AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ವಿವಾಹದಲ್ಲಿ ಸಪ್ತಪದಿ ಇಲ್ಲದಿದ್ದರೆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲಾಗದು: ಅಲಹಾಬಾದ್ ಹೈಕೋರ್ಟ್​

ಹಿಂದೂ ವಿವಾಹದಲ್ಲಿ ಸಪ್ತಪದಿ(Saptapadi) ಇಲ್ಲದಿದ್ದರೆ ಆ ಮದುವೆ(Marriage)ಯನ್ನು ಮಾನ್ಯವೆಂದು ಕರೆಯಲಾಗದು ಎಂದು ಅಲಹಾಬಾದ್​ ಹೈಕೋರ್ಟ್​ ಹೇಳಿದೆ. ಸಂಪ್ರದಾಯಗಳ ಪ್ರಕಾರ ಆದ ವಿವಾಹವನ್ನು ಮಾತ್ರ ಕಾನೂನಿನ ದೃಷ್ಟಿಯಲ್ಲಿ ಮಾನ್ಯ ವಿವಾಹವೆಂದು ಪರಿಗಣಿಸಬಹುದು. ಹಾಗಾಗದಿದ್ದಲ್ಲಿ ಕಾನೂನಿನ ದೃಷ್ಟಿಯಲ್ಲಿ ಅಂತಹ ವಿವಾಹವನ್ನು ಮಾನ್ಯ ವಿವಾಹವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಾರಾಣಸಿಯ ಸ್ಮೃತಿ ಸಿಂಗ್ ಅಲಿಯಾಸ್ ಮೌಶುಮಿ ಸಿಂಗ್ ಅವರ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರ ಏಕ ಪೀಠದಲ್ಲಿ ವಿಚಾರಣೆ ನಡೆಸಲಾಯಿತು.

ಹಿಂದೂ ವಿವಾಹದಲ್ಲಿ ಸಪ್ತಪದಿ ಇಲ್ಲದಿದ್ದರೆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲಾಗದು: ಅಲಹಾಬಾದ್ ಹೈಕೋರ್ಟ್​
ಸಪ್ತಪದಿImage Credit source: Hindupriest.com
Follow us
ನಯನಾ ರಾಜೀವ್
|

Updated on: Oct 05, 2023 | 7:54 AM

ಹಿಂದೂ ವಿವಾಹದಲ್ಲಿ ಸಪ್ತಪದಿ(Saptapadi) ಇಲ್ಲದಿದ್ದರೆ ಆ ಮದುವೆ(Marriage)ಯನ್ನು ಮಾನ್ಯವೆಂದು ಕರೆಯಲಾಗದು ಎಂದು ಅಲಹಾಬಾದ್​ ಹೈಕೋರ್ಟ್​ ಹೇಳಿದೆ. ಸಂಪ್ರದಾಯಗಳ ಪ್ರಕಾರ ಆದ ವಿವಾಹವನ್ನು ಮಾತ್ರ ಕಾನೂನಿನ ದೃಷ್ಟಿಯಲ್ಲಿ ಮಾನ್ಯ ವಿವಾಹವೆಂದು ಪರಿಗಣಿಸಬಹುದು. ಹಾಗಾಗದಿದ್ದಲ್ಲಿ ಕಾನೂನಿನ ದೃಷ್ಟಿಯಲ್ಲಿ ಅಂತಹ ವಿವಾಹವನ್ನು ಮಾನ್ಯ ವಿವಾಹವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಾರಾಣಸಿಯ ಸ್ಮೃತಿ ಸಿಂಗ್ ಅಲಿಯಾಸ್ ಮೌಶುಮಿ ಸಿಂಗ್ ಅವರ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರ ಏಕ ಪೀಠದಲ್ಲಿ ವಿಚಾರಣೆ ನಡೆಸಲಾಯಿತು.

ಅರ್ಜಿದಾರರ ವಿರುದ್ಧ ಸಲ್ಲಿಸಿದ್ದ ದೂರನ್ನು ನ್ಯಾಯಾಲಯ ರದ್ದುಪಡಿಸಿ ಸಮನ್ಸ್ ಹೊರಡಿಸಿದೆ. ವಿಚ್ಛೇದನ ನೀಡದೆ ಮರುಮದುವೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಅರ್ಜಿದಾರರ ವಿರುದ್ಧ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಆಕೆಯ ಪತಿ ಮತ್ತು ಅತ್ತೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ಸಮನ್ಸ್ ಜಾರಿ ಮಾಡಿತ್ತು.

ಈ ದೂರು ಮತ್ತು ಸಮನ್ಸ್ ಅನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಜೂನ್ 5, 2017 ರಂದು ಸತ್ಯಂ ಸಿಂಗ್ ಅವರನ್ನು ಮದುವೆಯಾಗಿರುವುದಾಗಿ ಅರ್ಜಿದಾರರು ಹೇಳಿದ್ದಾರೆ. ಇಬ್ಬರ ಮದುವೆಯೂ ಕೈಗೂಡಲಿಲ್ಲ ಮತ್ತು ವಿವಾದಗಳ ಕಾರಣ ಅರ್ಜಿದಾರರು ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ, ಹಲ್ಲೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಿದ್ದರು. ಮನೆಯವರು ತನಗೆ ಥಳಿಸಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ವೇಳೆ ಅರ್ಜಿದಾರರು ಮೊದಲ ಪತಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಾರೆ ಎಂದು ಪತಿ ಮತ್ತು ಅತ್ತೆಯ ಪರವಾಗಿ ಪೊಲೀಸ್ ಅಧಿಕಾರಿಗಳಿಗೆ ದೂರು ಪತ್ರ ನೀಡಿದ್ದಾರೆ. ಸಿಒ ಸದರ್ ಮಿರ್ಜಾಪುರ್ ಅವರು ಈ ದೂರಿನ ತನಿಖೆ ನಡೆಸಿ ಅದನ್ನು ಮದುವೆ ಸುಳ್ಳು ಎಂದು ಹೇಳಿ ವರದಿ ಸಲ್ಲಿಸಿದ್ದಾರೆ.

ಮತ್ತಷ್ಟು ಓದಿ: 1 ವರ್ಷದ ಮಗುವಾಗಿದ್ದಾಗ ಆಗಿದ್ದ ಮದುವೆಯನ್ನು 20 ವರ್ಷದ ಬಳಿಕ ವಜಾಗೊಳಿಸಿದ ನ್ಯಾಯಾಲಯ

ಇದಾದ ನಂತರ ಅರ್ಜಿದಾರರ ಪತಿ ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ನ್ಯಾಯಾಲಯವು ಅರ್ಜಿದಾರರಿಗೆ ಸಮನ್ಸ್ ಜಾರಿ ಮಾಡಿತ್ತು. ಅರ್ಜಿದಾರರು ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಂಪೂರ್ಣ ಸುಳ್ಳು ಎಂದು ಹೇಳಲಾಗಿದೆ. ಅರ್ಜಿದಾರರು ದಾಖಲಿಸಿರುವ ಪ್ರಕರಣಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಮದುವೆ ಸಮಾರಂಭ ನಡೆದಿರುವ ಬಗ್ಗೆ ದೂರಿನಲ್ಲಿ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ವಿವಾಹದ ಅತ್ಯಗತ್ಯ ಆಚರಣೆಯಾದ ಸಪ್ತಪದಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹುಡುಗಿಯ ಮುಖ ಕೂಡ ಸ್ಪಷ್ಟವಾಗಿಲ್ಲ. ಅರ್ಜಿದಾರರ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ಮದುವೆ ಸಮಾರಂಭ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆದರೆ ಮಾನ್ಯವಾದ ಮದುವೆಗೆ, ಎಲ್ಲಾ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ವಿವಾಹ ಸಮಾರಂಭವನ್ನು ಪೂರ್ಣಗೊಳಿಸುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟಿದೆ. ಹಾಗಾಗದಿದ್ದರೆ ಕಾನೂನಿನ ದೃಷ್ಟಿಯಲ್ಲಿ ಅದು ಮಾನ್ಯವಾದ ವಿವಾಹವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹಿಂದೂ ವಿವಾಹದ ಸಿಂಧುತ್ವವನ್ನು ಸ್ಥಾಪಿಸಲು ಸಪ್ತಪದಿ ಅತ್ಯಗತ್ಯ ಅಂಶವಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಇದಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ. ಕೇವಲ ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಅಮಾಯಕರನ್ನು ರಕ್ಷಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ