ಏರ್ ಇಂಡಿಯಾದ ಎಲ್ಲ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ

ಏರ್ ಇಂಡಿಯಾ ಸಂಸ್ಥೆಯು ತನ್ನ ಎಲ್ಲಾ ಪೈಲಟ್‌ಗಳಿಗೆ ಕಡ್ಡಾಯವಾಗಿ ಮಾದಕದ್ರವ್ಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇತ್ತೀಚೆಗೆ ಫುಕೆಟ್‌ನಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಆಕಾಶದಲ್ಲಿ ಇದ್ದಕ್ಕಿದ್ದಂತೆ 300 ಅಡಿ ಎತ್ತರದಿಂದ ಕೆಳಕ್ಕೆ ಕುಸಿದಿದ್ದ ಘಟನೆಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಮಾನದ ಪೈಲಟ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈ ಪರೀಕ್ಷೆಗಳ ಮೂಲಕ, ವಿಮಾನಯಾನ ನಿಯಮಗಳ ಅಡಿಯಲ್ಲಿ ನಿಷೇಧಿಸಲಾದ ಮಾದಕವಸ್ತುಗಳು ಮತ್ತು ಆಕ್ಷೇಪಾರ್ಹ ಔಷಧಗಳ ಬಳಕೆಯನ್ನು ಏರ್ ಇಂಡಿಯಾ ತನಿಖೆ ಮಾಡಲಿದೆ. ಪೈಲಟ್‌ಗಳ ಹೋಮ್ ಬೇಸ್ ನಿಯೋಜಿತ ಸ್ಥಳಗಳಲ್ಲೂ ಈ ಪರೀಕ್ಷೆಗಳು ನಡೆಯಲಿವೆ. ಏರ್ ಇಂಡಿಯಾ ಮಾತ್ರವಲ್ಲದೆ 'ಏರ್ ಇಂಡಿಯಾ ಎಕ್ಸ್‌ಪ್ರೆಸ್' ಪೈಲಟ್‌ಗಳಿಗೂ ಈ ಪರೀಕ್ಷೆ ಅನ್ವಯಿಸಲಿದೆ.

ಏರ್ ಇಂಡಿಯಾದ ಎಲ್ಲ ಪೈಲಟ್‌ಗಳಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ
Air India
Image Credit source: Getty Image

Updated on: Aug 13, 2026 | 8:08 PM

ನವದೆಹಲಿ, ಆಗಸ್ಟ್ 13: ಆಕಾಶದಲ್ಲಿ ಹಾರಾಡುವಾಗಲೇ ತೀವ್ರ ಗಾಳಿಯ ಅಡಚಣೆಗೆ (ಟರ್ಬುಲೆನ್ಸ್) ಒಳಗಾಗಿದ್ದ ಏರ್ ಇಂಡಿಯಾ (Air India) ವಿಮಾನದ ಮುಖ್ಯ ಪೈಲಟ್ ಡ್ರಗ್ಸ್ ಸೇವಿಸಿ ವಿಮಾನ ಹಾರಿಸುತ್ತಿದ್ದರು ಎಂಬ ಶಾಕಿಂಗ್ ವಿಷಯ ಹೊರಬಿದ್ದ ಬೆನ್ನಲ್ಲೇ, ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ಪ್ರಯಾಣಿಕರ ಭದ್ರತೆ ಮತ್ತು ವೈಮಾನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಏರ್ ಇಂಡಿಯಾ ಆಡಳಿತ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡೂ ಸಂಸ್ಥೆಗಳು ತಮ್ಮ ಪೈಲಟ್‌ಗಳಿಗೆ ಆಂತರಿಕ ಸಂದೇಶ ರವಾನಿಸಿದ್ದು, ವಿಮಾನಯಾನ ರಂಗದ ಪ್ರಸ್ತುತ ನಿಯಮಾವಳಿಗಳ ಅಡಿಯಲ್ಲಿ ಅನುಮತಿಸದ ಯಾವುದೇ ಮಾದಕ ವಸ್ತುಗಳು ಅಥವಾ ಔಷಧಗಳ ಸೇವನೆಗೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿವೆ. ಈ ಪರೀಕ್ಷೆಗಳು ಕಡ್ಡಾಯವಾಗಿದ್ದು, ಆಗಸ್ಟ್ 13ರಿಂದ ಆರಂಭವಾಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ

ವಿಮಾನಯಾನ ಸಚಿವಾಲಯದ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಪ್ರತಿ ವರ್ಷ ತಮ್ಮ ಒಟ್ಟು ವಿಮಾನ ಸಿಬ್ಬಂದಿಯಲ್ಲಿ ಕನಿಷ್ಠ ಶೇ. 10ರಷ್ಟು ಸಿಬ್ಬಂದಿಗೆ ಸೈಕೋಆಕ್ಟಿವ್ ಮಾದಕದ್ರವ್ಯ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ. ವಿಮಾನಯಾನ ಕ್ಷೇತ್ರದ ಸುರಕ್ಷತಾ ಮಾನದಂಡಗಳನ್ನು ಎತ್ತಿಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಮತ್ತು ಇತರ ಪಾಲುದಾರರಲ್ಲಿ ವಿಶ್ವಾಸ ಮೂಡಿಸಲು ಈ ನಿರ್ಧಾರ ಅಗತ್ಯವಾಗಿತ್ತು ಎಂದು ಏರ್ ಇಂಡಿಯಾ ಹೇಳಿದೆ.

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾದ A320neo ವಿಮಾನ ಹಾರಾಟದ ಮಧ್ಯದಲ್ಲಿಯೇ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಎತ್ತರದಿಂದ ಕೆಳಕ್ಕೆ ಕುಸಿದಿತ್ತು. ಈ ವಿಮಾನದ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ, ಏರ್ ಇಂಡಿಯಾ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ದೇಹದಲ್ಲಿ ಅಪಾಯಕಾರಿ ಮಟ್ಟದ ಡ್ರಗ್ಸ್ ಅಂಶಗಳು ಪತ್ತೆಯಾದ ತಕ್ಷಣವೇ ಅವರ ಹಾರಾಟದ ಲೈಸೆನ್ಸ್ ರದ್ದುಗೊಳಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಸ್ತುತ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಈ ಗಂಭೀರ ಲೋಪದ ನಂತರ ಏರ್ ಇಂಡಿಯಾ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಪೈಲಟ್ (ಕ್ಯಾಪ್ಟನ್ ಹಾಗೂ ಕೋ-ಪೈಲಟ್)ಗೂ ಮಾದಕ ದ್ರವ್ಯ ಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಹಾರಾಟಕ್ಕೂ ಮುನ್ನ ಮತ್ತು ನಂತರ ನಡೆಸುವ ಆಲ್ಕೋಹಾಲ್ ಪರೀಕ್ಷೆಯ ಜೊತೆಗೆ ಇನ್ಮುಂದೆ ಅತ್ಯಾಧುನಿಕ ಟಾಕ್ಸಿಕಾಲಜಿ ಡ್ರಗ್ ಟೆಸ್ಟ್ ಕಡ್ಡಾಯವಾಗಲಿದೆ.

ಈ ಘಟನೆಯ ಕುರಿತು ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ತನಿಖೆಯನ್ನು ಚುರುಕುಗೊಳಿಸಿದ್ದು, ಒಂದು ತಿಂಗಳೊಳಗೆ ಮಧ್ಯಂತರ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ. ಫ್ರೆಂಚ್ ತನಿಖಾ ಸಂಸ್ಥೆ (BEA) ಹಾಗೂ ಏರ್‌ಬಸ್ ಕಂಪನಿಯ ನೆರವಿನೊಂದಿಗೆ ಬ್ಲ್ಯಾಕ್ ಬಾಕ್ಸ್ (FDR ಹಾಗೂ CVR) ದತ್ತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us