25 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ಕೊಡಿ: ಪ್ರಧಾನಿಗೆ ಪತ್ರ ಬರೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

|

Updated on: Apr 05, 2021 | 10:12 PM

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕೋವಿಡ್-19 ನಿರ್ವಹಣೆ ಕುರಿತು ಸಂವಾದ ನಡೆಸಲು ಮೂರು ದಿನ ಬಾಕಿಯಿರುವಂತೆ ಈ ಬೆಳವಣಿಗೆ ನಡೆದಿರುವುದು ವಿಶೇಷ ಎನಿಸಿದೆ.

25 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ಕೊಡಿ: ಪ್ರಧಾನಿಗೆ ಪತ್ರ ಬರೆದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
Follow us on

ಮುಂಬೈ: ‘25 ವರ್ಷ ದಾಟಿದ ಎಲ್ಲರಿಗೂ ಕೋವಿಡ್-19 ಲಸಿಕೆ ನೀಡಲು ಅನುಮತಿ ನೀಡಿ’ ಎಂದು ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ತಮ್ಮ ಹಿಂದಿನ ಪ್ರಸ್ತಾವವನ್ನು ಒಪ್ಪಿಕೊಂಡು 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪ್ರಧಾನಿಗೆ ಉದ್ಧವ್ ಧನ್ಯವಾದ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕೋವಿಡ್-19 ನಿರ್ವಹಣೆ ಕುರಿತು ಸಂವಾದ ನಡೆಸಲು ಮೂರು ದಿನ ಬಾಕಿಯಿರುವಂತೆ ಈ ಬೆಳವಣಿಗೆ ನಡೆದಿರುವುದು ವಿಶೇಷ ಎನಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರ ಬರೆಯುವ ಮೊದಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರಬರೆದಿದ್ದರು. ಹೊಸ ಲಸಿಕಾ ಕೇಂದ್ರಗಳ ಸ್ಥಾಪನೆಗೆ ಇರುವ ನಿಬಂಧನೆಗಳು ಮತ್ತು ಲಸಿಕೆ ಪಡೆಯುವವರಿಗೆ ವಿಧಿಸಿರುವ ವಯೋಮಿತಿ ಸಡಿಲಿಸುವಂತೆ ಕೋರಿದ್ದರು. ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ಕೊಡಿ ಎಂದು ಕೇಳಿದ್ದರು.

ಹೊಸ ಲಸಿಕಾ ಕೇಂದ್ರಗಳನ್ನು ಆರಂಭಿಸಲು ಅವಕಾಶ ಕೊಟ್ಟರೆ, ದೆಹಲಿ ಸರ್ಕಾರವು ಕೇವಲ 3 ತಿಂಗಳಲ್ಲಿ ಎಲ್ಲ ದೆಹಲಿ ನಿವಾಸಿಗಳಿಗೂ ಲಸಿಕೆ ನೀಡಬಲ್ಲದು ಎಂದು ಹೇಳಿದ್ದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದ್ದ ಕೇಜ್ರಿವಾಲ್, ಕೇಂದ್ರ ಸರ್ಕಾರದಿಂದ ಪ್ರತಿ ಹಂತದಲ್ಲಿಯೂ ನಮಗೆ ನೆರವು ಸಿಗುತ್ತಿದೆ. ನಮ್ಮ ವಿನಂತಿಯನ್ನು ಪರಿಗಣಿಸಿ ಈ ಪ್ರಸ್ತಾವಗಳಿಗೂ ಅನುಮೋದನೆ ನೀಡಬೇಕು ಎಂದು ಕೇಳಿದ್ದರು.

ಈ ನಡುವೆ ಸೋಮವಾರ ಪ್ರಕಟವಾಗಿರುವ ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಭಾರತದಲ್ಲಿ 1,03,558 ಸೋಂಕು ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 1,25,89,067ಕ್ಕೆ ಮುಟ್ಟಿದೆ.

ಗುರುವಾರ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿ ಸಭೆ
ಸೋಂಕಿತರ ಸಂಖ್ಯೆ ಹದ್ದು ಮೀರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 8, ಸಾಯಂಕಾಲ 6.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಕೊವಿಡ್​-18 ಸ್ಥಿತಿಯನ್ನು ಪರಾಮರ್ಶಿಸಲಿದ್ದಾರೆ. ರವಿವಾರದಂದು ಮುಂಬೈಯಲ್ಲಿ 12,472 ಮತ್ತು ಪುಣೆಯಲ್ಲಿ 11,206 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ ಆಸ್ಪತ್ರೆಗಳು ಸೋಂಕಿತರಿಗೆ ಭರ್ತಿಯಾಗುತ್ತಿರುವುದರಿಂದ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ದೊಡ್ಡ ಸಮಸ್ಯೆಯಾಗುತ್ತಿದೆ.

ದೆಹಲಿ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ 4,000 ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದರೆ, ಛತ್ತೀಸಗಡದ 5,000 ಕ್ಕೂ ಮಿಗಿಲಾಗಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯದಿಂದ ಬಿಡುಗಡೆಯಾಗಿರುವ ಮಾಹಿತಿ ಪ್ರಕಾರ ಈಗ ದೇಶದಲ್ಲಿ 7.4 ಲಕ್ಷದಷ್ಟು ಸಕ್ರಿಯ ಪ್ರಕರಣಗಳಿದ್ದು, ರವಿವಾರ ಒಂದೇ ದಿನ 478 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದೊಂದು ವಾರದಲ್ಲಿ ದೆಹಲಿಯೂ ಸೇರಿದಂತೆ ದೇಶದ ಕೆಲ ಭಾಗಗಳಲ್ಲಿ ಸೋಂಕಿನ ಪ್ರಮಾಣ ವಿಪರೀತವಾಗಿ ಜಾಸ್ತಿಯಾಗುತ್ತಿದೆ. ಕೊರೊನಾ ವೈರಸ್​ನ ಸುಧಾರಿತ ರೂಪ ಸೋಂಕಿನ ಪ್ರಮಾಣವನ್ನು ಹೆಚ್ಚಿಸುತ್ತಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಮೊದಲಾದ ದೇಶಗಳಲ್ಲಿ ಕಂಡುಬಂದ ವೈರಸ್​ನ ಇತರ ಪ್ರಬೇಧಗಳು ಭಾರತದ ನೂರಾರು ಸೋಂಕಿತರಲ್ಲಿ ಕಂಡುಬಂದಿವೆ.

(Allow Covid vaccination of all above 25 years writes Maharashtra Chief Minister Uddhav Thackeray to PM Narendra Modi)

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 5279, ಬೆಂಗಳೂರಿನಲ್ಲಿ 3728 ಮಂದಿಗೆ ಕೊರೊನಾ ಸೋಂಕು

ಇದನ್ನೂ ಓದಿ: Covid-19 India Update: ಭಾರತದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಸೋಂಕು, ಗುರುವಾರ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿ ಸಭೆ

Published On - 10:11 pm, Mon, 5 April 21