
ನವದೆಹಲಿ, ಅಕ್ಟೋಬರ್ 12: ಮಹಿಳಾ ಪತ್ರಕರ್ತರಿಲ್ಲದೆ ಮಾಧ್ಯಮಗೋಷ್ಠಿಯನ್ನು ನಡೆಸಿ ಭಾರತೀಯ ಪತ್ರಿಕಾ ಕ್ಷೇತ್ರ ಮತ್ತು ವಿಪಕ್ಷಗಳ ಟೀಕೆಗೆ ಗುರಿಯಾದ ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ಅವರು ಇದೀಗ ತಪ್ಪು ಸರಿಪಡಿಸುವ ನಡೆ ಇಟ್ಟಿದ್ದಾರೆ. ಇಂದು ಭಾನುವಾರ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಪುರುಷರ ಜೊತೆಗೆ ಮಹಿಳಾ ಪತ್ರಕರ್ತರೂ ಒಳಗೊಂಡಿದ್ದರು. ತಾನು ಹಿಂದೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹಿಳೆಯರನ್ನು ಹೊರಗಿಡುವ ಉದ್ದೇಶ ಇರಲಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
‘ಪತ್ರಿಕಾಗೋಷ್ಠಿ ವಿಚಾರದ ಬಗ್ಗೆ ಹೇಳುವುದಾದರೆ, ಅದು ಬಹಳ ಕಡಿಮೆ ಅವಧಿಯಲ್ಲಿ ಆಯೋಜನೆಯಾಗಿತ್ತು. ಕೆಲವೇ ಮಾಧ್ಯಮ ಪ್ರತಿನಿಧಿಗಳ ಪಟ್ಟಿ ಮಾಡಲಾಯಿತು. ಮಹಿಳೆಯರು ಈ ಪಟ್ಟಿಯಲ್ಲಿ ಇಲ್ಲದೇ ಇದ್ದದ್ದು ಉದ್ದೇಶಪೂರ್ವಕವಲ್ಲ. ಅಥವಾ ತಾಂತ್ರಿಕ ಸಮಸ್ಯೆಯೂ ಅಲ್ಲ’ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವರು ಇಂದು ಭಾನುವಾರ ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಅಫ್ಘಾನಿಸ್ತಾನ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಹೆಸರು ಉಲ್ಲೇಖಿಸಿದ್ದಕ್ಕೆ ಪಾಕಿಸ್ತಾನ ಆಕ್ಷೇಪ
ಇದೇ ಶುಕ್ರವಾರದಂದು (ಅ. 10) ಅಮೀರ್ ಖಾನ್ ಮುತ್ತಕಿ ಅವರು ದೆಹಲಿಯಲ್ಲಿರುವ ಅಫ್ಘಾನ್ ರಾಯಭಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅಲ್ಲಿ ಮಹಿಳಾ ಪತ್ರಕರ್ತರನ್ನು ಗೋಷ್ಠಿಗೆ ಆಹ್ವಾನಿಸಲಾಗಿರಲಿಲ್ಲ. ಇದಕ್ಕೆ ಭಾರತದ ಮಾಧ್ಯಮ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಭಾರತೀಯ ನೆಲದಲ್ಲಿ ಅಪ್ಪಟ ಲೈಂಗಿಕ ತಾರತಮ್ಯ ನಡೆದಿದೆ ಎಂದು ಟೀಕಿಸಿವೆ. ಈ ವಿಚಾರದಲ್ಲಿ ಭಾರತ ಸರ್ಕಾರದ ವಿರುದ್ಧವೂ ಟೀಕೆಗಳು ವ್ಯಕ್ತವಾಗಿವೆ.
ವಿಪಕ್ಷಗಳು ಕೂಡ ಈ ವಿಚಾರದಲ್ಲಿ ಕಟು ಟೀಕೆ ಮಾಡುತ್ತಿವೆ. ಅಫ್ಗಾನಿಸ್ತಾನೀ ಸಚಿವರ ನಡೆಯನ್ನು ಕಠಿಣ ಶಬ್ದಗಳಲ್ಲಿ ಟೀಕಿಸಿರುವ ವಿಪಕ್ಷಗಳ ನಾಯಕರು, ಭಾರತ ಸರ್ಕಾರ ಹಾಗು ಪ್ರಧಾನಿಗಳ ಮೇಲೂ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಆಪರೇಷನ್ ಬ್ಲೂ ಸ್ಟಾರ್ ಒಂದು ಮಿಸ್ಟೇಕ್, ಇಂದಿರಾ ಗಾಂಧಿ ತಮ್ಮ ಜೀವವನ್ನೇ ತೆತ್ತರು; ಪಿ. ಚಿದಂಬರಂ
‘ನಮ್ಮ ದೇಶದಲ್ಲಿ ಪ್ರತಿಯೊಂದು ರಂಗದಲ್ಲೂ ಪಾಲ್ಗೊಳ್ಳಲು ಮಹಿಳೆಯರಿಗೆ ಸಮಾನ ಹಕ್ಕು ಇದೆ. ಈ ರೀತಿ ತಾರತಮ್ಯ ನಡೆಯುತ್ತಿದ್ದರೂ ನೀವು ಮೌನವಾಗಿರುವುದು ನಿಮ್ಮ ನಾರಿಶಕ್ತಿ ಘೋಷಣೆಗಳನ್ನು ಪ್ರಶ್ನಿಸುವಂತಾಗುತ್ತದೆ’ ಎಂದು ರಾಹುಲ್ ಗಾಂಧಿ ಖಂಡಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರ, ಮಹುವಾ ಮೊಯಿತ್ರಾ ಮೊದಲಾದವರೂ ಕೂಡ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 10ರಂದು ನಡೆದ ಅಫ್ಗಾನ್ ಸಚಿವ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಪಾತ್ರ ಏನೂ ಇರಲಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
ಅಫ್ಗಾನಿಸ್ತಾನದಲ್ಲಿ ಈಗಿನ ತಾಲಿಬಾನ್ ಸರ್ಕಾರ ನಾಲ್ಕು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿನ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಪಾಕಿಸ್ತಾನದ ಜೊತೆ ನಿರಂತರ ಸಂಘರ್ಷದಲ್ಲಿರುವ ಅಫ್ಗಾನಿಸ್ತಾನದ ಸಚಿವರು ಭಾರತಕ್ಕೆ ಭೇಟಿ ನೀಡಿ ಕಾಶ್ಮೀರ ವಿಚಾರ ಇತ್ಯಾದಿ ಪ್ರಸ್ತಾಪ ಮಾಡಿ ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿರುವ ಬೆಳವಣಿಗೆ ಗಮನಾರ್ಹವೇ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ