ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಮಾರಾಮಾರಿ; ಕಚೇರಿಯ ಬಾಗಿಲು ಒಡೆದು, ರಸ್ತೆಯಲ್ಲೇ ಹೊಡೆದಾಟ

| Updated By: ಸುಷ್ಮಾ ಚಕ್ರೆ

Updated on: Jul 11, 2022 | 10:10 AM

ಇ. ಪಳನಿಸ್ವಾಮಿ ನೇತೃತ್ವದಲ್ಲಿ ಇಂದು ಎಐಎಡಿಎಂಕೆ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಯಲಿದ್ದು, ಓ. ಪನೀರ್‌ಸೆಲ್ವಂ ಬೆಂಬಲಿಗರು ಎಐಎಡಿಎಂಕೆ ಕಚೇರಿಯ ಬಾಗಿಲು ಒಡೆದಿದ್ದಾರೆ.

ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಮಾರಾಮಾರಿ; ಕಚೇರಿಯ ಬಾಗಿಲು ಒಡೆದು, ರಸ್ತೆಯಲ್ಲೇ ಹೊಡೆದಾಟ
ಪಳನಿಸ್ವಾಮಿ- ಪನ್ನೀರ್​ಸೆಲ್ವಂ
Follow us on

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಎಐಎಡಿಎಂಕೆ (AIADMK) ಕಾರ್ಯಕರ್ತರ ನಡುವೆ ಗಲಾಟೆ ಭುಗಿಲೆದ್ದಿದೆ. ಇಪಿಎಸ್ (EPS),​ ಒಪಿಎಸ್ (OPS) ಬಣಗಳ ನಡುವೆ ಮಾರಾಮಾರಿ ನಡೆದಿದ್ದು, ಚೆನ್ನೈನ ಎಐಎಡಿಎಂಕೆ ಕಚೇರಿ ಎದುರು ಇಂದು ಮುಂಜಾನೆ ಹೈಡ್ರಾಮಾ ನಡೆದಿದೆ. ಎರಡೂ ಕಡೆಯ ಕಾರ್ಯಕರ್ತರು ಉದ್ರಿಕ್ತಗೊಂಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಾಯಕತ್ವದ ವಿಚಾರಕ್ಕೆ ಕಲ್ಲು, ದೊಣ್ಣೆಗಳಿಂದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.

ಇ. ಪಳನಿಸ್ವಾಮಿ ನೇತೃತ್ವದಲ್ಲಿ ಇಂದು ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಯಲಿದ್ದು, ಓ. ಪನೀರ್‌ಸೆಲ್ವಂ ಬೆಂಬಲಿಗರು ಎಐಎಡಿಎಂಕೆ ಕಚೇರಿಯ ಬಾಗಿಲು ಒಡೆದಿದ್ದಾರೆ. ಇಂದು ನಡೆಯಲಿರುವ ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಎಐಎಡಿಎಂಕೆ ನಾಯಕರಾದ ಇ. ಪಳನಿಸ್ವಾಮಿ ಮತ್ತು ಓ. ಪನ್ನೀರಸೆಲ್ವಂ ಅವರ ಬೆಂಬಲಿಗರ ನಡುವೆ ಪಕ್ಷದ ಪ್ರಧಾನ ಕಚೇರಿಯ ಬಳಿ ಘರ್ಷಣೆ ಉಂಟಾಗಿದೆ.

ಇಂದು ನಡೆಯಲಿರುವ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನವೀಕರಿಸಲು ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸುವ ಸಭೆಯನ್ನು ಸ್ಥಗಿತಗೊಳಿಸುವಂತೆ ಓ ಪನ್ನೀರಸೆಲ್ವಂ ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಇದನ್ನೂ ಓದಿ: ಎಐಎಡಿಎಂಕೆ ನೇತೃತ್ವಕ್ಕೆ ಹಗ್ಗಜಗ್ಗಾಟ; ಪಳನಿಸ್ವಾಮಿಗೆ ಬೆಂಬಲ, ಸಭೆಯಿಂದ ಹೊರನಡೆದ ಪನ್ನೀರ್​ಸೆಲ್ವಂ

ಇಂದು ನಡೆಯಲಿರುವ ಜನರಲ್ ಕೌನ್ಸಿಲ್ ಸಭೆಯಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಪ್ರಬಲ ಬಣ ಅವರನ್ನು ಸಂಘಟನೆಯ ಏಕೈಕ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಎರಡೂ ನಾಯಕರ ಬೆಂಬಲಿಗರು ಮತ್ತು ಎಐಎಡಿಎಂಕೆ ಧ್ವಜಗಳನ್ನು ಹೊತ್ತಿರುವ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಲವು ವ್ಯಕ್ತಿಗಳು ಪರಸ್ಪರ ಕಲ್ಲು ತೂರಾಟ ನಡೆಸುತ್ತಿರುವ ಟಿವಿ ದೃಶ್ಯಗಳು ವೈರಲ್ ಆಗಿವೆ.

ಇದೇ ವೇಳೆ ಕೆಲವರು ಪಕ್ಷದ ಕಛೇರಿಯ ಬಾಗಿಲು ಮುರಿದು ಬಲವಂತವಾಗಿ ಒಳಗೆ ನುಗ್ಗಿದ್ದು ಕಂಡುಬಂದಿತು. ಪಕ್ಷದ ಸಂಸ್ಥಾಪಕ, ದಿವಂಗತ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ ಹೆಸರಿನ ಎಐಎಡಿಎಂಕೆ ಕಚೇರಿ, ಎಂಜಿಆರ್ ಮಾಳಿಗೈಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪನ್ನೀರಸೆಲ್ವಂ ಅವರು ಆರ್. ವೈತಿಲಿಂಗಂ ಮತ್ತು ಮನೋಜ್ ಪಾಂಡಿಯನ್ ಸೇರಿದಂತೆ ಹಲವರು ಪಕ್ಷದ ಕಚೇರಿಗೆ ಆಗಮಿಸಿದ್ದಾರೆ.

 

Published On - 9:51 am, Mon, 11 July 22