ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ: ಈ ಪತ್ನಿ ಗಲಾಟೆ ಪತಿ ಹತ್ಯೆ ಸ್ಕೆಚ್ ತನಕ
ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ ಎಂದು ಈ ಹಿಂದಿನಿಂದ ಒಂದು ಮಾತಿದೆ. ಆದ್ರೆ, ಈಗ ಗಂಡ ಹೆಂಡ್ತಿ ಜಗಳ ಕೆಲವೊಂದು ಕೊಲೆಯಲ್ಲಿ ಅಂತ್ಯವಾಗಿದ್ರೆ, ಇನ್ನೂ ಕೆಲ ಗಲಾಟೆಗಳಿಂದ ಸಂಸಾರವೇ ಮುರಿದುಬಿದ್ದಿರುವ ಪ್ರಕರಣಗಳು ಸಹ ಇವೆ. ಅದರಂತೆ ಮೈಸೂರಿನಲ್ಲಿ ಪತ್ನಿಯೇ ಗಂಡನನ್ನು ಹತ್ಯೆಗೆ ಸ್ಕೆಚ್ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲರ ಮುಂದೆ ಪತಿಯೇ ಪ್ರತ್ಯಕ್ಷ ದೈವ ಎಂದು ನಾಟಕವಾಡುತ್ತಿದ್ದ ಪತ್ನಿಯೊಬ್ಬಳು ಸಿನಿಮೀಯ ರೀತಿಯಲ್ಲಿ ಪತಿಗೆ ಹಾಕಿದ್ದ ಸ್ಕೆಚ್ ಮಿಸ್ ಆಗಿ ಸುಂದರಿ ಲಾಕ್ ಆಗಿದ್ದಾಳೆ.

ಮೈಸೂರು, (ಅಕ್ಟೋಬರ್ 30): ಕೆಲವೊಂದು ಪ್ರಕರಣಗಳನ್ನು ನೋಡುತ್ತಿದ್ದರೆ ಹೆಂಡತಿ ಗಂಡನನ್ನ ನಂಬಂಗಿಲ್ಲ. ಗಂಡ ಹೆಂಡತಿಯನ್ನ ನಂಬಂಗಿಲ್ಲ. ಇವತ್ತಿನ ಕಾಲದಲ್ಲಿ ನಂಬಿಕೆ ಅನ್ನೋದೇ ಹೊರಟು ಹೋದಂತಿದೆ. ಯಾರು ಎಷ್ಟೊತ್ತಿಗೆ, ಯಾವಾಗ ಮುಹೂರ್ತ ಇಡ್ತಾರೋ ಅನ್ನೋದೇ ದೊಡ್ಡ ಆತಂಕವಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಪ್ರಕರಣವೊಂದು ನಡೆದಿದೆ. ಗಂಡನ ಹತ್ಯೆಗೆ ಸ್ಕೆಚ್ ಹಾಕಿದ್ದು, ಕೊನೆಗೆ ಅದು ಫೇಲ್ ಆಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ನಂಜನಗೂಡಿನ ರಾಜೇಂದ್ರ ಹಾಗೂ ಪತ್ನಿ ಸಂಗೀತಾ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ಇಬ್ಬರ ನಡುವಿನ ಭಿನ್ನಾಭಿಪ್ರಾಯ ವೈಮನಸ್ಯ ಹಿನ್ನಲೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಸಂಸಾರದಲ್ಲಿ ವ್ಯತ್ಯಾಸವಾಗಿ ಗಲಾಟೆಯನ್ನೇ ಕಾರಣವಾಗಿಟ್ಟುಕೊಂಡು ಪತಿಯನ್ನು ಕೊಲೆ ಮಾಡಲು ದರೋಡೆ ನಾಟಕವಾಡಿದ್ದ ಪಾಪಿ ಪತ್ನಿಯ ಅಸಲಿಯತ್ತು ಪೊಲೀಸರಿಂದ ಬಟಾಬಯಲಾಗಿದೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ: ಮಹಾರಾಷ್ಟ್ರದ ಯುವಕನನ್ನ ಬೀದರ್ನಲ್ಲಿ ಹೇಗೆ ಹೊಡೆದು ಕೊಂದ್ರು ನೋಡಿ
ಅಕ್ಟೋಬರ್ 25 ರಂದು ರಾಜೇಂದ್ರ ತನ್ನ ಪತ್ನಿ ಸಂಗೀತಾಳನ್ನ ಕರೆದುಕೊಂಡು ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ಸಮಯದಲ್ಲಿ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ಪೋಲೋ ಕಾರು ಬೈಕ್‌ಗೆ ಅಡ್ಡವಾಗಿ ನಿಂತಿದೆ. ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಮೊದಲು ಸ್ಕೂಟರ್ ಬೀಳಿಸಿದ್ದಾನೆ. ರಾಜೇಂದ್ರ ಹಾಗೂ ಸಂಗೀತಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಾರಿನಿಂದ ಕೆಳಗೆ ಇಳಿದ ಮತ್ತೊಬ್ಬ ರಾಜೇಂದ್ರ ಜೊತೆ ಜಗಳ ಮಾಡಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಗೀತಾ ಬಳಿ ಬಂದು ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಒಬ್ಬ ಹರಿತವಾದ ಆಯುಧದಿಂದ ರಾಜೇಂದ್ರಗೆ ತಿವಿದಿದ್ದಾನೆ. ಅದೇ ವೇಳೆ ಅಲ್ಲಿಗೆ ಒಂದು ವಾಹನ ಬಂದಿದಲ್ಲಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ರಾಜೇಂದ್ರಗೆ ಗಂಭೀರ ಗಾಯವಾಗಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ತನಿಖೆ ಮಾಡುವ ವೇಳೆ ಬೀಳಿಸುವ ವಿಚಾರ ಬೆಳಕಿಗೆ ಬಂದಿದೆ. ಅಸಲಿಗೆ ಇದೆಲ್ಲಾ ರಾಜೇಂದ್ರ ಕೊಲೆ ಮಾಡಲು ಆತನ ಪತ್ನಿ ಸಂಗೀತಾ ಹಾಕಿದ್ದ ಸ್ಕೆಚ್ ಎಂದು ಗೊತ್ತಾಗಿದೆ. ಸಂಗೀತ ತನ್ನ ಸಹೋದರ ಸಂಜಯ್ ಬಳಸಿಕೊಂಡು ಕೊಲೆಗೆ ಸ್ಕೆಚ್ ಹಾಕಿದ್ದಳು. ಇದಕ್ಕೆ ಸಂಜಯ್ ಸ್ನೇಹಿತ ವಿಘ್ನೇಶ್ ಹಾಗೂ ಒಬ್ಬ ಬಾಲಕನನ್ನು ಬಳಿಸಿಕೊಂಡಿದ್ದಳು.
ಇವರೆಲ್ಲಾ ಸೇರಿ ದಿನಕ್ಕೆ 2 ಸಾವಿರದಂತೆ ಪೋಲೋ ಕಾರನ್ನು ಬಾಡಿಗೆ ಪಡೆದಿದ್ದರು. ಸಹೋದರ ಸಂಜಯ್ ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕನ ಹತ್ಯೆಗೆ ಸಂಚು ರೂಪಿಸಿದ್ದರು. ರಾತ್ರಿ 7.30 ರ ಸಮಯದಲ್ಲಿ ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪರಿಚಿತರಂತೆ ಅಟ್ಯಾಕ್ ಮಾಡಿದ್ದರು. ಸಂಗೀತಾ ಸಹ ಸಾಕಷ್ಟು ನಟಿಸಿದ್ದಳು. ಡ್ರಾಗರ್ ನಿಂದ ಚುಚ್ಚಿ ರಾಜೇಂದ್ರ ರನ್ನ ಮುಗಿಸುವ ಸ್ಕೆಚ್ ನಡೆದಿದೆ. ಅಷ್ಟರಲ್ಲಿ ವಾಹನವೊಂದು ಬಂದ ಪರಿಣಾಮ ಹತ್ಯೆ ಸ್ಕೆಚ್ ಮಿಸ್ ಆಗಿದೆ.
ವಿಚಾರಣೆ ವೇಳೆ ಸಂಗೀತಾ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರು ಬಾಲಕ ಸೇರಿ ಸಂಜಯ್ ವಿಘ್ನೇಶ್ ಹಾಗೂ ಬಾಲಕನನ್ನು ಅರೆಸ್ಟ್ ಮಾಡಿದ್ದು, ಸದ್ಯ ಎಲ್ಲರೂ ಈಗ ಜೈಲು ಪಾಲಾಗಿದ್ದಾರೆ. ಇದೆಲ್ಲಾ ಏನೇ ಇರಲಿ ಪತಿ- ಪತ್ನಿ ನಡುವಿನ ವಿರಸಕ್ಕೆ ಪಾಪಿ ಪತ್ನಿ ಪತಿಯನ್ನೇ ಮುಗಿಸಲು ಹೋಗಿದ್ದು ಮಾತ್ರ ದುರಂತವೇ ಸರಿ.



