ತನಗೆ ಗುಜರಾತಿಗೆ ಹೋಗಲು ಬಿಡುತ್ತಿಲ್ಲ. ತನ್ನನ್ನು ಕಂಡರೆ ಕೇಂದ್ರ ಸರಕಾರಕ್ಕೆ ಹೆದರಿಕೆ. ಆ ಕಾರಣಕ್ಕಾಗಿಯೇ ಅಲ್ಲಿ ರೈತರ ಸಭೆಯನ್ನು ಮಾಡಲು ಕೊಡುತ್ತಿಲ್ಲ ಎಂದು ದೂರಿ ದೆಹಲಿಯಲ್ಲಿ ಗುಡುಗಿದ್ದ ಭಾರತೀಯ ಕಿಸಾನ್ ಯೂನಿಯನ್ನ ರಾಕೇಶ್ ಟಿಕಾಯತ್ಗೆ ಕೊನೆಗೂ ಗುಜರಾತಿಗೆ ಹೋಗಿ ರೈತರ ಸಭೆ ಮಾಡಲು ಗುಜರಾತ್ ಸರ್ಕಾರ ಅನುಮತಿ ನೀಡಿತ್ತು. ಏಪ್ರಿಲ್ 4 ಮತ್ತು 5 ಕ್ಕೆ ಗುಜರಾತ್ಗೆ ಹೋಗಿ ಹಲವೆಡೆ ಕಡೆ ಸಭೆ ಮಾಡಿದ ಟಿಕಾಯತ್ ಅವರಿಗೆ ಕೆಲವು ನೂರರ ಸಂಖ್ಯೆಯಲ್ಲಿದ್ದ ಬೆಂಬಲಿಗರನ್ನು ನೋಡಿ ಆಘಾತವಾಗಿತ್ತು. ಟಿಕಾಯತ್ ಮತ್ತೆ ಟೀಕಾ ಪ್ರಹಾರ ಮಾಡಿದ್ದಾರೆ. ಇಲ್ಲಿನ ಸರಕಾರ, ತನ್ನ ಸಭೆಗೆ ಜನ ಬರದಿರುವಂತೆ ಮಾಡಿದೆ ಎಂದೆಲ್ಲ ದೂರಿದ್ದಾರೆ.
ಅಲ್ಲಿ ನಡೆದಿದ್ದಾದರೂ ಏನು?
ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರಾಕ್ಟರ್ ರ‍್ಯಾಲಿ ತರಹವೇ ಅಹ್ಮದಾಬಾದ್ನಲ್ಲಿ ಕೂಡ ಟ್ರಾಕ್ಟರ್ ರ‍್ಯಾಲಿ ಮಾಡುತ್ತೇನೆ. ಅಲ್ಲಿ ಮಾತನಾಡುವಾಗ ಸರಕಾರಕ್ಕೆ ಚಾಟಿ ಬೀಸಿದ ಅವರು, ಒಮ್ಮೆ ಪೊಲೀಸರು ಬ್ಯಾರಿಕೇಡ್ ಹಾಕಿದರೆ ಅದನ್ನು ಕಿತ್ತೊಗೆಯಲು ಸಿದ್ಧ ಎಂದು ಗುಡುಗಿದರು. ಟಿಕಾಯತ್ ಪ್ರಕಾರ, ಗುಜರಾತಿನ ರೈತರು ಅಲ್ಲಿನ ಸರಕಾರದ ಮೇಲೆ ಖುಷಿಯಿಂದ ಇಲ್ಲ. ಹಾಗಾಗಿ ಅವರು ದೀರ್ಘ ಹೋರಾಟಕ್ಕೆ ತಯಾರಾಗಿದ್ದಾರೆ ಎಂದು ಹೇಳಿದರು. ಇವೆಲ್ಲ ನಡೆಯುವಾಗ ಅವರೆದುರು ಕೆಲವೇ ನೂರರ ಸಂಖ್ಯೆಯಲ್ಲಿ ರೈತರು ಸೇರಿದ್ದರು.
ಯಾಕೆ ರೈತರಿಂದ ಸ್ಪಂದನೆ ಸಿಕ್ಕಿಲ್ಲ?
ದೇಶ್ ಗುಜರಾತ್ ಎಂಬ ಮಾಧ್ಯಮ ಸಂಸ್ಥೆ ಮಾಡಿದ ವರದಿ ಪ್ರಕಾರ ಇದಕ್ಕೆ ನಾಲ್ಕು ಮುಖ್ಯ ಕಾರಣಗಳಿವೆ. ಟಿಕಾಯತ್ ಭಾರತ-ವಿರೋಧ ಭಾವನೆ ಬರುವಂತಹ ಹೇಳಿಕೆ ನೀಡುತ್ತಿರುವುದು ಮುಖ್ಯ ಕಾರಣವಾಗಿದೆ. ಉದಾಹರಣೆಗೆ ಬೇರೆ ಕಡೆ ಹೇಳಿದಂತೆ ಗುಜರಾತಿನಲ್ಲಿಯೂ ಸಹ ಅವರು, ಭಾರತೀಯ ಆಹಾರ ನಿಗಮದ ಕಚೇರಿಯ ಮೇಲೆ ರೈತರು ದಾಳಿ ಮಾಡಬೇಕು, ಇದಕ್ಕೆ ಹಿಂದೆ ಮುಂದೆ ನೋಡಬಾರದು. ಎಲ್ಲೆಲ್ಲಿ ಸಾಧ್ಯವೋ ವಿದ್ಯುತ್ ಸಂಪರ್ಕವನ್ನು ಕಡಿದುಹಾಕಿ. ರಸ್ತೆ ತಡೆ ಮಾಡಿ ಆಗ ಯಾವ ವಾಹನವೂ ಓಡಾಡದಂತೆ ತಡೆಗಟ್ಟಿ ಎಂದು ಹೇಳಿದ್ದಾರೆ.
ಟಿಕಾಯತ್ರ ಈ ಮಾತುಗಳು ಸಭೆಯಲ್ಲಿ ಸೇರಿದ್ದ ರೈತರಲ್ಲಿ ಗೊಂದಲವುಂಟು ಮಾಡಿದೆ. ಈ ರೀತಿ ಮಾಡಲು ಪ್ರಯತ್ನಿಸಿದರೆ ಕೇಸು ಬೀಳಬಹುದು ಎಂಬ ಭಯ ರೈತರಿಗೆ. ಆಗ ಅವರ ನೆರವಿಗೆ ಯಾರು ಬರುತ್ತಾರೆಂಬ ಆತಂಕ ರೈತರಲ್ಲಿ ಇರುವುದು ರೈತರನ್ನು ಮಾತನಾಡಿಸಿದಾಗ ‘ದೇಶ್ ಗುಜರಾತ್’ಗೆ ಗೊತ್ತಾಗಿದೆ.
ಇದರ ಜೊತೆಗೆ, ದೇಶದ ಇತರ ಸ್ಥಳಗಳಂತೆ ಇದೀಗ ಗುಜರಾತಿನಲ್ಲಿ ಕೂಡ ಕೆಲವು ಬೆಳೆಗಳ ಕೊಯ್ಲಿನ ಸಮಯ. ಹಾಗಾಗಿ ರೈತರು ಜಾಸ್ತಿ ಸಂಖ್ಯೆಯಲ್ಲಿ ಅಲ್ಲಿ ಸೇರಲೇ ಇಲ್ಲ. ಮತ್ತೆ ಎಂಎಸ್ಪಿ ವಿಚಾರದಲ್ಲಿ ಕೂಡ ಟಿಕಾಯತ್ ಜನರ ಹಾದಿ ತಪ್ಪಿಸಲು ಪ್ರಯತ್ನಿಸಿದ್ದು ರೈತರ ಗಮನಕ್ಕೆ ಬಂತು ಎಂದು ಕೆಲವು ರೈತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೊದಲು ಬಂಧಿತ ರೈತರನ್ನು ಬಿಡುಗಡೆ ಮಾಡಿ..ಆಮೇಲೆ ಮಾತುಕತೆಗೆ ಬರುತ್ತೇವೆ: ಪ್ರಧಾನಿ ಮೋದಿಗೆ ರಾಕೇಶ್ ಟಿಕಾಯತ್ ಪ್ರತ್ಯುತ್ತರ
ಇದನ್ನೂ ಓದಿ: ಸರ್ಕಾರ ನಮ್ಮ ಬೇಡಿಕೆಗಳನ್ನು ಐದಾರು ತಿಂಗಳಲ್ಲಿ ಈಡೇರಿಸಬಹುದು: ರೈತ ನಾಯಕ ರಾಕೇಶ್ ಟಿಕಾಯತ್