ಶಿವರಾಜ್ ಸಿಂಗ್ ಚೌಹಾಣ್ಗೆ ವಿಮಾನದಲ್ಲಿ ಮುರಿದ ಸೀಟು ಕೊಟ್ಟ ಏರ್ ಇಂಡಿಯಾ: ಟಾಟಾ ಕುರಿತ ಭರವಸೆ ಭ್ರಮೆಯಾಯ್ತೆಂದ ಕೇಂದ್ರ ಸಚಿವ
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ಗೆ ಏರ್ ಇಂಡಿಯಾ ವಿಮಾನದಲ್ಲಿ ಮುರಿದ ಸೀಟು ಕೊಟ್ಟ ವಿದ್ಯಮಾನ ಶನಿವಾರ ನಡೆದಿದೆ. ಈ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಪ್ರಕಟಿಸಿದ್ದು, ಏರ್ ಇಂಡಿಯಾ ಆಡಳಿತವನ್ನು ಟಾಟಾ ವಹಿಸಿಕೊಂಡ ನಂತರ ಸೇವೆ ಸುಧಾರಿಸುತ್ತದೆ ಎಂಬ ಕಲ್ಪನೆ ಭ್ರಮೆಯಾಯಿತು ಎಂದಿದ್ದಾರೆ.

ನವದೆಹಲಿ, ಫೆಬ್ರವರಿ 22: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಏರ್ ಇಂಡಿಯಾ ವಿಮಾನದಲ್ಲಿ ಮುರಿದ ಸೀಟಿನಲ್ಲಿ ಪ್ರಯಾಣಿಸಬೇಕಾಗಿ ಬಂದಿದ್ದು, ಈ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಪ್ರಯಾಣಿಕರಿಗೆ ಮಾಡುವ ವಂಚನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಪ್ರಕಟಿಸಿರುವ ಸಚಿವರು, ಏರ್ ಇಂಡಿಯಾದ ಬಗ್ಗೆ ನನಗಿದ್ದ ಕಲ್ಪನೆಗಳೆಲ್ಲ ಭ್ರಮೆಯಾಗಿ ಹೋಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದೇನು?
‘‘ಇಂದು ನಾನು ಭೋಪಾಲ್‌ನಿಂದ ದೆಹಲಿಗೆ ಬರಬೇಕಾಯಿತು. ಪುಸಾದಲ್ಲಿ ಕಿಸಾನ್ ಮೇಳವನ್ನು ಉದ್ಘಾಟಿಸಬೇಕಿತ್ತು. ಕುರುಕ್ಷೇತ್ರದಲ್ಲಿ ನೈಸರ್ಗಿಕ ಕೃಷಿ ಮಿಷನ್ ಸಭೆ ನಡೆಸಬೇಕಿತ್ತು ಮತ್ತು ಚಂಡೀಗಢದಲ್ಲಿ ರೈತ ಸಂಘಟನೆಯ ಗೌರವಾನ್ವಿತ ಪ್ರತಿನಿಧಿಗಳೊಂದಿಗೆ ಚರ್ಚಿಸಬೇಕಿತ್ತು. ಅದಕ್ಕಾಗಿ ನಾನು ಏರ್ ಇಂಡಿಯಾ ವಿಮಾನ AI436 ರಲ್ಲಿ ಟಿಕೆಟ್ ಬುಕ್ ಮಾಡಿದ್ದೆ. ನನಗೆ ಸೀಟ್ ಸಂಖ್ಯೆ 8C ನೀಡಲಾಗಿತ್ತು. ನಾನು ಹೋಗಿ ಸೀಟಿನ ಮೇಲೆ ಕುಳಿತೆ, ಸೀಟು ಮುರಿದು ಕೆಳಗೆ ಬಾಗಿತು. ಅದರಲ್ಲಿ ಕುಳಿತುಕೊಂಡು ಪ್ರಯಾಣಿಸುವುದು ಕಷ್ಟಕರವಾಗಿತ್ತು’’ ಎಂದು ಶಿವರಾಜ್ ಸಿಂಗ್ ಚೌಹಾಣ್ ಸಮಾಜಿಕ ಮಾಧ್ಯಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
‘‘ನಾನು ವಿಮಾನಯಾನ ಸಿಬ್ಬಂದಿಯನ್ನು ಸೀಟು ಸರಿ ಇಲ್ಲದಿದ್ದರೆ ಅದನ್ನು ಏಕೆ ಹಂಚಿಕೆ ಮಾಡಲಾಯಿತು’’ ಎಂದು ಕೇಳಿದೆ. ಆಗ ಅವರು, ‘‘ಈ ಸೀಟು ಚೆನ್ನಾಗಿಲ್ಲ ಮತ್ತು ಇದರ ಟಿಕೆಟ್ ಮಾರಾಟ ಮಾಡಬಾರದು ಎಂದು ಆಡಳಿತ ಮಂಡಳಿಗೆ ಮೊದಲೇ ತಿಳಿಸಲಾಗಿತ್ತು’’ ಎಂದು ಹೇಳಿದರು. ಅಂತಹ ಒಂದೇ ಒಂದು ಆಸನವಲ್ಲ, ಇನ್ನೂ ಹಲವು ಆಸನಗಳು ಆ ವಿಮಾನದಲ್ಲಿದ್ದವು ಎಂದು ಚೌಹಾಣ್ ತಿಳಿಸಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್
आज मुझे भोपाल से दिल्ली आना था, पूसा में किसान मेले का उद्घाटन, कुरुक्षेत्र में प्राकृतिक खेती मिशन की बैठक और चंडीगढ़ में किसान संगठन के माननीय प्रतिनिधियों से चर्चा करनी है।
मैंने एयर इंडिया की फ्लाइट क्रमांक AI436 में टिकिट करवाया था, मुझे सीट क्रमांक 8C आवंटित हुई। मैं जाकर…
— Shivraj Singh Chouhan (@ChouhanShivraj) February 22, 2025
ಟಾಟಾ ದಿಂದ ಸೇವೆ ಸುಧಾರಿಸುತ್ತಿದೆ ಎಂಬ ಅನಿಸಿಕೆ ಹುಸಿಯಾಯ್ತು: ಚೌಹಾಣ್
‘‘ನನ್ನ ಸಹ ಪ್ರಯಾಣಿಕರು ಆಸನವನ್ನು ಬದಲಾಯಿಸಿ ಉತ್ತಮ ಆಸನದಲ್ಲಿ ಕುಳಿತುಕೊಳ್ಳಲು ಒತ್ತಾಯಿಸಿದರು. ಆದರೆ ನನಗಾಗಿ ನಾನು ಇನ್ನೊಬ್ಬ ಸ್ನೇಹಿತನಿಗೆ ಏಕೆ ತೊಂದರೆ ಕೊಡಬೇಕು? ನಾನು ಈ ಆಸನದಲ್ಲಿ ಕುಳಿತು ನನ್ನ ಪ್ರಯಾಣವನ್ನು ಪೂರ್ಣಗೊಳಿಸುತ್ತೇನೆ’’ ಎಂದು ಹೇಳಿದೆ. ಟಾಟಾ ಕಂಪನಿಯು ಏರ್ ಇಂಡಿಯಾದ ಆಡಳಿತವನ್ನು ವಹಿಸಿಕೊಂಡ ನಂತರ ಅದರ ಸೇವೆ ಸುಧಾರಿಸುತ್ತಿತ್ತು ಎಂಬುದು ನನ್ನ ಅನಿಸಿಕೆಯಾಗಿತ್ತು. ಆದರೆ ಅದು ನನ್ನ ತಪ್ಪು ಕಲ್ಪನೆ ಎಂದು ಈಗ ಗೊತ್ತಾಯಿತು ಎಂದು ಸಚಿವರು ಬರೆದುಕೊಂಡಿದ್ದಾರೆ.
ವಿಷಾದ ವ್ಯಕ್ತಪಡಿಸಿದ ಏರ್ ಇಂಡಿಯಾ
ಶಿವರಾಜ್ ಸಿಂಗ್ ಚೌಹಾಣ್ ಅವರ ಸಾಮಾಜಿಕ ಮಾಧ್ಯಮ ಸಂದೇಶದ ಬಗ್ಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಕಂಪನಿ ತಿಳಿಸಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆ ನಡೆಯದಂತೆ ತಡೆಯಲು ನಾವು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ಈ ವಿಷಯವನ್ನು ನಿಮ್ಮೊಂದಿಗೆ ಚರ್ಚಿಸಲು ಅವಕಾಶ ದೊರೆತಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದು ಏರ್ ಇಂಡಿಯಾ ಉಲ್ಲೇಖಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Sat, 22 February 25




