ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಕ್ಸಿಜನ್ ದೇಶದಲ್ಲಿ ಲಭ್ಯವಿದೆ ಎಂದು ಸುಪ್ರೀಮ್ ಕೋರ್ಟ್​ಗೆ ತಿಳಿಸಿದ ಕೇಂದ್ರ ಸರ್ಕಾರ

ಇತರ ನಾನಾ ತರದ ಲಸಿಕೆಗಳಿಗೂ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮವನ್ನು ರೂಪಿಸಿ, ದೇಶದ ಎಲ್ಲ ನಾಗರಿಕರಿಗೆ ಅವುಗಳನ್ನು ಉಚಿತವಾಗಿ ನೀಡುವ ಬಗ್ಗೆ ಸರ್ಕಾರ ಅಲೋಚಿಸಬೇಕು ಎಂದು ಸುಪ್ರೀಮ್ ಕೋರ್ಟ್ ಹೇಳಿತು

  • TV9 Web Team
  • Published On - 16:52 PM, 30 Apr 2021
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಕ್ಸಿಜನ್ ದೇಶದಲ್ಲಿ ಲಭ್ಯವಿದೆ ಎಂದು ಸುಪ್ರೀಮ್ ಕೋರ್ಟ್​ಗೆ ತಿಳಿಸಿದ ಕೇಂದ್ರ ಸರ್ಕಾರ
ಸುಪ್ರೀಮ್ ಕೋರ್ಟ್​

ನವದೆಹಲಿ: ಭಾರತದಲ್ಲಿ ಈಗಿನ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಲಭ್ಯವಿದೆ, ಯಾರೂ ಅತಂಕಪಡುವ ಅವಶ್ಯಕತೆಯಿಲ್ಲವೆಂದು ಕೇಂದ್ರ ಸರ್ಕಾರವು ಸರ್ವೋಚ್ಛ ನ್ಯಾಯಾಲಯಕ್ಕೆ ಶುಕ್ರವಾರದಂದು ಹೇಳಿದೆ. ‘ದೇಶದಲ್ಲಿ ವೈದ್ಯಕೀಯ ಆಮ್ಲಜನಕ್ಕೆ ಸಂಬಂಧಿಸಿದಂತೆ ಯಾವುದೇ ಕೊರತೆಯಿಲ್ಲ, ಕೊವಿಡ್​-19 ಪರಿಹಾರ ಕಾರ್ಯಗಳಿಗಾಗಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲಾಗಿದೆ,’ ಎಂದು ಕೊವಿಡ್​-19ಗೆ ಸಂಬಂಧಿಸಿದ ವಿಷಯಗಳಿಗೆ ನಡೆದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರವು ನ್ಯಾಯಲಯಕ್ಕೆ ತಿಳಿಸಿತು. ಇದಕ್ಕೆ ಮೊದಲು ದೇಶದಲ್ಲಿ ಬಡಜನ ಸಹ ಯಾವುದೇ ಸಮಸ್ಯೆ ಇಲ್ಲದೆ ಕೊರಾನಾ ಲಸಿಕೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವ ಹಾಗೆ ರಾಷ್ಟ್ರೀಯ ಲಸಿಕಾ ಮಾದರಿಯನ್ನು ಅನುಸರಿಸುವಂತೆ ಸುಪ್ರೀಮ್ ಕೋರ್ಟ್ ಕೇಂದ್ರಕ್ಕೆ ತಿಳಿಸಿತು. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ಸಮುದಾಯಗಳ ಗತಿಯೇನು? ಅವರನ್ನು ಖಾಸಗಿ ಆಸ್ಪತ್ರೆಗಳ ದಯಾಭಿಕ್ಷೆಗೆ ಒಡ್ಡುತ್ತೀರಾ?’ ಎಂದು ನ್ಯಾಯಾಲಯ ಕೇಳಿತು.

ಇತರ ನಾನಾ ತರದ ಲಸಿಕೆಗಳಿಗೂ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮವನ್ನು ರೂಪಿಸಿ, ದೇಶದ ಎಲ್ಲ ನಾಗರಿಕರಿಗೆ ಅವುಗಳನ್ನು ಉಚಿತವಾಗಿ ನೀಡುವ ಬಗ್ಗೆ ಸರ್ಕಾರ ಅಲೋಚಿಸಬೇಕು ಎಂದು ಸುಪ್ರೀಮ್ ಕೋರ್ಟ್ ಹೇಳಿತು. ಯಾವ ರಾಜ್ಯಕ್ಕೆ ಎಷ್ಷು ಲಸಿಕೆಗಳು ಬೇಕೆನ್ನುವ ವಿಚಾರವನ್ನು ಖಾಸಗಿ ಲಸಿಕೆ ಉತ್ಪಾದಕರ ವಿವೇಚನೆಗೆ ಬಿಡಬಾರದು ಅಂತಲೂ ಟಾಪ್​ ಕೋರ್ಟ್​ ಹೇಳಿತು.

ಲಸಿಕೆಗಳ ದರದ ಬಗ್ಗೆ ನ್ಯಾಯಾಲಯವು ಮತ್ತೊಮ್ಮೆ ಸರ್ಕಾರವನ್ನು ಪ್ರಶ್ನಿಸಿತು. ‘ಶೇಕಡಾ 100ರಷ್ಟು ಲಸಿಕೆಗಳನ್ನು ತಾನೇ ಖರೀದಿಸುಲು ಸರ್ಕಾರ ಯಾಕೆ ಮುಂದಾಗುತ್ತಿಲ್ಲ? ಕೇಂದ್ರಕ್ಕೆ ಒಂದು ದರ ರಾಜ್ಯ ಸರ್ಕಾರಗಳಿಗೆ ಮತ್ತೊಂದು ದರ ಯಾಕೆ? ಇದು ಯಾವ ಸೀಮೆಯ ನ್ಯಾಯ?,’ ಎಂದು ಸುಪ್ರೀಮ್ ಕೋರ್ಟ್ ಕೇಂದ್ರವನ್ನು ಕುಟುಕಿತು.

ದೇಶದ ನಾಗರಿಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ದೂರು ದುಮ್ಮಾನಗಳನ್ನು, ಹೇಳಿಕೊಂಡರೆ ಯಾವುದೇ ರಾಜ್ಯ ಸರ್ಕಾರ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೆಗೆಯಬಾರದು. ‘ಯಾವುದೇ ಮಾಹಿತಿಯನ್ನು ತಡೆಹಿಡಿಯುವುದು ನಮಗೆ ಬೇಕಾಗಿಲ್ಲ. ಅಂಥ ದೂರುಗಳು ಕ್ರಮಕ್ಕೆ ಯೋಗ್ಯ ಎಂದು ರಾಜ್ಯಗಳು ಭಾವಿಸಿದರೆ ಅದನ್ನು ನಾವು ನ್ಯಾಯಾಂಗ ನಿಂದನೆ ಎಂದು ಭಾವಿಸುತ್ತೇವೆ. ಈ ಕುರಿತು ಎಲ್ಲಾ ರಾಜ್ಯಗಳಿಗೆ ಮತ್ತು ಡಿಜಿಪಿಗಳಿಗೆ ಒಂದು ಬಲವಾದ ಸಂದೇಶ ರವಾನೆಯಾಗಲಿ,’ ಎಂದು ಸುಪ್ರೀಮ್ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಹೇಳಿತು.

ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ಕಳೆದ 24 ಗಂಟೆಗಳಲ್ಲಿ 3.86 ಲಕ್ಷ ಹೊಸ ಸೋಂಕಿನ ಪ್ರಕರಣಗಳು ಮತ್ತು 3,498 ಸೋಂಕಿಗೆ ಸಂಬಂಧಿಸಿದ ಸಾವುಗಳು ಭಾರತದಲ್ಲಿ ವರದಿಯಾಗಿವೆ. ಕೊವಿಡ್​ ಪರಿಹಾರಕ್ಕಾಗಿ ಹಲವಾರು ದೇಶಗಳ ಮೂಲಕ ಭಾರೀ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ನೆರವು ಒದಗಿಬರುತ್ತಿರುವ ಬೆನ್ನಲ್ಲೇ ದೇಶದಲ್ಲಿ ಸೋಂಕಿನ ಪ್ರಕರಣಗಳು ಅಂಕೆ ಮೀರಿ ಹಬ್ಬುತ್ತಿವೆ.

ದೆಹಲಿಗೆ 200 ಮೆಟ್ರಿಕ್ ಟನ್​ಗಳಷ್ಟು ಆಮ್ಲಜನಕ ಕೂಡಲೇ ಒದಗಿಸುವಂತೆಯೂ ಸುಪ್ರೀಮ್ ಕೋರ್ಟ್ ಕೇಂದ್ರಕ್ಕೆ ಹೇಳಿದೆ. ದೆಹಲಿಯ ನಾಗರಿಕರಿಗೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಗುರುತರವಾದ ಜವಾಬ್ದಾರಿಯಿದೆ ಎಂದು ನ್ಯಾಯಾಲಯ ಹೇಳಿದೆ.

‘ದೆಹಲಿಗೆ 700 ಮೆಟ್ರಿಕ್​ ಟನ್​ ಆಮ್ಲಜನಕದ ಅವಶ್ಯಕತೆಯಿದೆ ಎನ್ನುವ ಅರಿವಿದ್ದರೂ ಯಾಕೆ ಕೇವಲ 480 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಿದ್ದು?’ ಎಂದು ಸುಪ್ರೀಮ್ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

‘ದೆಹಲಿ ದೇಶದ ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಪ್ರತಿನಿಧಿಸುತ್ತದೆ. ದೆಹಲಿ ಎಲ್ಲ ರಾಜ್ಯಗಳಿಂದ ಇಲ್ಲಿಗೆ ಬರುವ ಜನರ ಜನರನ್ನು ಪ್ರತಿನಿಧಿಸುತ್ತದೆ. ದೆಹಲಿಗೆ ತನ್ನ ಸಹಾಯ ತಾನು ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ್ಯೂ ನೀವು ಜನರ ಪ್ರಾಣಗಳನ್ನು ಉಳಿಸಬೇಕಿದೆ. ದೆಹಲಿಯೆಡೆ ಸರ್ಕಾರ ವಿಶೇಷ ಜವಾಬ್ದಾರಿಯನ್ನು ಹೊಂದಿದೆ, ಎಂದು ಸುಪ್ರೀಮ್ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತು.

ಇದನ್ನೂ ಓದಿ: ರಾಷ್ಟ್ರರಾಜಧಾನಿಯಲ್ಲಿ ವೈದ್ಯಕೀಯ ಆಕ್ಸಿಜನ್​ ಅಭಾವದ ಭೀಕರತೆ; ಜೈಪುರ ಗೋಲ್ಡನ್​ ಆಸ್ಪತ್ರೆಯಲ್ಲಿ 25 ರೋಗಿಗಳು ಸಾವು