ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ತಮ್ಮ ಶಿವಪಾಲ್ ಸಿಂಗ್ ಯಾದವ್ (ಅಖಿಲೇಶ್ ಯಾದವ್ ಚಿಕ್ಕಪ್ಪ) ಟ್ವಿಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಫಾಲೋ ಮಾಡಲು ಶುರು ಮಾಡಿದ್ದು ಕುತೂಹಲ ಕೆರಳಿಸಿದೆ. ಶಿವಪಾಲ್ ಸಿಂಗ್ ಯಾದವ್ ಅವರು ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯಾ)ಯ ಮುಖ್ಯಸ್ಥರು. ಇತ್ತೀಚೆಗಷ್ಟೇ ಲಖನೌನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಅವರ ನಿವಾಸಕ್ಕೆ ತೆರಳಿ ಭೇಟಿಯಾಗಿದ್ದರು. ಆಗಿನಿಂದಲೂ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ರನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ.
ಸಮಾಜವಾದಿ ಪಕ್ಷದ ಮೈತ್ರಿಯಲ್ಲಿ ಇರುವ ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯಾ) ಮುಖ್ಯಸ್ಥರಾಗಿರುವ ಶಿವಪಾಲ್ ಯಾದವ್ ಮೈತ್ರಿಯನ್ನು ತೊರೆಯುತ್ತಾರೆ, ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಗುರುತಿನಲ್ಲಿಯೇ ಸ್ಪರ್ಧಿಸಿದ್ದರು. ಇತ್ತೀಚೆಗೆ ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ಅದರ ಮೈತ್ರಿ ಪಕ್ಷಗಳ ನಾಯಕರ ಸಭೆ ನಡೆದಿತ್ತು. ಅದಕ್ಕೂ ಕೂಡ ಶಿವಪಾಲ್ ಗೈರಾಗಿದ್ದರು. ಇನ್ನು ಶಿವಪಾಲ್ ಯಾದವ್ರಿಗೆ ಮೊದಲೂ ಒಮ್ಮೆ ಕೂಡ ಬಿಜೆಪಿಯಿಂದ ಆಫರ್ ಬಂದಿತ್ತು ಎಂಬುದನ್ನು ಪಿಎಸ್ಪಿ-ಎಲ್ ವಕ್ತಾರ ದೀಪಕ್ ಮಿಶ್ರಾ ತಿಳಿಸಿದ್ದಾರೆ.
ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದಲೇ ಶಿವಪಾಲ್ ಯಾದವ್ ಈ ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯಾ) ಪಕ್ಷವನ್ನು 2017ರಲ್ಲಿ ಸ್ಥಾಪಿಸಿದ್ದರು. 2019ರಲ್ಲಿ ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಯಾದವ್ ಸ್ವಲ್ಪ ಮಟ್ಟಿಗೆ ರಾಜಿಯಾಗಿ ಮೈತ್ರಿ ಮಾಡಿಕೊಂಡಿದ್ದರು. ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶಿವಪಾಲ್ ಯಾದವ್ ಪುತ್ರ ಆದಿತ್ಯ ಯಾದವ್ಗೆ ಟಿಕೆಟ್ ನೀಡಲು ಅಖಿಲೇಶ್ ಯಾದವ್ ನಿರಾಕರಿಸಿದ್ದು, ಮತ್ತೆ ಮನಸ್ತಾಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇನ್ನು ಮುಲಾಯಂ ಸಿಂಗ್ ಸೊಸೆ ಅಪರ್ಣಾ ಅವರು ಚುನಾವಣೆಗೂ ಪೂರ್ವವೇ ಬಿಜೆಪಿಗೆ ಸೇರಿದ್ದಾರೆ. ಅಷ್ಟೇ ಅಲ್ಲ, ಗೆದ್ದ ಯೋಗಿ ಆದಿತ್ಯನಾಥ್ರಿಗೆ, ಮಗಳೊಂದಿಗೆ ಸೇರಿ ವಿಜಯದ ಆರತಿ ಎತ್ತಿ ತಿಲಕವನ್ನೂ ಇಟ್ಟಿದ್ದಾರೆ.
ಇದನ್ನೂ ಓದಿ: ನೇಪಾಳ- ಭಾರತದ ಗಡಿ ದುರ್ಬಳಕೆಯಾಗಬಾರದು; ದೆಹಲಿಯಲ್ಲಿ ನೇಪಾಳದ ಪ್ರಧಾನಿ ಭೇಟಿ ವೇಳೆ ಮೋದಿ ಮನವಿ
Published On - 5:14 pm, Sat, 2 April 22