ಅಗ್ನಿಪಥ್ ಯೋಜನೆ ದೇಶದಲ್ಲಿ ತರಬೇತಿ ಪಡೆದ ಉಗ್ರರನ್ನು ಹೊಂದುವಂತೆ ಮಾಡುತ್ತದೆ: ರಾಜಸ್ಥಾನದ ಸಚಿವ
ಅಗ್ನಿವೀರರಾಗಿ ಮೂರ್ನಾಲ್ಕು ವರ್ಷ ಕೆಲಸ ಮಾಡಿ ನಂತರ ನಿರುದ್ಯೋಗಿಯಾಗುವುದರ ಬಗ್ಗೆ ಯುವಕರು ಚಿಂತಿತರಾಗಿದ್ದಾರೆ. ಕೇಂದ್ರ ಸರ್ಕಾರ ಯುವ ಜನಾಂಗದ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಸಚಿವರು ಹೇಳಿದ್ದಾರೆ
ಅಗ್ನಿಪಥ್ ಯೋಜನೆ (Agnipath scheme) ಬಗ್ಗೆ ರಾಜಸ್ಥಾನದ (Rajasthan) ಕಂದಾಯ ಸಚಿವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅಗ್ನಿಪಥ್ ಯೋಜನೆಯು ದೇಶದಲ್ಲಿ ತರಬೇತಿ ನೀಡಿದ ಉಗ್ರರನ್ನು ಹೊಂದುವಂತೆ ಮಾಡುತ್ತದೆ ಎಂದು ಸಚಿವ ರಾಮಲಾಲ್ ಜಾಟ್ (Ramlal Jat) ಹೇಳಿದ್ದಾರೆ. ಒಂದು ವರ್ಷ ಕೆಲಸ ಮಾಡಿದ ಸಂಸದ ಮತ್ತು ಶಾಸಕರಿಗೆ ಪಿಂಚಣಿ ಸಿಗುತ್ತಿರುವಾಗ ಅಗ್ನಿವೀರರಿಗೆ ಪಿಂಚಣಿ ಯಾಕಿಲ್ಲ? ಅಗ್ನಿವೀರರಾಗಿ ಮೂರ್ನಾಲ್ಕು ವರ್ಷ ಕೆಲಸ ಮಾಡಿ ನಂತರ ನಿರುದ್ಯೋಗಿಯಾಗುವುದರ ಬಗ್ಗೆ ಯುವಕರು ಚಿಂತಿತರಾಗಿದ್ದಾರೆ. ಕೇಂದ್ರ ಸರ್ಕಾರ ಯುವ ಜನಾಂಗದ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಸಚಿವರು ಹೇಳಿದ್ದಾರೆ. ಐದು ವರ್ಷ, ನಾಲ್ಕು ವರ್ಷ, ಮೂರು ವರ್ಷ ಎಂದ ನೀವು ಯುವಕರಿಗೆ ಕೆಲಸ ನೀಡುತ್ತಿದ್ದೀರಿ. ಕಡೇ ಪಕ್ಷ ಅವರಿಗೆ ಪಿಂಚಣಿ ನೀಡಿ ಎಂದಿದ್ದಾರೆ ಜಾಟ್. ಸೇನಾಪಡೆಯಲ್ಲಿ ನಾಲ್ಕು ವರ್ಷಗಳ ಕಾಲ ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳುವ ಯೋಜನೆಯಾದ ಅಗ್ನಿಪಥ್ ಯೋಜನೆಯನ್ನು ಜೂನ್ 14ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಹದಿನೇಳೂವರೆ ವರ್ಷದಿಂದ ಹಿಡಿದು 21ರ ಹರೆಯದ ಯುವಕರನ್ನು ನಾಲ್ಕು ವರ್ಷಗಳ ಕಾಲ ಸೇನಾಪಡೆಯಲ್ಲಿ ನೇಮಕ ಮಾಡುವ ಯೋಜನೆ ಇದಾಗಿದ್ದು, ಹೀಗೆ ನೇಮಕವಾಗುವವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ.
ಸಮಯ ಬಂದಾಗ ಇಲ್ಲಿನ ಯುವಕರಿಗೆ ಅರ್ಥವಾಗುತ್ತದೆ. ವಿರೋಧ ಪಕ್ಷವಾದ ನಾವು ಪ್ರತಿಯೊಂದು ವೇದಿಕೆಯಲ್ಲಿಯೂ ಈ ಯೋಜನೆಯನ್ನು ವಿರೋಧಿಸುತ್ತೇವೆ. ರಾಹುಲ್ ಗಾಂಧಿಯವರು ದೇಶದ ಸಮಸ್ಯೆ ಬಗ್ಗೆ ಹೇಳುತ್ತಿದ್ದಾರೆ. ಆ ಸಮಸ್ಯೆಗಳ ಬಗ್ಗೆ ನಾವು ಮಾತನಾಡುತ್ತೇವೆ ಎಂದು ಜಾಟ್ ಹೇಳಿದ್ದಾರೆ