
ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಸನಾಥಲ್ ಸರ್ಕಲ್ ಸಮೀಪದ ನವಾಪುರ ಗ್ರಾಮದಲ್ಲಿದ್ದ ‘ಇಂಗ್ರಾಮ್ ಮೈಕ್ರೋ’ ಕಂಪನಿಯ ಅಂಗಡಿಯಲ್ಲಿ ತಡರಾತ್ರಿ ಭಾರಿ ಕಳ್ಳತನ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಸುಮಾರು ಮೂವರು ಮುಸುಕುಧಾರಿ ಕಳ್ಳರು, ಅಂಗಡಿಯ ಹಿಂಬಾಗಿಲನ್ನು ಮುರಿದು ಅಂದಾಜು 1 ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ಎಲೆಕ್ಟ್ರಾನಿಕ್ ಸಾಧನಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಚಾಂಗೋದರ್ ಠಾಣೆ ಪೊಲೀಸರು ಸಿಸಿಟಿವಿ ಫೂಟೇಜ್ ಆಧರಿಸಿ ತನಿಖೆ ತೀವ್ರಗೊಳಿಸಿದ್ದಾರೆ.
ಪೋಲೀಸರ ಪ್ರಾಥಮಿಕ ಮಾಹಿತಿಯಂತೆ, ಕಳ್ಳರು ಅಂಗಡಿಯ ಹಿಂಭಾಗದಲ್ಲಿದ್ದ ಹೊಲದ ಕಡೆಯಿಂದ ಬಂದು, ಹಿಂಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಕಳ್ಳರು ತಮ್ಮ ಗುರುತು ಸಿಗದಂತೆ ತಲೆ ಹಾಗೂ ಮುಖಕ್ಕೆ ಬಟ್ಟೆ ಸುತ್ತಿಕೊಂಡಿರುವುದು ಕಂಡುಬಂದಿದೆ. ಕಳ್ಳತನ ನಡೆಸಿದ ನಂತರ ಆರೋಪಿಗಳು ರಸ್ತೆ ಮಾರ್ಗವಾಗಿ ಪರಾರಿಯಾಗಿದ್ದಾರೆ.
ಆಕ್ಟೋಬರ್ 21ರ ತಡರಾತ್ರಿ 1:00 ರಿಂದ 2:30 ರ ನಡುವೆ ಅಂಗಡಿಯ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಹಿಂಬಾಗಿಲು ಮುರಿದಿರುವುದು ಹಾಗೂ ಒಳಗಿದ್ದ ಪಾರ್ಸಲ್‌ಗಳು ಹಾನಿಗೊಳಗಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅವರು ಜಗತ್‌ಪುರದ ಗೋದ್ರೇಜ್ ಗಾರ್ಡನ್ ಸಿಟಿಯಲ್ಲಿ ವಾಸಿಸುತ್ತಿರುವ ಅಂಗಡಿಯ ವ್ಯವಸ್ಥಾಪಕರಾದ ಸುಧೀರ್ ನಾಯರ್ ಅವರಿಗೆ ವಿಷಯ ತಿಳಿಸಿದ್ದಾರೆ. ಸುಧೀರ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಕೋಟಿ ಮೌಲ್ಯದ ಗ್ಯಾಜೆಟ್‌ಗಳು ಕಳವಾಗಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಇಡ್ಲಿಗೆ ದತ್ತೂರಿ ಬೀಜ ಹಾಕಿ ಪತಿಯ ಕೊಲೆಗೆ ಯತ್ನ: ಇಡ್ಲಿ ತಿಂದರೂ ಸಾಯದಿದ್ದಾಗ ಪತ್ನಿ ಮಾಡಿದ್ದೇನು ನೋಡಿ
ಕಳ್ಳರು ಅತ್ಯಂತ ಬೆಲೆಬಾಳುವ ಆಪಲ್ ಹಾಗೂ ಇತರ ಪ್ರಮುಖ ಕಂಪನಿಗಳ ಗ್ಯಾಜೆಟ್‌ಗಳನ್ನಷ್ಟೇ ಗುರಿಯಾಗಿಸಿಕೊಂಡು ದೋಚಿದ್ದಾರೆ. ಕಳವಾದ ವಸ್ತುಗಳಲ್ಲಿ 40 ಐಫೋನ್ 17 ಸೀರಿಸ್, 30 ಐಫೋನ್ 16, 36 ಆಪಲ್ ವಾಚ್‌ಗಳು, 15 ಡೆಲ್ ಲ್ಯಾಪ್‌ಟಾಪ್‌ಗಳು, 11 ಹೆಚ್‌ಪಿ ಲ್ಯಾಪ್‌ಟಾಪ್‌ಗಳು, 20 ಐಪ್ಯಾಡ್ ಕೀಬೋರ್ಡ್‌ಗಳು, ಐಪ್ಯಾಡ್ ಪ್ರೊ ಸಾಧನಗಳು ಹಾಗೂ ಲ್ಯಾಪ್‌ಟಾಪ್ ಬ್ಯಾಗ್‌ಗಳು ಸೇರಿವೆ. ದೋಚಲಾದ ಒಟ್ಟು ಸಾಮಗ್ರಿಗಳ ಒಟ್ಟು ಮೌಲ್ಯ ಅಂದಾಜು 1 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಹಮದಾಬಾದ್ ಗ್ರಾಮಾಂತರ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ನೀಲಂ ಗೋಸ್ವಾಮಿ ಮಾತನಾಡಿ, ಆರೋಪಿಗಳ ಪತ್ತೆಗೆ ಹಲವು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂಗಡಿಯ ಒಳರಚನೆ ಹಾಗೂ ಸೆಕ್ಯೂರಿಟಿ ವ್ಯವಸ್ಥೆಯ ಬಗ್ಗೆ ಮುಂಚಿತವಾಗಿಯೇ ಚೆನ್ನಾಗಿ ತಿಳಿದಿರುವ ಯಾರೋ ಒಬ್ಬರ (Insider) ನೇರ ಕೈವಾಡ ಇರುವ ಸಾಧ್ಯತೆಯನ್ನು ಪೋಲೀಸರು ಬಹಿರಂಗಪಡಿಸಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಳವಾಗಿ ವಿಶ್ಲೇಷಿಸುತ್ತಿದ್ದು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳರ ಜಾಲವನ್ನು ಮಟ್ಟಹಾಕಲು ಜಾಲ ಬೀಸಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ