನ್‌ಎಂ ಕೂಡ ಈ ಮೈತ್ರಿಗೆ ಸೇರುವ ನಿರೀಕ್ಷೆಯಿದೆ. ಡಿಎಂಕೆಯ ಮೂಲಗಳು ಹೇಳುವಂತೆ ಪಕ್ಷದ ಮಟ್ಟಿಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ 8 ಸ್ಥಾನಗಳು, ಸಿಪಿಎಂ ಮತ್ತು ಸಿಪಿಐಗೆ 2 ಸ್ಥಾನಗಳು, ವಿಸಿಕೆ, ಎಂಎನ್‌ಎಂ, ಎಂಡಿಎಂಕೆಗೆ 2 ಮತ್ತು ಐಯುಎಂಎಲ್‌ಗೆ 1 ಸ್ಥಾನ ಮೀಸಲಿಡಲಾಗುವುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ