ಬನಿಹಾಲ್, ಜಮ್ಮು: ಸುರಕ್ಷತೆಯ ದೃಷ್ಟಿಯಿಂದ ಯಾತ್ರಾರ್ಥಿ ಮತ್ತು ಪ್ರವಾಸಿಗರು ಮಧ್ಯಾಹ್ನ 3.30 ನಂತರ ರಾಂಬನ್ ಜಿಲ್ಲೆಯ ಬನಿಹಾಲ್ ಪ್ರದೇಶದಿಂದ ಕಾಶ್ಮೀರ (Kashmir) ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಸುರಕ್ಷತಾ ಆಧಿಕಾರಿಯೊಬ್ಬರು ಶುಕ್ರವಾರ ಹೇಳಿದರು. ಅಮರನಾಥ ಯಾತ್ರೆಗಾಗಿ (Amarnath Pilgrimage) ನೋಂದಣಿ ಮಾಡಿಸಿಕೊಳ್ಳದವರು ಕೂಡ ಯಾತ್ರಾರ್ಥಿಗಳ ಹಾಗೆ ಕಣಿವೆಗೆ ಬರುತ್ತಿರುವುದರಿಂದ ಭದ್ರತೆಗೆ (security) ಸಂಬಂಧಿಸಿದ ಅಪಾಯಗಳು ಹೆಚ್ಚಿರುವ ಜೊತೆಗೆ ಜನರ ಸುರಕ್ಷತೆ ಸಮಸ್ಯೆಗಳೂ ಉಲ್ಬಣಿಸಿರುವುದರಿಂದ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆಂದು ಅಧಿಕಾರಿ ಹೇಳಿದರು.
‘ನೋಂದಣಿ ಮಾಡಿಸಿಕೊಂಡಿರದ ಯಾತ್ರಾರ್ಥಿಗಳು, ಆರ್ ಐ ಎಫ್ ಡಿ (ರೇಡಿಯೊ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಇಲ್ಲದೆ ಪ್ರಯಾಣಿಸುವವರು ಮತ್ತು ಪ್ರವಾಸಿಗರ ಸೋಗಿನಲ್ಲಿ ಪ್ರಯಾಣಿಸುವ ಜನರು ಮಧ್ಯಾಹ್ನ 3.30 ರ ಕಟ್-ಆಫ್ ಸಮಯದ ನಂತರ (ಬನಿಹಾಲ್ ಪ್ರದೇಶ) ನವಯುಗ್ ಸುರಂಗದಿಂದ ಕಾಶ್ಮೀರಕ್ಕೆ ತೆರಳಲು ಅನುಮತಿ ನೀಡಲಾಗದು,’ ಎಂದು ರಾಂಬನ್ ಪೊಲೀಸ್ ಅಧೀಕ್ಷಕಿ ಮೋಹಿತಾ ಶರ್ಮಾ ಬನಿಹಾಲ್ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಭದ್ರತೆಯ ದೃಷ್ಟಿಯಿಂದ ಅಮರನಾಥ ಯಾತ್ರಿಗಳು ಮತ್ತು ಪ್ರವಾಸಿಗರ ವಾಹನಗಳನ್ನು ಚಂದ್ರಕೋಟ್ ನಿಂದ ಕಾಶ್ಮೀರದೊಳಗೆ ಬಿಡಲಾಗುವುದಿಲ್ಲ ಮತ್ತು 3.30 ರ ಬಳಿಕ ಬನಿಹಾಲ್ ಸುರಂಗ ಮಾರ್ಗದ ಮೂಲಕ ಬಿಡಲಾಗದು. ಆದರೆ ಟ್ರಕ್ ಮತ್ತು ಇತರ ಸ್ಥಳೀಯರು ತಮ್ಮ ವಾಹನಗಳ ಜೊತೆ ಮಾಮೂಲಿನಂತೆ ಓಡಾಡಬಹುದು ಮೊಹಿತಾ ಶರ್ಮ ಹೇಳಿದರು.
ಚಂದ್ರಕೋಟ್ ನಲ್ಲಿ ತಡೆಹಿಡಿಯಲಾಗುವ ಯಾತ್ರಿಗಳಿಗೆ ಅಲ್ಲಿರುವ ಯಾತ್ರಿ ನಿವಾಸ್ನಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಯಾತ್ರೆಯ ಸಂದರ್ಭದಲ್ಲಿ ಹೆದ್ದಾರಿಯ ಮೂಲಕ ಸ್ಥಳೀಯರ ಸಂಚಾರಕ್ಕೆ ನಿರ್ಬಂಧಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ, ಶಾಲಾ ವಿದ್ಯಾರ್ಥಿಗಳು, ನೌಕರರು ಮತ್ತು ರೋಗಿಗಳನ್ನು ಕರೆದೊಯ್ಯುವ ಸ್ಥಳೀಯ ವಾಹನಗಳನ್ನು ಒಂದಾದ ನಂತರ ಒಂದರಂತೆ ಹೋಗುವ ಅನುಮತಿ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Amarnath Yatra 2022: ಇಂದಿನಿಂದ ಅಮರನಾಥ ಯಾತ್ರೆ ಆರಂಭ; ಹಿಮಾಲಯದಲ್ಲಿ ಬಿಗಿ ಭದ್ರತೆ