ಕ್ರೀಡಾಂಗಣದಲ್ಲಿ ತರಬೇತಿ ನಿಲ್ಲಿಸಿ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಐಎಎಸ್​ ಅಧಿಕಾರಿ ಲಡಾಖ್​ಗೆ ವರ್ಗ, ಪತ್ನಿ ಅರುಣಾಚಲ ಪ್ರದೇಶಕ್ಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 27, 2022 | 7:24 AM

ಕ್ರೀಡಾಂಗಣವನ್ನು ಖಿರ್​ವಾರ್ ಮತ್ತು ಅವರ ಪತ್ನಿ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಗೃಹ ಇಲಾಖೆಯು ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು.

ಕ್ರೀಡಾಂಗಣದಲ್ಲಿ ತರಬೇತಿ ನಿಲ್ಲಿಸಿ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಐಎಎಸ್​ ಅಧಿಕಾರಿ ಲಡಾಖ್​ಗೆ ವರ್ಗ, ಪತ್ನಿ ಅರುಣಾಚಲ ಪ್ರದೇಶಕ್ಕೆ
ದೆಹಲಿ ಕ್ರೀಡಾಂಗಣದಲ್ಲಿ ವಾಕ್ ಮಾಡುತ್ತಿರುವ ಐಎಎಸ್ ಅಧಿಕಾರಿ ಸಂಜೀವ್ ಖಿರ್​ವಾರ್
Follow us on

ದೆಹಲಿ: ಕ್ರೀಡಾಂಗಣದಲ್ಲಿ ತರಬೇತಿ ನಿಲ್ಲಿಸುವಂತೆ ಸೂಚಿಸಿ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಐಎಎಸ್ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ವಿಧಿಸಲಾಗಿದೆ. ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ. ದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ (Thyagaraj Stadium) ಅಧಿಕಾರಿಯಿಂದ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿರುವ ಕುರಿತು ‘ಇಂಡಿಯನ್ ಎಕ್ಸ್​ಪ್ರೆಸ್’ ದಿನಪತ್ರಿಕೆಯು ವರದಿ ಪ್ರಕಟಿಸಿತ್ತು.

ಅಧಿಕಾರಿಗಳ ವರ್ಗಾವಣೆ ಕುರಿತು ಆದೇಶ ಹೊರಡಿಸಿರುವ ಗೃಹ ಇಲಾಖೆಯು ‘1994ನೇ ಬ್ಯಾಚ್ ಐಎಎಸ್ ಅಧಿಕಾರಿ ಸಂಜೀವ್ ಖಿರ್​ವಾರ್​ ಅವರನ್ನು ಲಡಾಖ್​ಗೆ ಮತ್ತು ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ’ ಎಂದು ಹೇಳಿದೆ. ತ್ಯಾಗರಾಜ್ ಕ್ರೀಡಾಂಗಣದ ಸೌಲಭ್ಯಗಳನ್ನು ಖಿರ್​ವಾರ್ ಮತ್ತು ಅವರ ಪತ್ನಿ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಗೃಹ ಇಲಾಖೆಯು ದೆಹಲಿಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು ಎಂದು ಮೂಲಗಳು ಹೇಳಿವೆ.

ಈ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ನಿನ್ನೆ (ಮೇ 26) ವರದಿ ಸಲ್ಲಿಸಿದ್ದರು. ಈ ವರದಿ ಸಲ್ಲಿಕೆಯ ನಂತರ ಗೃಹ ಇಲಾಖೆಯು ಐಎಎಸ್ ಅಧಿಕಾರಿಯನ್ನು ವರ್ಗಾಯಿಸುವ ನಿರ್ಧಾರ ಪ್ರಕಟಿಸಿದೆ. ಸಂಜೀವ್ ಖಿರ್​ವಾರ್ ಪ್ರಸ್ತುತ ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ (ಕಂದಾಯ) ಸೇವೆ ಸಲ್ಲಿಸುತ್ತಿದ್ದರು. ಕ್ರೀಡಾಪಟುಗಳಿಂದ ಸೌಲಭ್ಯ ಕಿತ್ತುಕೊಂಡಿದ್ದ ಅಧಿಕಾರಿಯ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ರಾಜ್ಯ ಸರ್ಕಾರ ನಿರ್ವಹಿಸುವ ಎಲ್ಲ ಸೌಲಭ್ಯಗಳು ರಾತ್ರಿ 10 ಗಂಟೆಯವರೆಗೆ ತೆರೆದಿರಬೇಕು’ ಎಂದು ಸೂಚಿಸಿದ್ದರು.

‘ವಾತಾವರಣದಲ್ಲಿ ಉಷ್ಣಾಂಶವು ಹೆಚ್ಚಾಗಿರುವುದರಿಂದ ಹಗಲುಹೊತ್ತಿನಲ್ಲಿ ಕ್ರೀಡಾ ತರಬೇತಿ ಪಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಎಲ್ಲ ಕ್ರೀಡಾಂಗಣಗಳು ರಾತ್ರಿ 10 ಗಂಟೆಯವರೆಗೆ ತರಬೇತಿ ಮುಂದುವರಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:22 am, Fri, 27 May 22