Kannada News National Agnipath Protest: 2 Coaches Of Passenger Train Set On Fire In Bihar
Agnipath Protest: ಅಗ್ನಿಪಥ್ ಯೋಜನೆಗೆ ವಿರೋಧ; ಬಿಹಾರದಲ್ಲಿ 2 ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
ಬಿಹಾರದಲ್ಲಿ ಇಂದು ಪ್ರತಿಭಟನಾಕಾರರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ಪ್ರತಿಭಟನೆಗಳ ಹತ್ತು ಅಂಶಗಳು ಇಲ್ಲಿವೆ.
ಅಗ್ನಿಪಥ್ ಪ್ರತಿಭಟನೆ ವೇಳೆ ರೈಲಿಗೆ ಬೆಂಕಿ
Image Credit source: NDTV
Follow us on
ಪಾಟ್ನಾ: ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ನೀತಿಯಾದ ಅಗ್ನಿಪಥ್ ಯೋಜನೆಯ (Agnipath Scheme) ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದರ ನಡುವೆಯೇ ಬಿಹಾರದಲ್ಲಿ (Bihar) ಇಂದು ಬೆಳಗ್ಗೆ ಉದ್ರಿಕ್ತ ಗುಂಪೊಂದು ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದೆ. ಜಮ್ಮು ತಾವಿ ಎಕ್ಸ್‌ಪ್ರೆಸ್ ರೈಲಿನ 2 ಕೋಚ್‌ಗಳಿಗೆ ಹಾಜಿಪುರ್-ಬರೌನಿ ರೈಲು ಮಾರ್ಗದ ಮೊಹಿಯುದ್ದಿನಗರ ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಿಹಾರದಲ್ಲಿ ಇಂದು ಪ್ರತಿಭಟನಾಕಾರರು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ಪ್ರತಿಭಟನೆಗಳ ಹತ್ತು ಅಂಶಗಳು ಇಲ್ಲಿವೆ:
ಅಗ್ನಿಪಥ್ ಯೋಜನೆಗೆ ನೇಮಕಾತಿ ಪ್ರಕ್ರಿಯೆಯ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ವಿಚಾರ ಹೊರಬೀಳುವ ಮೊದಲೇ ಇಂದು ಮುಂಜಾನೆ ಬಿಹಾರದಲ್ಲಿ ಎರಡು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ.
ಹೊಸ ಸೇನಾ ನೇಮಕಾತಿ ನೀತಿಯ ವಿರುದ್ಧ ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಬಿಜೆಪಿ ಆಡಳಿತವಿರುವ ಹರಿಯಾಣ ಮತ್ತು ಮಧ್ಯಪ್ರದೇಶಕ್ಕೂ ಪ್ರತಿಭಟನೆ ವ್ಯಾಪಿಸಿದೆ. ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್‌ವರೆಗೆ, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಬಿಜೆಪಿ ಆಡಳಿತದ ಇಂದೋರ್‌ವರೆಗೆ, ಸಶಸ್ತ್ರ ಪಡೆಗಳಲ್ಲಿ ಉದ್ಯೋಗಕ್ಕಾಗಿ ನೂರಾರು ಯುವ ಆಕಾಂಕ್ಷಿಗಳು ಬೀದಿಗಿಳಿದು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಹಾನಿಗೊಳಿಸಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಜನರ ಆಕ್ರೋಶಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಅಗ್ನಿವೀರರ ಗರಿಷ್ಠ ವಯೋಮಿತಿಯನ್ನು 21ರಿಂದ 23ಕ್ಕೆ ಏರಿಕೆ ಮಾಡಿದೆ.
ಬಿಹಾರ, ಮಧ್ಯಪ್ರದೇಶದ ಗ್ವಾಲಿಯರ್, ಜಮ್ಮು ಮತ್ತು ಹರಿಯಾಣದ ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದೆ. ರೈಲುಗಳನ್ನು ಸುಡುವ ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯಗಳನ್ನು ನಾಶಪಡಿಸುವ ದೃಶ್ಯಗಳು ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಉಂಟುಮಾಡಿದವು. ಬಿಹಾರದಲ್ಲಿ ಇಂದು ಸಮಸ್ತಿಪುರದಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಇದನ್ನೂ ಓದಿ
ಈ ಮಧ್ಯೆ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳ ಮುಖ್ಯಮಂತ್ರಿಗಳಾದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶದ ಶಿವರಾಜ್ ಚೌಹಾಣ್, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಅವರು ಸೇವೆಯಿಂದ ನಿವೃತ್ತರಾದವರಿಗೆ ರಾಜ್ಯಗಳಲ್ಲಿ ಅವಕಾಶಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಭಾರತದ ಸೇನಾ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇತ್ತೀಚೆಗೆ ಅಗ್ನಿಪಥ್ ಯೋಜನೆಯನ್ನು ಪ್ರಾರಂಭಿಸಿದೆ. ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ದೇಶಾದ್ಯಂತ ಹಲವೆಡೆ ಭಾರೀ ಪ್ರತಿಭಟನೆಗಳು ನಡೆದು, ಹಿಂಸಾಚಾರಕ್ಕೆ ತಿರುಗಿದೆ.
ಅಗ್ನಿಪಥ್ ಯೋಜನೆಯ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿದ ರಕ್ಷಣಾ ಸಚಿವಾಲಯವು ಕಳೆದ ಎರಡು ವರ್ಷಗಳಲ್ಲಿ ಯಾವುದೇ ನೇಮಕಾತಿ ನಡೆಯದ ಕಾರಣ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ. ದೇಶದ ಹಲವು ಭಾಗಗಳಲ್ಲಿ ಅಗ್ನಿಪಥಕ್ಕೆ ಸಂಬಂಧಿಸಿದ ಪ್ರತಿಭಟನೆಗಳು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯ ಮೂಲಕ ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಗೆ 46,000 ಸೈನಿಕರನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ.
ಈ ಯೋಜನೆಯ ಪ್ರಾರಂಭದ ಪರಿಣಾಮವಾಗಿ, ಎಲ್ಲಾ ನೇಮಕಾತಿ ಅಥವಾ ಅಗ್ನಿವೀರರ ಪ್ರವೇಶದ ವಯಸ್ಸನ್ನು 17ರಿಂದ 21 ವರ್ಷಗಳು ಎಂದು ನಿಗದಿಪಡಿಸಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಗರಿಷ್ಠ ವಯೋಮಿತಿಯನ್ನು 23 ವರ್ಷಗಳವರೆಗೆ ವಿಸ್ತರಿಸಲಾಗಿದೆ.
ಭಾರತದ 1.38 ಮಿಲಿಯನ್ ಬಲದ ಸಶಸ್ತ್ರ ಪಡೆಗಳಿಗೆ ನೇಮಕಾತಿಯ ಪರೀಕ್ಷೆಯನ್ನು ಸರ್ಕಾರ ಘೋಷಿಸಿದ ನಂತರ ಮಂಗಳವಾರ ಹಿಂಸಾಚಾರ ಭುಗಿಲೆದ್ದಿತ್ತು. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ 10 ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಅಗ್ನಿಪಥ್ ಯೋಜನೆಯ ಬಗ್ಗೆ ಸ್ಪಷ್ಟನೆಯನ್ನೂ ನೀಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ