Bharat Drone Mahotsav 2022: ಭಾರತದ ಅತಿದೊಡ್ಡ ಡ್ರೋನ್ ಉತ್ಸವಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ
ಭಾರತ್ ಡ್ರೋನ್ ಮಹೋತ್ಸವ 2022 ದೆಹಲಿಯ ಪ್ರಗತಿ ಮೈದಾನದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಇದು ಎರಡು ದಿನಗಳ ಕಾರ್ಯಕ್ರಮವಾಗಿದ್ದು, ಮೇ 28ರಂದು ಮುಕ್ತಾಯಗೊಳ್ಳಲಿದೆ.
ನವದೆಹಲಿ: ಭಾರತದ ಅತಿದೊಡ್ಡ ಡ್ರೋನ್ ಉತ್ಸವಕ್ಕೆ (Bharat Drone Mahotsav) ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ಡ್ರೋನ್ ಮಹೋತ್ಸವವನ್ನು ಉದ್ಘಾಟಿಸಿದ ಬಳಿಕ ಕಿಸಾನ್ ಡ್ರೋನ್ ಪೈಲಟ್‌ಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ ಮತ್ತು ಓಪನ್ ಏರ್ ಡ್ರೋನ್ ಪ್ರದರ್ಶನಗಳನ್ನು ವೀಕ್ಷಿಸಲಿದ್ದಾರೆ. ಭಾರತದ ಅತಿದೊಡ್ಡ ‘ಭಾರತ್ ಡ್ರೋನ್ ಮಹೋತ್ಸವ 2022‘ ಇಂದು (ಮೇ 27) ಮತ್ತು ನಾಳೆ (ಮೇ 28) ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮವಾಗಿದೆ.
ಪ್ರಧಾನಿ ಮೋದಿ ಇಂದು ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತದ ಅತಿದೊಡ್ಡ ಡ್ರೋನ್ ಉತ್ಸವವಾದ ‘ಭಾರತ್ ಡ್ರೋನ್ ಮಹೋತ್ಸವ 2022’ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಹೇಳಿಕೆಯಲ್ಲಿ ತಿಳಿಸಿದೆ. ಬಳಿಕ ಪ್ರಧಾನಮಂತ್ರಿ ಮೋದಿ ಕಿಸಾನ್ ಡ್ರೋನ್ ಪೈಲಟ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಹಾಗೇ, ತೆರೆದ ಗಾಳಿಯ ಡ್ರೋನ್ ಪ್ರದರ್ಶನಗಳನ್ನು ವೀಕ್ಷಿಸುತ್ತಾರೆ ಮತ್ತು ಡ್ರೋನ್ ಪ್ರದರ್ಶನ ಕೇಂದ್ರದಲ್ಲಿ ಸ್ಟಾರ್ಟ್‌ಅಪ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ. (Source)
ಈ ಡ್ರೋನ್ ಉತ್ಸವದಲ್ಲಿ ಸರ್ಕಾರಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟ್‌ಅಪ್‌ಗಳನ್ನು ಒಳಗೊಂಡ 1,600ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 70ಕ್ಕೂ ಹೆಚ್ಚು ಪ್ರದರ್ಶಕರು ಡ್ರೋನ್‌ಗಳ ವಿವಿಧ ಬಳಕೆಯ ಪ್ರಕರಣಗಳನ್ನು ಪ್ರದರ್ಶಿಸುತ್ತಾರೆ.
ಇದನ್ನೂ ಓದಿ: Bharat Drone Mahotsav 2022 ಭಾರತ್ ಡ್ರೋನ್ ಮಹೋತ್ಸವವನ್ನು ನಾಳೆ ಉದ್ಘಾಟಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಮೇ 27ರಂದು ಬೆಳಿಗ್ಗೆ 10 ಗಂಟೆಗೆ ನಾನು ಭಾರತ್ ಡ್ರೋನ್ ಮಹೋತ್ಸವ 2022ರಲ್ಲಿ ಪಾಲ್ಗೊಳ್ಳುತ್ತೇನೆ. ಈ ವೇದಿಕೆಯು ಈ ವಲಯದಲ್ಲಿ ಭಾರತದ ಉಪಸ್ಥಿತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುತ್ತದೆ. ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ ಕಾರ್ಯಕ್ರಮವನ್ನು ವೀಕ್ಷಿಸಲು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದರು.
At 10 AM tomorrow, 27th May I will take part in the Bharat Drone Mahotsav 2022. This forum brings together key stakeholders including StartUps with the aim of increasing India’s presence in the sector. I’d urge all those interested in tech and innovation to watch the programme.
— Narendra Modi (@narendramodi) May 26, 2022
ಈ ಡ್ರೋನ್ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ವೃತ್ತಿಪರ ಡ್ರೋನ್ ಅನ್ನು ಹಾರಿಸಲಿದ್ದಾರೆ ಎಂದು ವರದಿಯಾಗಿದೆ. ಭಾರತ್ ಡ್ರೋನ್ ಮಹೋತ್ಸವದಲ್ಲಿ ಮೊದಲ ದಿನವಾದ ಇಂದು 100ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ಹಾಗೇ, 20ಕ್ಕೂ ಹೆಚ್ಚು ಸಚಿವರು ಭಾಗವಹಿಸುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 am, Fri, 27 May 22