ಅಶ್ಲೀಲ ವಿಡಿಯೋಗಳು ಮೊಬೈಲ್ನಲ್ಲಿ ಸುಲಭಕ್ಕೆ ಸಿಗುವುದೇ ಅತ್ಯಾಚಾರ ಹೆಚ್ಚಲು ಕಾರಣ: ಗುಜರಾತ್ ಗೃಹ ಸಚಿವ
ಎಲ್ಲಾದರೂ ಅತ್ಯಾಚಾರ ನಡೆದರೆ ಸಾಕು, ಅಲ್ಲಿನ ಕಾನೂನು ವ್ಯವಸ್ಥೆಯನ್ನು, ಪೊಲೀಸ್ ಸಿಬ್ಬಂದಿಯನ್ನು ದೂಷಿಸುವುದನ್ನು ಪರಿಪಾಠ ಮಾಡಿಕೊಂಡುಬಿಟ್ಟಿದ್ದೇವೆ. ಆದರೆ ಇಂಥ ಘಟನೆ ನಡೆದಾಗ ನಾವು ಕೇವಲ ಪೊಲೀಸರನ್ನು ದೂಷಿಸುವುದು ಸರಿಯಲ್ಲ ಎಂದೂ ಸಚಿವರು ಹೇಳಿದ್ದಾರೆ.

ಪ್ರತಿದಿನ ಒಂದಲ್ಲ ಒಂದು ಪ್ರದೇಶದಿಂದ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಅತ್ಯಂತ ಭೀಕರ, ಹೇಯ ಎನ್ನಿಸುವ, ಕನಿಕರ ಹುಟ್ಟಿಸುವ, ಕ್ರೌರ್ಯ ಹೀಗೂ ಇರುತ್ತದೆಯಾ ಎಂಬ ಭಾವ ತರುವ ರೇಪ್ ಕೇಸ್ಗಳು ವರದಿಯಾಗುತ್ತಲೇ ಇರುತ್ತವೆ. ಎಷ್ಟೇ ಕಠಿಣ ಕಾನೂನು ತಂದರೂ ಕಾಮುಕರು ಅದನ್ನೆಲ್ಲ ಮೀರಿ ಅಪರಾಧವೆಸಗುತ್ತಲೇ ಇದ್ದಾರೆ. ಹೀಗೆ ಅತ್ಯಾಚಾರ ಹೆಚ್ಚಾಗಲು ಕಾರಣಗಳನ್ನು ಏಕಮುಖವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಕಾಮುಕರ ವಿಕೃತ ಕಾಮಕ್ಕೆ ಮುಖವೂ ಇಲ್ಲ, ಮನುಷ್ಯತ್ವವೂ ಇಲ್ಲ.
ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ಗುಜರಾತ್ ಗೃಹ ಇಲಾಖೆ ಸಚಿವ ಹರ್ಷ ಸಂಘ್ವಿ ಮಾತನಾಡಿದ್ದಾರೆ. ಈಗೀಗ ಅಶ್ಲೀಲ ಚಿತ್ರಗಳು, ಪೋರ್ನ್ ವಿಡಿಯೋಗಳೆಲ್ಲ ಮೊಬೈಲ್ನಲ್ಲಿ ಅತ್ಯಂತ ಸುಲಭವಾಗಿ ಸಿಗುತ್ತವೆ. ಯಾರು ಬೇಕಾದರೂ ಅದನ್ನು ನೋಡುವಷ್ಟು ಸರಳವಾಗಿದೆ. ಹೀಗಾಗಿಯೇ ದೇಶದಲ್ಲಿ ರೇಪ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತದಲ್ಲಿ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು, ಸಂತ್ರಸ್ತ ಯುವತಿಯ ಸಂಬಂಧಿಕರೋ, ಕುಟುಂಬದ ಸದಸ್ಯರೋ ಅಥವಾ ನೆರೆಹೊರೆಯವರೇ ಆಗಿರುತ್ತಾರೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲಾದರೂ ಅತ್ಯಾಚಾರ ನಡೆದರೆ ಸಾಕು, ಅಲ್ಲಿನ ಕಾನೂನು ವ್ಯವಸ್ಥೆಯನ್ನು, ಪೊಲೀಸ್ ಸಿಬ್ಬಂದಿಯನ್ನು ದೂಷಿಸುವುದನ್ನು ಪರಿಪಾಠ ಮಾಡಿಕೊಂಡುಬಿಟ್ಟಿದ್ದೇವೆ. ಆದರೆ ಇಂಥ ಘಟನೆ ನಡೆದಾಗ ನಾವು ಕೇವಲ ಪೊಲೀಸರನ್ನು ದೂಷಿಸುವುದು ಸರಿಯಲ್ಲ. ಇಡೀ ಸಮಾಜವೇ ಹೊಣೆಯಾಗುತ್ತದೆ. ಒಂದೊಮ್ಮೆ ಅಪ್ಪ ತನ್ನ ಮಗಳ ಮೇಲೆಯೇ ಅತ್ಯಾಚಾರ ಮಾಡಿದರೆ, ಅದು ದೊಡ್ಡ ಮಟ್ಟದ ಹೇಯಕೃತ್ಯ. ಅದಕ್ಕೆ ಕಾರಣವೂ ಮೊಬೈಲ್ ಫೋನ್. ಈ ಫೋನ್ನಿಂದ ಕ್ರೈಂಗಳ ಪ್ರಮಾಣವೂ ಹೆಚ್ಚುತ್ತಿದೆ ಎಂಬುದನ್ನು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಇದ್ದುದರಲ್ಲಿ ದೇಶದಲ್ಲಿಯೇ, ಗುಜರಾತ್ ಅತ್ಯಂತ ಸುರಕ್ಷಿತ ರಾಜ್ಯ. ಇಲ್ಲಿ ಅತ್ಯಾಚಾರ ಪ್ರಕರಣಗಳು ಕಡಿಮೆ ಎಂದು ಸಚಿವರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: K Annamalai: ಮಾಜಿ ಐಪಿಎಸ್, ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ, ಅವರಿಗಿದ್ದ ಭೀತಿ ಏನು?




