ಕಳೆದ 24 ಗಂಟೆಗಳಲ್ಲಿ ಭಾರತದ ಮೂರು ರಾಜ್ಯಗಳಲ್ಲಿ 74 ಜನ ಸಿಡಿಲಿಗೆ ಬಲಿ, ಸಂತಾಪ ಸೂಚಿಸಿ ಪರಿಹಾರ ಪ್ರಕಟಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಮೂರು ರಾಜ್ಯಗಳಲ್ಲಿ ಸಂಭವಿಸಿರುವ ಸಿಡಿಲು ದುರಂತಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದ್ದು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಸತ್ತವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ರೂ. 50,000 ಪರಿಹಾರ ಧನವನ್ನು ಪ್ರಕಟಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯಿಂದ ಹೊಬಿದ್ದಿರುವ ಹೇಳಿಕೆಯೊಂದು ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಸಿಡಿಲಿಗೆ 74 ಜನ ಬಲಿಯಾಗಿದ್ದಾರೆ. ಉತ್ತರ ಪ್ರದೇಶ, ರಾಜಸ್ತಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಸಿಡಿಲು ತನ್ನ ಕರಾಳತೆಯನ್ನು ಪ್ರದರ್ಶಿಸಿದ್ದು ಇತ್ತೀಚಿನ ವರ್ಷಗಳಲ್ಲೇ ಸಿಡಿಲಿನ ಅತಿ ದೊಡ್ಡ ದುರಂತ ಇದು ಎಂದು ಪರಿಗಣಿಸಲಾಗಿದೆ. ಸತ್ತವರ ಪೈಕಿ ಜೈಪುರ ನಗರದ ಹೊರವಲಯದಲ್ಲಿರುವ 12 ನೇ ಶತಮಾನದ ಐತಿಹಾಸಿಕ ಅಮೆರ್ ಕೋಟೆ ನೋಡಲು ಬಂದಿದ್ದ 11 ಪ್ರವಾಸಿಗರೂ ಸೇರಿದ್ದಾರೆ. ರವಿವಾರ ಸಾಯಂಕಾಲ ಈ ನತದೃಷ್ಟರು ಕೋಟೆ ಒಳಭಾಗದಲ್ಲಿರುವ ವಾಚ್ಟವರ್ ಬಳಿ ಸೆಲ್ಫೀಗಳನ್ನು ತೆಗೆದುಕೊಳ್ಳುತ್ತಿದ್ದರು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಇತರ 20 ಜನ ಗಾಯಗೊಂಡಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು, ಸಾಯಂಕಾಲ ಸುಮಾರು 7 ಗಂಟೆಗೆ ಮಳೆ ಸುರಿಯಲಾರಂಭಿಸಿದ್ದರಿಂದ ಜನ ಅಮೇರ್ ಕೋಟೆಯ ಒಳಭಾಗದಲ್ಲಿರುವ ವಾಚ್ಟವರ್ ಬಳಿ ಆಶ್ರಯ ಪಡೆದಿದ್ದರು ಮತ್ತು ಇನ್ನೂ ಕೆಲವರು ಸೆಲ್ಫೀ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಆಗಲೇ ಸಿಡಿಲು ಬಡಿದು 11 ಜನ ಸತ್ತರು, ಇವರಲ್ಲಿ ಪಂಜಾಬಿನಿಂದ ಅಗಮಿಸಿದ್ದ ಅಣ್ಣ-ತಂಗಿ ಸಹ ಸೇರಿದ್ದಾರೆ, ಅಂತ ಹೇಳಿದ್ದಾರೆ.
ಜನ ಇನ್ನೂ ಕೋಟೆಯ ಒಳಭಾಗದಲ್ಲಿರುವಾಗಲೇ ಮಳೆ ಸುರಿಯಾರಂಭಿಸಿತ್ತು. ಅದು ತೀವ್ರಗೊಳ್ಳುತ್ತಿದ್ದಂತೆ ಜನ ಆಶ್ರಯಕ್ಕಾಗಿ ಒಂದೆಡೆ ಸೇರಿದರು. ಸಿಡಿಲು ಅಪ್ಪಳಿಸಿದಾಗ ಗೋಪುರದ ಮೇಲೆ ಸುಮಾರು 30 ಜನ ಇದ್ದರು, ಎಂದು ಜೈಪುರ್ ಹಿರಿಯ ಪೊಲೀಸ್ ಅಧಿಕಾರಿ ಸೌರವ್ ತಿವಾರಿ ಹೇಳಿದ್ದಾರೆ.
ಸಿಡಿಲಿಗೆ ಅತಿ ಹೆಚ್ಚು ಬಲಿಯಾದವರ ಸಂಖ್ಯೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ರಾಜ್ಯದ 16 ಜಿಲ್ಲೆಗಳಲ್ಲಿ 41 ಜನ ಮರಣವನ್ನಪ್ಪಿದ್ದಾರೆ.
‘ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ರಾಜ್ಯದ 16 ಜಿಲ್ಲೆಗಳಲ್ಲಿ 41 ಜನ ಸಿಡಿಲಿಗೆ ಬಲಿಯಾಗಿದ್ದಾರೆ ಮತ್ತು 30 ಜನ ಗಾಯಗೊಂಡಿದ್ದಾರೆ. ಸರ್ಕಾರವ ಮೃತರ ಕುಟುಂಮಕ್ಕೆ 4 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಒದಗಿಸುವ ಘೋಷಣೆ ಮಾಡಿದೆ,’ ಎಂದು ಉತ್ತರ ಪ್ರದೇಶದ ಪರಿಹಾರ ಆಯುಕ್ತ ರಣವೀರ್ ಪ್ರಸಾದ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಿಡಿಲಿನ ಅಬ್ಬರಕ್ಕೆ 250 ಪ್ರಾಣಿಗಳು ಸತ್ತಿವೆ ಮತ್ತು 20 ಗಾಯಗೊಂಡಿವೆ ಎಂದು ಅಯುಕ್ತರು ಹೇಳಿದ್ದಾರೆ.
ಮೂರು ರಾಜ್ಯಗಳಲ್ಲಿ ಸಂಭವಿಸಿರುವ ಸಿಡಿಲು ದುರಂತಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದ್ದು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಸತ್ತವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ರೂ. 50,000 ಪರಿಹಾರ ಧನವನ್ನು ಪ್ರಕಟಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯಿಂದ ಹೊಬಿದ್ದಿರುವ ಹೇಳಿಕೆಯೊಂದು ತಿಳಿಸಿದೆ.
ರಾಜಸ್ತಾನದಲ್ಲಿ 16 ಜನ ಸಿಡಿಲಿಗೆ ಬಲಿಯಾದ ನಂತರ ಪ್ರಧಾನಿ ಮೋದಿಯವರು ಸಂತಾಪ ವ್ಯಕ್ತಪಡಿಸಿದರು. ‘ಜನ ಸಿಡಿಲಿಗೆ ಬಲಿಯಾಗಿರುವ ವಿಷಯ ಕೇಳಿ ಬಹಳ ದುಃಖವಾಗಿದೆ. ಅವರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ,’ ಎಂದು ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.
Saddened by the loss of lives due to lightning in parts of Madhya Pradesh. The State Government will provide all possible assistance to the affected. From the PMNRF, Rs. 2 lakh would be given to the next of kin of the deceased and Rs. 50,000 would be given to the injured: PM Modi
— PMO India (@PMOIndia) July 12, 2021
ರವಿವಾರದಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಿಡಿಲಿಗೆ ಬಲಿಯಾದ ಕುಟುಂಬಗಳಿಗೆ ಒಂದು ಲಕ್ಷ ರೂ. ಪರಿಹಾರ ಧನವನ್ನು ಘೋಷಿಸಿದ್ದಾರೆ. ಗಾಯಗೊಂಡಿರುವರಿಗೂ ಪರಿಹಾರ ನೀಡುವಂತೆ ಅವರು ಆದೇಶ ನೀಡಿದ್ದಾರೆ. ಅಮೆರ್ ಕೋಟೆ ಹೊರತುಪಡಿಸಿ ಕೋಟಾ ಜಿಲ್ಲೆಯಲ್ಲಿ 4 ಮಕ್ಕಳು ಮತ್ತು ಧೋಲಾಪುರ ಜಿಲ್ಲೆಯಲ್ಲಿ ಮೂವರು ಮಕ್ಕಳು ಮರಣಿಸಿದ್ದಾರೆ.
ಮಧ್ಯಪ್ರದೇಶಲ್ಲಿ ನಾಲ್ವರು ಮಕ್ಕಳೂ ಸೇರಿದಂತೆ ಒಟ್ಟು 11 ಜನ ಸಿಡಿಲಿಗೆ ಬಲಿಯಾಗಿದ್ದಾರೆ ಮತ್ತು 13 ಜನರಿಗೆ ಸುಟ್ಟ ಗಾಯಗಳಾಗಿವೆ. ಗ್ವಾಲಿಯರ್ ಮತ್ತು ಚಂಬಲ್ ಪ್ರಾಂತ್ಯಗಳಲ್ಲಿ 7, ರೇವಾ ಪ್ರಾಂತ್ಯದಲ್ಲಿ 2 ಮತ್ತು ಬೆತುಕಾ ಹಾಗೂ ಹೊಷಂಗಾಬಾದ್ಗಳಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಿಡಿಲು ಬಡಿದು ಮೃತಪಟ್ಟ ಜನರ ಕುಟುಂಬಗಳಿಗೆ ಪರಿಹಾರ ಧನ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ