ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರನ್ನು ನಂಬಲಾರೆ ಅಂತ ಹೇಳಿದ ಅಖಿಲೇಶ್ ಯಾದವರನ್ನು ಖಂಡಿಸಿದ ಬಿಜೆಪಿ ನಾಯಕರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 12, 2021 | 10:40 PM

ಮುಂದಿನ ವರ್ಷ ಯುಪಿಯಲ್ಲಿ ವಿಧಾನ ಸಭೆಗೆ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಪಕ್ಷಗಳು ಈಗಾಗಲೇ ಪರಸ್ಪರ ಕೆಸರೆರಚಾಟವನ್ನು ಆರಂಭಿಸಿವೆ. ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಅಖಿಲೇಶ್ ಯಾದವ್ ಅವರ ಕಾಮೆಂಟ್ ಅನ್ನು ಟೀಕಿಸುತ್ತಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರನ್ನು ನಂಬಲಾರೆ ಅಂತ ಹೇಳಿದ ಅಖಿಲೇಶ್ ಯಾದವರನ್ನು ಖಂಡಿಸಿದ ಬಿಜೆಪಿ ನಾಯಕರು
ಅಖಿಲೇಶ್ ಯಾದವ್
Follow us on

ಲಖನೌ: ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಉಗ್ರಗಾಮಿಗಳ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವ್ಯಕ್ತಪಡಿಸಿರುವ ಸಂದೇಹಗಳು ರಾಜಕೀಯ ವಲಯಗಳಲ್ಲಿ ವ್ಯಾಪಕವಾಗಿ ಖಂಡನೆಗೊಳಗಾಗುತ್ತಿವೆ. ರವಿವಾರದಂದು ಸುದ್ದಿಗಾರರೊಂದಿಗೆ ಮಾತಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಯಾದವ್, ‘ ನಾನು ಪೊಲೀಸರನ್ನು ಅದರಲ್ಲೂ ವಿಶೇಷವಾಗಿ ಬಿಜೆಪಿ ಸರ್ಕಾರವನ್ನು ನಂಬುವುದಿಲ್ಲ,’ ಎಂದು ಹೇಳಿದ್ದರು. ಆದರೆ ಅವರ ಪಕ್ಷದ ನಾಯಕರು; ಅಖಿಲೇಶ್ ಯಾದವ್ ಅವರಿಗೆ ಬಂಧನಗಳ ಬಗ್ಗೆ ಹಾಗಿರಲಿ, ಬಂಧನಕ್ಕೊಳಗಾದವರು ಜಾಗತಿಕ ಉಗ್ರ ಸಂಘಟನೆ ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ವಿಷಯ ಗೊತ್ತಾಗುವ ಮೊದಲು ಮಾತಾಡಿದ್ದನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್​-ಖೈದಾ ಬೆಂಬಲಿತ ಅನ್ಸಾರ್ ಘಜ್ವತುಲ್ ಹಿಂದ್ ಗುಂಪಿನ ಇಬ್ಬರು ಉಗ್ರರನ್ನು ರಾಜ್ಯದ ಉಗ್ರ-ನಿರೋಧಕ ದಳ ರವಿವಾರದಂದು ಲಖನೌ ನಗರದ ಹೊರವಲಯದಲ್ಲಿ ಬಂಧಿಸಿತೆಂದು ಅದೇ ದಿನ ಸಾಯಂಕಾಲ ಯು ಪಿ ಸರ್ಕಾರ ಹೇಳಿತ್ತು. ಮಾನವ ಬಾಂಬ್​ಗಳ ಮೂಲಕ ಅವರು ಉತ್ತರ ಪ್ರದೇಶದ ಹಲವರು ಭಾಗಗಳಲ್ಲಿ ದಾಳಿ ನಡೆಸಲು ಸಂಚು ನಡೆಸಿದ್ದರೆಂದು ಪೊಲೀಸ್ ಹೇಳಿತ್ತು.

ಮಿನ್ಹಾಜ್ ಅಹ್ಮದ್ ಮತ್ತು ಮಸೀರುದ್ದೀನ್ ಹೆಸರಿನ ಇಬ್ಬರು ಉಗ್ರರನ್ನು ಬಂಧಿಸಿ ಲಖನೌದಲ್ಲಿರವ ಅವರ ಮನೆಗಳಿಂದ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶದ ಎಡಿಜಿಪಿ ಪ್ರಶಾಂತ ಕುಮಾರ (ಕಾನೂನು ಮತ್ತು ಸುವ್ಯವಸ್ಥೆ) ಹೇಳಿದ್ದರು.

ಕುಮಾರ ಅವರ ಹೇಳಿಕೆಯ ಪ್ರಕಾರ ಉಗ್ರರು ಆಗಸ್ಟ್​ 15ರಂದು ಲಖನೌ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸಬೇಕೆಂಬ ಯೋಜನೆ ಮಾಡಿಕೊಂಡಿದ್ದರು. ಉತ್ತರ ಪ್ರದೇಶ ಅಲ್​ ಖೈದಾ ಶಾಖೆಯ ಮುಖ್ಯಸ್ಥ ಉಮರ್ ಹಲ್ಮಂಡಿಯ ಅಣತಿಯಂತೆ ಅವರು ಕೆಲಸ ಮಾಡುತ್ತಿದ್ದರು ಎಂದು ಕುಮಾರ್ ಹೇಳಿದ್ದರು.

ನಗರಗಳ ಹೆಚ್ಚು ಜನನಿಬಿಡ ಪ್ರದೇಶಗಳು, ಸ್ಮಾರಕಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಅವರು ಸ್ಫೋಟಕಗಳನ್ನು ಸಿಡಿಸುವ ಮತ್ತು ಮಾನವ ಬಾಂಬ್​ಗಳನ್ನು ಉಪಯೋಗಿಸುವ ಯೋಜನೆ ಮಾಡಿಕೊಂಡಿದ್ದರು, ಎಂದು ಕುಮಾರ ರವಿವಾರ ಹೇಳಿದ್ದರು.

ಪೊಲೀಸ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಅಲ್​ ಖೈದಾದ ನಾಯಕತ್ವ ವಹಿಸಿಕೊಂಡಿದ್ದ ಮತ್ತು 2019ರಲ್ಲಿ ಹತ್ಯೆಯಾದ ಮೌಲಾನಾ ಆಸಿಮ್ ಉಮರ್ ಉತ್ತರ ಪ್ರದೇಶದ ಸಂಭಾಲ್​ನೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ.

ಮುಂದಿನ ವರ್ಷ ಯುಪಿಯಲ್ಲಿ ವಿಧಾನ ಸಭೆಗೆ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಪಕ್ಷಗಳು ಈಗಾಗಲೇ ಪರಸ್ಪರ ಕೆಸರೆರಚಾಟವನ್ನು ಆರಂಭಿಸಿವೆ. ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಅಖಿಲೇಶ್ ಯಾದವ್ ಅವರ ಕಾಮೆಂಟ್ ಅನ್ನು ಟೀಕಿಸುತ್ತಿದ್ದಾರೆ.

ಕರ್ನಾಟಕದ ಬಿಜೆಪಿ ನಾಯಕ ಸಿ ಟಿ ರವಿ ಅವರು, ‘ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಯುಪಿ ಪೊಲೀಸ್ ಮತ್ತು ಬಿಜೆಪಿ ಸರ್ಕಾರವನ್ನು ನಂಬುವುದಿಲ್ಲ ಅಂತ ಘೋಷಿಸಿರುವುದು ಆಘಾತವನ್ನುಂಟು ಮಾಡಿದೆ. ಬಿಜೆಪಿ ಲಸಿಕೆಯ ಮೇಲೆ ವಿಶ್ವಾಸವಿಲ್ಲ ಎಂದು ಘೋಷಣೆ ಮಾಡಿದ ಡೈನಾಸ್ಟಿಕ್ ರಾಜಕಾರಣಿ ಇವರೇ. ಹಾಗಾದರೆ ಇವರು ಯಾರನ್ನು ನಂಬುತ್ತಾರೆ? ಪಾಕಿಸ್ತಾನ ಸರ್ಕಾರ ಮತ್ತು ಅದರ ಉಗ್ರಗಾಮಿಗಳನ್ನೇ?,’ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ನಾಯಕ ಅಮಿತ್ ಮಾಳವೀಯ, ‘ಅಖಿಲೇಶ್ ಯಾದವ್ ಅವರರಿಗೆ ಮೊದಲು ಲಸಿಕೆಯ ಬಗ್ಗೆ ಸಂದೇಹಗಳಿದ್ದವು. ಈಗ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಯು ಪಿ ಪೊಲೀಸರನ್ನು ನಂಬಲಾರೆ ಎಂದು ಹೇಳುತ್ತಿದ್ದಾರೆ. ಅವರು, ರಾಜ್ಯ, ಅಡಳಿತ-ಯಾರನ್ನೂ ನಂಬದಿದ್ದರೆ, ಮುಖ್ಯಮಂತ್ರಿ ಆಗುವ ಆಸೆ ಯಾಕೆ ಇಟ್ಟುಕೊಂಡಿದ್ದಾರೆ? ತೆಪ್ಪಗೆ ಮನೆಯಲ್ಲೇ ಇರಲಿ,’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾದ ಉತ್ತರ ಪ್ರದೇಶ; ಎರಡು ಮಕ್ಕಳ ನೀತಿ ಉಲ್ಲಂಘಿಸಿದರೆ ಸರ್ಕಾರಿ ಸೌಲಭ್ಯಗಳಿಲ್ಲ, ನೌಕರಿಯೂ ಸಿಗೋಲ್ಲ