ಕೊಲ್ಕತ್ತಾ: ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರೈಲ್ವೇ ಹಳಿಗಳನ್ನು ದಾಟಲು ಹೋಗಿ ಅದೆಷ್ಟೋ ವನ್ಯಜೀವಿಗಳು ರೈಲಿಗೆ ಸಿಲುಕಿ ಜೀವಬಿಡುವ ದಾರುಣ ಘಟನೆಗಳು ವರ್ಷಂಪ್ರತಿ ಮರುಕಳಿಸುತ್ತಲೇ ಇರುತ್ತವೆ. ಕಾಡಿನ ದೈತ್ಯ ಜೀವಿಯೆಂದೇ ಗುರುತಿಸಿಕೊಳ್ಳುವ ಆನೆಗಳು ಸಹ ಹಳಿ ದಾಟುವಾಗ ರೈಲಿಗೆ ಸಿಲುಕಿ ಜೀವಬಿಟ್ಟ ಹಲವು ಪ್ರಕರಣಗಳಿವೆ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ರಾಜ್ಯದ ಸಿವೋಕ್ – ಗುಲ್ಮಾ ಪ್ರದೇಶದಲ್ಲಿ ಇಂಥದ್ದೇ ಒಂದು ಪ್ರಕರಣ ದಾಖಲಾಗಬೇಕಿತ್ತು. ಮರಿಯಾನೆಯೊಂದಿಗೆ ಇನ್ನೆರೆಡು ದೊಡ್ಡ ಆನೆಗಳು ಹಳಿ ದಾಟುತ್ತಿರುವಾಗಲೇ ರೈಲು ಸ್ಥಳಕ್ಕಾಗಮಿಸಿದೆ. ಇನ್ನೇನು ರೈಲು ಆನೆಗಳಿಗೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲಿನ ವೇಗವನ್ನು ಹತೋಟಿಗೆ ತಂದು ಆನೆಗಳಿಂದ ಸ್ವಲ್ಪ ದೂರದಲ್ಲಿಯೇ ರೈಲನ್ನು ನಿಲ್ಲಿಸಿದ್ದಾನೆ!
ಜೊತೆಗೆ ಮರಿಯಾನೆ ಹಾಗೂ ದೊಡ್ಡ ಆನೆಗಳೆರೆಡೂ ಹಳಿ ದಾಟುವ ತನಕ ಕಾದು ನಂತರವೇ ಮುಂದೆ ಹೊರಟಿದ್ದಾನೆ. ಈ ಘಟನೆಯ ವಿಡಿಯೋ ಚಾಲಕನ ಮೊಬೈಲಿನಲ್ಲಿ ಸೆರೆಯಾಗಿದ್ದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಚಾಲಕನ ಸಮಯ ಪ್ರಜ್ಞೆಗೆ ಭೇಷ್ ಅಂದಿದ್ದಾರೆ. ಈ ಹಿಂದೆ 2018ರಲ್ಲಿ ಕರ್ನಾಟಕದ ಸಕಲೇಶಪುರದ ಬಳಿಯ ಕಾಕನಮನೆ ಹಾಗೂ ಎಡಕುಮೇರಿ ಬಳಿ ಏಳು ತಿಂಗಳ ಅಂತರದಲ್ಲಿ ಮೂರು ಆನೆಗಳು ರೈಲ್ವೇ ಅಪಘಾತಕ್ಕೆ ಬಲಿಯಾಗಿದ್ನನ್ನು ಸ್ಮರಿಸಬಹುದು.
The alertness & prompt action of loco pilot & crew helped to save lives of three elephants ? including one baby elephant crossing rail tracks on Sivok-Gulma section in West Bengal.
The train stopped immediately, waiting for the elephants to safely cross over to the other side. pic.twitter.com/tYTgkydkJb
— Piyush Goyal (@PiyushGoyal) November 11, 2020