ಹಿಂದಿ ಹೇರಿಕೆ ವಿರೋಧಿಸಿ ಬಿಜೆಪಿಗೆ ರಾಜೀನಾಮೆ ನೀಡಿದ ತಮಿಳು ನಟಿ ವಿಜಯ್ ಅವರ ಟಿವಿಕೆಗೆ ಸೇರ್ಪಡೆ

|

Updated on: Feb 26, 2025 | 4:43 PM

ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಪ್ರಮುಖ ಅಂಶವಾದ ತ್ರಿಭಾಷಾ ಸೂತ್ರವನ್ನು ತಮಿಳುನಾಡಿನಲ್ಲಿ ತೀವ್ರವಾಗಿ ವಿರೋಧಿಸಲಾಗುತ್ತಿದೆ. 'ಹಿಂದಿ ಹೇರಿಕೆ' ವಿವಾದದ ನಡುವೆ ತಮಿಳು ನಟಿ ರಂಜನಾ ನಚ್ಚಿಯಾರ್ ಬಿಜೆಪಿ ತೊರೆದು ವಿಜಯ್ ಅವರ ಟಿವಿಕೆಗೆ ಸೇರ್ಪಡೆಗೊಂಡಿದ್ದಾರೆ. ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿ ಕಲಿಕೆಯ ವಿವಾದವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಲು ಕಾರಣವಾಗಿದೆ.

ಹಿಂದಿ ಹೇರಿಕೆ ವಿರೋಧಿಸಿ ಬಿಜೆಪಿಗೆ ರಾಜೀನಾಮೆ ನೀಡಿದ ತಮಿಳು ನಟಿ ವಿಜಯ್ ಅವರ ಟಿವಿಕೆಗೆ ಸೇರ್ಪಡೆ
Ranjana Natchiyaar
Follow us on

ಚೆನ್ನೈ: ತಮಿಳುನಾಡಿನಲ್ಲಿ ನಟಿ ರಂಜನಾ ನಚ್ಚಿಯಾರ್ ಇಂದು ಬಿಜೆಪಿ ತೊರೆದು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸೇರಿದ್ದಾರೆ. 8 ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಅವರು ಹಿಂದಿ ಹೇರಿಕೆ ಸೇರಿದಂತೆ ಬಿಜೆಪಿಯ ಕೆಲವು ನೀತಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ನಿನ್ನೆ ರಾಜೀನಾಮೆ ನೀಡಿದ್ದರು. ಇದೀಗ ಇಂದು ನಟ ವಿಜಯ್ ಅವರ ಟಿವಿಕೆ ಸೇರಿದ್ದಾರೆ. ಚೆನ್ನೈ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ವಿಜಯ್ ಆಯೋಜಿಸಿದ್ದ ಟಿವಿಕೆ ವಾರ್ಷಿಕೋತ್ಸವದ ಸಮಾರಂಭದಲ್ಲಿ ಇಂದು ಬೆಳಿಗ್ಗೆ ಹಾಜರಿದ್ದ ರಂಜನಾ ನಚ್ಚಿಯಾರ್ ತಮ್ಮ ಹೊಸ ರಾಜಕೀಯ ಮುಖ್ಯಸ್ಥರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಜಯ್ ಅವರನ್ನು “ಭವಿಷ್ಯದ ಎಂಜಿಆರ್” ಎಂದು ಕರೆದಿದ್ದಾರೆ.

1970 ಮತ್ತು 80ರ ದಶಕಗಳಲ್ಲಿ 10 ವರ್ಷ ಮುಖ್ಯಮಂತ್ರಿಯಾಗಿದ್ದ ಮತ್ತು ಪ್ರಸ್ತುತ ವಿರೋಧ ಪಕ್ಷದಲ್ಲಿರುವ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಅನ್ನು ಸ್ಥಾಪಿಸಿದ ದಿವಂಗತ ನಟ-ರಾಜಕಾರಣಿ ಎಂ.ಜಿ. ರಾಮಚಂದ್ರನ್ ಅವರ ಜೊತೆ ವಿಜಯ್ ದಳಪತಿ ಅವರನ್ನು ರಂಜನಾ ಹೋಲಿಸಿದ್ದಾರೆ. “ವಿಜಯ್ ತಮಿಳುನಾಡಿಗೆ ದೊಡ್ಡ ಭರವಸೆ” ಎಂದು ನಟಿ ರಂಜನಾ ಬಣ್ಣಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಭಾಷಾ ಸಮರಕ್ಕೆ ತಮಿಳುನಾಡು ಸಿದ್ಧ; ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸ್ಟಾಲಿನ್ ಗುಡುಗು


“ಒಬ್ಬ ತಮಿಳು ಮಹಿಳೆಯಾಗಿ ತ್ರಿಭಾಷಾ ನೀತಿಯ ಹೇರಿಕೆ, ದ್ರಾವಿಡರ ಬಗ್ಗೆ ಹೆಚ್ಚುತ್ತಿರುವ ದ್ವೇಷ ಮತ್ತು ತಮಿಳುನಾಡಿನ ಅಗತ್ಯತೆಗಳ ನಿರ್ಲಕ್ಷ್ಯವನ್ನು ನಾನು ಒಪ್ಪಲು ಸಾಧ್ಯವಿಲ್ಲ.” ಎಂದು ಬಿಜೆಪಿಗೆ ಬರೆದ ರಾಜೀನಾಮೆ ಪತ್ರದಲ್ಲಿ ರಂಜನಾ ಉಲ್ಲೇಖಿಸಿದ್ದಾರೆ. ಸಾಂಪ್ರದಾಯಿಕವಾಗಿ ತೀವ್ರ ಪ್ರತಿಸ್ಪರ್ಧಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಇದೀಗ ಎಲ್ಲಾ ಶಾಲೆಗಳು ಮೂರನೇ ಭಾಷೆಯಾಗಿ ಹಿಂದಿಯ ಬೋಧನೆಯನ್ನು ಕಡ್ಡಾಯಗೊಳಿಸುವಂತೆ ನಿರ್ದೇಶಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಗೊಳಿಸಲು ಬಿಜೆಪಿಯ ಪ್ರಯತ್ನಗಳನ್ನು ಟೀಕಿಸುವಲ್ಲಿ ಒಗ್ಗಟ್ಟಾಗಿವೆ.


ಶಾಲೆಗಳಲ್ಲಿ ಮೂರನೇ ಭಾಷೆಯ ವಿವಾದವು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತೀವ್ರ ವಾಗ್ದಾಳಿಗಳಿಗೆ ಕಾರಣವಾಯಿತು. ತಮಿಳುನಾಡು ರಾಜ್ಯವು ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರದಿದ್ದರೆ ಕೇಂದ್ರದಿಂದ 2,400 ಕೋಟಿ ರೂ. ಹಣವನ್ನು ತಡೆಹಿಡಿಯಲಾಗುವುದು ಎಂದು ಹೇಳಿಕೆ ನೀಡಿದ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಸಿಎಂ ಸ್ಟಾಲಿನ್ ವಾಗ್ದಾಳಿ ನಡೆಸಿದ್ದು, ಇದು “ಬ್ಲ್ಯಾಕ್‌ಮೇಲ್” ಎಂದು ಆರೋಪಿಸಿದ್ದರು.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತಮ್ಮ ರಾಜ್ಯವು ಮತ್ತೊಂದು ‘ಭಾಷಾ ಯುದ್ಧ’ಕ್ಕೆ ಸಿದ್ಧವಾಗಿದೆ ಎಂದು ಎಚ್ಚರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ