ಹರಿದ್ವಾರ: ಉತ್ತರಾಖಂಡದ ಮಸ್ಸೂರಿ (Mussoorie) ಬಳಿ ಇರುವ ಕೆಂಪ್ಟಿ(Kempty Falls) ಜಲಪಾತದ ಬಳಿ ಮಾಸ್ಕ್ ಧರಿಸದೆ ನೂರಾರು ಜನರು ಎಂಜಾಯ್ ಮಾಡುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿತ್ತು. ಕೊರೋನಾ (Coronavirus) ಭೀತಿಯ ನಡುವೆಯೂ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಪ್ರವಾಸಕ್ಕೆ ತೆರಳಿ, ಜಲಪಾತ ವೀಕ್ಷಿಸಲು ಮುಗಿಬಿದ್ದವರ ವರ್ತನೆಗೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಂಪ್ಟಿ ಜಲಪಾತ ವೀಕ್ಷಿಸಲು ಒಂದು ಬಾರಿ 50 ಜನರಿಗೆ ಮಾತ್ರ ಅವಕಾಶ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಇದರ ನಡುವೆ ಹರಿದ್ವಾರದಲ್ಲೂ ಸಾವಿರಾರು ಭಕ್ತರು ತಂಡೋಪತಂಡವಾಗಿ ಗಂಗಾ ನದಿಯ (Ganga River) ಪಕ್ಕದಲ್ಲಿ ಸೇರಿರುವ ವಿಡಿಯೋವೊಂದು ವೈರಲ್ ಆಗಿದೆ.
ಭಾರತದ ಪ್ರಮುಖ ಧಾರ್ಮಿಕ ಸ್ಥಳವಾಗಿರುವ ಹರಿದ್ವಾರದ ಹರ್ ಕಿ ಪೌರಿ ಘಾಟ್ ದಡದಲ್ಲಿ ಸಾವಿರಾರು ಭಕ್ತರು ನಿಂತಿರುವ ಫೋಟೋ, ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಮತ್ತೊಂದು ರೀತಿಯ ಆತಂಕ ಸೃಷ್ಟಿಸಿದೆ. ಇದಕ್ಕೆ ಜನರಿಂದ ಭಾರೀ ಆಕ್ರೋಶವೂ ವ್ಯಕ್ತವಾಗುತ್ತಿದೆ. ತಿಂಗಳಾನುಗಟ್ಟಲೆ ಲಾಕ್ಡೌನ್ ಮಾಡಿದರೂ, ಕೊರೋನಾದಿಂದ ಕೆಲವು ತಿಂಗಳ ಹಿಂದೆ ದಿನಕ್ಕೆ ಸಾವಿರಾರು ಜನರು ಸಾವನ್ನಪ್ಪಿದರೂ ಜನರು ಇನ್ನೂ ಬುದ್ಧಿ ಕಲಿತಿಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
Uttarakhand | Devotees throng to Har ki Pauri in Haridwar as state govt eases COVID-19 restrictions.
“We feel like we have come out of jail after 2 yrs. There is a huge crowd. We are not scared of COVID-19. We have come here before 3rd wave,” says a tourist pic.twitter.com/o7nhZ84WdS
— ANI (@ANI) July 9, 2021
ಉತ್ತರಾಖಂಡದಲ್ಲಿ ವೀಕೆಂಡ್ ಲಾಕ್ಡೌನ್ ತೆರವುಗೊಳಿಸಿದರೆ ಬೇರೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಅದರಿಂದ ಡೆಲ್ಟಾ ಪ್ಲಸ್ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಬುಧವಾರವಷ್ಟೇ ನೈನಿತಾಲ್ ಹೈಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಡೆಲ್ಟಾ ರೂಪಾಂತರಿ ಸೋಂಕು ಮಾತ್ರವಲ್ಲದೆ ಕಪ್ಪ ರೂಪಾಂತರಿ ವೈರಸ್ ಕೂಡ ಉತ್ತರ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಉತ್ತರಾಖಂಡದಲ್ಲಿ ಎರಡು ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಕೂಡ ಪತ್ತೆಯಾಗಿವೆ. ಹೀಗಾಗಿ, ಕೊರೋನಾ ತಪಾಸಣೆಯನ್ನು ಕೂಡ ಹೆಚ್ಚಿಸಲಾಗಿದೆ.
ಲಾಕ್ಡೌನ್ ಬಳಿಕ ನೈನಿತಾಲ್ ಹಿಲ್ ಸ್ಟೇಷನ್ಗಳಿಗೆ ವೀಕೆಂಡ್ನಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಮೇಲೆ ನಿಯಂತ್ರಣ ಹೇರಲು ಇದೀಗ ನೈನಿತಾಲ್ ಜಿಲ್ಲಾಡಳಿತ ದ್ವಿಚಕ್ರ ವಾಹನ ಸವಾರರ ಪ್ರವೇಶಕ್ಕೆ ನಿಷೇಧ ಹೇರಿದೆ. ಮುಸ್ಸೂರಿಯಲ್ಲಿ ಕೂಡ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು ಬಾರಿ 50 ಜನರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ.
2 ದಿನಗಳ ಹಿಂದಷ್ಟೇ ಮಸ್ಸೂರಿಯ ಕೆಂಪ್ಟಿ ಜಲಪಾತದ ಕೆಳಗೆ ನೂರಾರು ಜನರು ಮಾಸ್ಕ್ ಇಲ್ಲದೆ ನೀರಿನಲ್ಲಿ ಆಟವಾಡುತ್ತಾ, ಫೋಟೋ ತೆಗೆಸಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಮನಾಲಿಯಲ್ಲಿ ಕೂಡ ಪ್ರವಾಸಿಗರು ಕಿಕ್ಕಿರಿದು ಸೇರಿದ್ದ ವಿಡಿಯೋಗಳು ಹರಿದಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕೊರೋನಾಗೆ ಮತ್ತೆ ಬಹಿರಂಗ ಆಹ್ವಾನ ನೀಡಬೇಡಿ ಎಂದು ಜನರಿಗೆ ಮನವಿ ಮಾಡಿದೆ.
ಇದನ್ನೂ ಓದಿ: Char Dham Yatra Suspended: ಕುಂಭಮೇಳದ ಬಳಿಕ ಎಚ್ಚೆತ್ತುಕೊಂಡ ಉತ್ತರಾಖಂಡ್ ಸರ್ಕಾರ; ಚಾರ್ ಧಾಮ್ ಯಾತ್ರೆ ರದ್ದು
ಇದನ್ನೂ ಓದಿ: ‘ಕೊರೊನಾ ಸೋಂಕಿಗೂ ಬದುಕುವ ಹಕ್ಕಿದೆ, ಅದು ಕೂಡಾ ಒಂದು ಜೀವಿ’: ಉತ್ತರಾಖಂಡದ ಮಾಜಿ ಸಿಎಂ ರಾವತ್