
ನಿಕೋಲ್, ನವೆಂಬರ್ 05: ವ್ಯಕ್ತಿಯೊಬ್ಬ ರಸ್ತೆಯಲ್ಲೇ ಪತ್ನಿಗೆ ಚಾಕುವಿನಿಂದ ಎಂಟು ಬಾರಿ ಇರಿದಿರುವ ಭಯಾನಕ ಘಟನೆ ಅಹಮದಾಬಾದಿನ ನಿಕೋಲ್ನಲ್ಲಿ ನಡೆದಿದೆ. ಸೋಮವಾರ ಸಂಜೆ ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಹೆಂಡತಿ(Wife)ಯನ್ನು ಎಂಟು ಬಾರಿ ಇರಿದಿದ್ದಾನೆ.ತನ್ನ ಸಹೋದರನ ಆತ್ಮಹತ್ಯೆಗೆ ಅವಳೇ ಕಾರಣ ಎಂದು ಆರೋಪಿಸಿದ್ದಾನೆ. ಕೂಡಲೇ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಪವಾಡಸದೃಶವಾಗಿ ಬದುಕುಳಿದಿದ್ದಾರೆ, ನಂತರ ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ನಿಕೋಲ್ ಪೊಲೀಸರ ಪ್ರಕಾರ, ಸಂತ್ರಸ್ತೆ ಕೃಷ್ಣನಗರದ ವಿಷ್ಣು ಪಾರ್ಕ್‌ನ ಮಾಯಾಂಕ್ ಪಟೇಲ್ ಅವರನ್ನು ಸುಮಾರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಆರಂಭದಲ್ಲಿ, ಆಕೆಯ ವೈವಾಹಿಕ ಜೀವನವು ಶಾಂತಿಯುತವಾಗಿತ್ತು, ಆದರೆ ಕೆಲವೇ ತಿಂಗಳುಗಳಲ್ಲಿ, ಆಕೆಯ ಪತಿ ಮತ್ತು ಅತ್ತೆ-ಮಾವಂದಿರು ಮನೆಯ ಕ್ಷುಲ್ಲಕ ವಿಷಯಗಳಿಗೆ ಕಿರುಕುಳ ಮತ್ತು ಹಲ್ಲೆ ಮಾಡಲು ಪ್ರಾರಂಭಿಸಿದ್ದರು ಎಂದು ಆಕೆ ತಿಳಿಸಿದ್ದಾರೆ.
ಮಯಾಂಕ್ ಅವರ ಕಿರಿಯ ಸಹೋದರ ಯಾವುದೋ ಕಾರಣಗಳಿಂದಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಅದಕ್ಕೂ ಈಕೆಯೇ ಕಾರಣ ಎಂದು ಮನೆಯಲ್ಲಿ ಎಲ್ಲರೂ ದೂರಿದ್ದರು.ಪದೇ ಪದೇ ನಡೆದ ವಾದಗಳು ಮತ್ತು ಹಲ್ಲೆಗಳ ನಂತರ, ಮಹಿಳೆಯನ್ನು ತನ್ನ ಮನೆಯಿಂದ ಹೊರಗೆ ಹಾಕಲಾಯಿತು ಮತ್ತು ಆಕೆ ತನ್ನ ಹೆತ್ತವರೊಂದಿಗೆ ಇದ್ದರು.
ಮತ್ತಷ್ಟು ಓದಿ: ಪತ್ನಿ ಮೇಲೆ ಸಂಶಯ: ಲೇಡಿ ಕಂಡಕ್ಟರ್ಗೆ ಮೂರು ಬಾರಿ ಇರಿದು ಕೊಲೆ ಮಾಡಿದ ಪೊಲೀಸಪ್ಪ
ಸೋಮವಾರ ಸಂಜೆ, ಮಹಿಳೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಖೋಡಿಯಾರ್‌ನಗರ ದೂಧ್‌ಸಾಗರ್ ಸೊಸೈಟಿ ಬಳಿ ಬಂದಾಗ, ಮಾಯಾಂಕ್ ಆಕೆಯ ಎದುರು ಬಂದು ನಿಂತಿದ್ದ. ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಳ್ಳಲು ಅವಳೇ ಕಾರಣ ಎಂದು ಎಲ್ಲರೆದುರು ಕೂಗಾಡಿದ್ದಾನೆ. ಆಕೆ ಸಹಾಯಕ್ಕಾಗಿ ಕೂಗುತ್ತಿರುವಾಗ ರಸ್ತೆಯಲ್ಲಿ ಆಕೆಯನ್ನು ಎಳೆದುಕೊಂಡು ಹೋಗಲು ಪ್ರಾರಂಭಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೆಲವು ಕ್ಷಣಗಳ ನಂತರ, ಮಾಯಾಂಕ್ ಹರಿತವಾದ ಚಾಕುವಿನಿಂದ ಮಹಿಳೆಗೆ ಎಂಟು ಬಾರಿ ಇರಿದಿದ್ದಾನೆ.ಆಕೆಯ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಆಕೆಯ ಕಿರುಚಾಟ ಕೇಳಿ, ಅಲ್ಲಿದ್ದವರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸಂತ್ರಸ್ತೆಯ ಸಹಾಯಕ್ಕೆ ಧಾವಿಸಿದ್ದರು. ಅವರು ಗಾಯಗೊಂಡ ಮಹಿಳೆಯನ್ನು ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಿಕೋಲ್ ಪೊಲೀಸರು ಆಕೆಯ ಪತಿ ಮಾಯಾಂಕ್ ಪಟೇಲ್ ಮತ್ತು ಅತ್ತೆ ಭಾವನಾ ಪಟೇಲ್ ವಿರುದ್ಧ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ