ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾದ ಉತ್ತರ ಪ್ರದೇಶ; ಎರಡು ಮಕ್ಕಳ ನೀತಿ ಉಲ್ಲಂಘಿಸಿದರೆ ಸರ್ಕಾರಿ ಸೌಲಭ್ಯಗಳಿಲ್ಲ, ನೌಕರಿಯೂ ಸಿಗೋಲ್ಲ
Uttar Pradesh: ಬಡತನ ರೇಖೆಗಿಂತ ಕೆಳಗೆ ಇದ್ದು, ಸ್ವಯಂಪ್ರೇರಿತರಾಗಿ ಒಂದೇ ಮಗುವನ್ನು ಹೊಂದುವ ದಂಪತಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ.
ಭಾರತದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ (Uttar Pradesh) ಇದೀಗ ಜನಸಂಖ್ಯೆ ನಿಯಂತ್ರಣಾ ನೀತಿ ಜಾರಿಗೊಳಿಸಲು ಮುಂದಾಗಿದೆ. ಈ ಸಂಬಂಧ ಮೊದಲ ಕರಡನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಜನರಿಂದ ಪ್ರತಿಕ್ರಿಯೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಒಂದು ಅಥವಾ ಎರಡು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಪ್ರೋತ್ಸಾಹಕ ಸೌಲಭ್ಯ ನೀಡುವ ಮತ್ತು ಎರಡಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದುವವರಿಗೆ ಕೆಲವು ಸೌಲಭ್ಯಗಳನ್ನು ಕಡಿತ ಮಾಡುವ ಬಗ್ಗೆ ಈ ಮಸೂದೆಯಲ್ಲಿ ಉಲ್ಲೇಖವಾಗಿದೆ.
ಈ ಎರಡು ಮಕ್ಕಳ ನೀತಿ ಜಾರಿಯಾದ ಕ್ಷಣದಿಂದ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದುವ ಯಾವುದೇ ಕುಟುಂಬ ಸರ್ಕಾರದ ಕಲ್ಯಾಣ ಯೋಜನೆಗಳಿಂದ ನಿರ್ಬಂಧಿತಗೊಳ್ಳುತ್ತದೆ. ಅಂದರೆ ಅವರಿಗೆ ಸರ್ಕಾರ ಅಭಿವೃದ್ಧಿ ಯೋಜನೆಗಳು ಸಿಗುವುದಿಲ್ಲ. ಇಬ್ಬರಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಅಷ್ಟೇ ಅಲ್ಲ, ರಾಜ್ಯ ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸುವ ಅರ್ಹತೆಯನ್ನೂ ಅವರು ಕಳೆದುಕೊಳ್ಳುತ್ತಾರೆ. ಈಗಾಗಲೇ ಮೂರು ಮಕ್ಕಳನ್ನು ಹೊಂದಿರುವವರೂ ಇದೆಲ್ಲ ನಿಯಮಗಳು ಅನ್ವಯ ಆಗುತ್ತದೆ. ಸರ್ಕಾರಿ ಸೌಲಭ್ಯಗಳು ಮರೀಚಿಕೆ ಆಗಲಿವೆ.
ಪ್ರೋತ್ಸಾಹಕಗಳೇನು? ಇನ್ನು ಈ ಎರಡು ಮಕ್ಕಳ ನೀತಿಯನ್ನು ಹೆಚ್ಚೆಚ್ಚು ಜನರು ಅಳವಡಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಕೆಲವು ಪ್ರೋತ್ಸಾಹಕ ಸೌಲಭ್ಯಗಳನ್ನೂ ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಅದರ ಅನ್ವಯ ಈ ಎರಡು ಮಕ್ಕಳ ನೀತಿಯನ್ನು ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡು, ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಗಾಗುವ ಕುಟುಂಬಕ್ಕೆ ಕೆಲವು ಸೌಕರ್ಯಗಳನ್ನು ಸರ್ಕಾರ ನೀಡಲಿದೆ. ಹಾಗೇ ನೀರು, ವಿದ್ಯುತ್ ದರ ಮತ್ತು ಮನೆ ತೆರಿಗೆಗಳಲ್ಲಿ ರಿಯಾಯಿತಿ ಕೊಡಲಿದೆ. ಇನ್ನು ಒಂದೇ ಮಗುವನ್ನು ಹೊಂದಲು ಸ್ವಯಂಪ್ರೇರಿತವಾಗಿ ನಿರ್ಧಾರ ತೆಗೆದುಕೊಳ್ಳುವ ದಂಪತಿಗೆ, ಆ ಮಗುವಿಗೆ 20 ವರ್ಷ ತುಂಬುವವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಹಾಗೂ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು. ಶಿಕ್ಷಣದಲ್ಲೂ ಸಹ ಅಂಥ ಮಕ್ಕಳಿಗೆ ಆದ್ಯತೆ ಇರುತ್ತದೆ. ಪದವಿ ಹಂತದವರೆಗೂ ಉಚಿತ ಶಿಕ್ಷಣ, ಉನ್ನತ ವ್ಯಾಸಂಗಕ್ಕಾಗಿ ಸ್ಕಾಲರ್ಶಿಪ್ ಸೌಕರ್ಯ ನೀಡಲಾಗುವುದು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಬಡತನ ರೇಖೆಗಿಂತ ಕೆಳಗೆ ಇದ್ದು, ಸ್ವಯಂಪ್ರೇರಿತರಾಗಿ ಒಂದೇ ಮಗುವನ್ನು ಹೊಂದುವ ದಂಪತಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ. ಆ ಮಗು ಗಂಡಾಗಿದ್ದರೆ ದಂಪತಿಗೆ 80,000 ರೂ. ಮತ್ತು ಹೆಣ್ಣಾಗಿದ್ದರೆ 1 ಲಕ್ಷ ರೂ.ನೀಡುವುದಾಗಿ ಮಸೂದೆ ವಿವರಿಸಿದೆ.
ಇದನ್ನೂ ಓದಿ: SBI savings account: ಈ ಉಳಿತಾಯ ಖಾತೆದಾರರಿಗೆ ಎಸ್ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್
No Government Job for those with more than two kids in Uttarpradesh Draft introduced
Published On - 2:49 pm, Sat, 10 July 21