ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್: ಅಧಿಕಾರಕ್ಕೆ ಬಿಜೆಪಿ, ಕಾಂಗ್ರೆಸ್ ಪೈಪೋಟಿ
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಮೂಹರ್ತ ಫಿಕ್ಸ್ ಆಗಿದೆ. ಫೆಬ್ರವರಿ 28 ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಕಸರತ್ತು ನಡೆಸುತ್ತಿವೆ. ಅದರಲ್ಲೂ ಒಂದು ಕಡೆ ಬಹುಮತ ಇರದಿದ್ದರೂ ಈ ಬಾರಿ ಕೈ ಪಾಳೆಯಕ್ಕೆ ಅಧಿಕಾರ ಸಿಗುವ ಎಲ್ಲಾ ಸಾಧ್ಯತೆ ಇದೆ. ಇನ್ನೊಂದೆಡೆ ಸಂಖ್ಯಾಬಲ ಇದ್ರೂ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿ ಇದೆ.

ಗದಗ, ಫೆಬ್ರವರಿ 26: ಗದಗ ಬೆಟಗೇರಿ ನಗರಸಭೆಯಲ್ಲಿ ಈಗಾಗಲೇ ಬಿಜೆಪಿ ಅರ್ಧ ಅವಧಿಗೆ ಆಡಳಿತ ನಡೆಸಿದೆ. ಪೂರ್ಣ ಬಹುತ, ಸದಸ್ಯರ ಸಂಖ್ಯಾಬಲದಿಂದ ಐದು ವರ್ಷಗಳ ಕಾಲ ನಾವೇ ಆಡಳಿತ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದರು. ಆದರೆ, ತಾವೇ ತೋಡಿಕೊಂಡ ಖೆಡ್ಡಾಕೆ ಬಿದ್ದು ಈಗ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮೊದಲೇ ಅಧಿಕಾರವಿಲ್ಲದೆ ಹಪಾಹಪಿಯಲ್ಲಿದ್ದ ಕಾಂಗ್ರೆಸ್ನವರು ಈಗ ಇದೇ ಸಮಯ ಸಾಧಿಸಿ ನಗರಸಭೆ ಅಧಿಕಾರದ ಗದ್ದುಗೆ ಏರೋದಕ್ಕೆ ರೆಡಿಯಾಗಿದ್ದಾರೆ. ನಕಲಿ ಸಹಿ ಮಾಡಿ ವಕಾರ್ ಸಾಲ್ ಜಾಗ ಪರಬಾರೆ ಮಾಡಿರೋ ಆರೋಪದ ಮೇಲೆ ಬಿಜೆಪಿಯ ಮೂವರು ಸದಸ್ಯರನ್ನ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅಮಾನತು ಮಾಡಿದ ಬೆನ್ನಲ್ಲೇ ಸ್ಥಳೀಯ ಅಧಿಕಾರಿಗಳು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ದಿನಾಂಕವನ್ನ ಘೋಷಣೆ ಮಾಡಿದ್ದಾರೆ. ಇದು ಈಗ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಷ್ಟೆಲ್ಲಾ ಹೈಡ್ರಾಮಾ ನಡುವೆಯೇ ಧಾರವಾಡ ವಿಭಾಗಿಯ ಪೀಠ ಈಗ ಬೆಳಗಾವಿ ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಆದೇಶವನ್ನ ರದ್ದುಗೊಳಿಸಿ ಮರುಪರಿಶೀಲನೆ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಹೀಗಾಗಿ ಇದೇ ಆದೇಶ ಮುಂದೆ ಇಟ್ಟುಕೊಂಡು ಬಿಜೆಪಿಯ ಮುಖಂಡರು ಡಿಸಿ ಕಚೇರಿ ಕದ ತಟ್ಟಿದ್ದಾರೆ. ಮೂವರು ಸದಸ್ಯರಿಗೆ ಚುನಾವಣೆಯಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಅಂತ ಒತ್ತಾಯ ಮಾಡಿದ್ದಾರೆ.
ಡಿಸಿ ಖಡಕ್ ನಿರ್ಧಾರ: ಬಿಜೆಪಿ ಮುಖಂಡರಿಗೆ ನಿರಾಶೆ
ಇನ್ನು ಡಿಸಿಯವರನ್ನ ಭೇಟಿ ಮಾಡಿದ ಬಿಜೆಪಿಯ ಮುಖಂಡರಿಗೆ ನಿರಾಶೆ ಮೂಡಿಸಿದೆ. ಗದಗ ಡಿಸಿ ಶ್ರೀಧರ್ ಅವರು ಬಿಜೆಪಿಯವರಿಗೆ ಕೋರ್ಟ್ ಆದೇಶ ತರುವಂತೆ ಸೂಚನೆ ನೀಡಿ ವಾಪಸ್ ಕಳಿಸಿದ್ದಾರೆ. ಹೀಗಾಗಿ ಇದೇ 28 ರಂದು ನಡೆಯುವ ಚುನಾವಣೆಯಲ್ಲಿ ಎರಡೇ ದಿನಗಳ ಅಂತರದಲ್ಲಿ ಕೋರ್ಟ್ ಆದೇಶ ತರುವುದು ಹೇಗೆ ಎಂದು ಬಿಜೆಪಿಯವರು ಚಿಂತೆಗೀಡಾಗಿದ್ದಾರೆ.
ಅಧಿಕಾರಿಗಳು ಸಚಿವ ಎಚ್ಕೆ ಪಾಟೀಲ್ ಕೈಗೊಂಬೆಗಳು: ಬಿಜೆಪಿ ಆರೋಪ
ಇನ್ನು ಡಿಸಿ ಸೇರಿದಂತೆ ಚುನಾವಣಾ ಅಧಿಕಾರಿ ಎಸಿ ಗಂಗಪ್ಪ ಅವರ ಮೇಲೆ ಕೆಂಡ ಕಾರುತ್ತಿದ್ದಾರೆ. ಮುಖ್ಯವಾಗಿ, ಗದಗನಲ್ಲಿ ಕಾನೂನು ಪಾಲನೆಯಾಗ್ತಿಲ್ಲ. ಅಧಿಕಾರಿಗಳು ಕಾನೂನು ಸಚಿವ ಎಚ್ಕೆ ಪಾಟೀಲ್ ಕೈಗೊಂಬೆಯಾಗಿದ್ದಾರೆ. ಅಧಿಕಾರದ ಆಸೆಗಾಗಿ ಕಾನೂನು ಗಾಳಿಗೆ ತೂರಿ ಒಬ್ಬ ದಲಿತ ಮಹಿಳಾ ಸದಸ್ಯೆಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಅಮಾನತು ಶಿಕ್ಷೆಗೆ ಒಳಗಾಗಿರೋ ಮಾಜಿ ಅಧ್ಯಕ್ಷೆ ಉಷಾ ದಾಸರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಈ ವರ್ತನೆಯ ಹಿಂದೆ ಸಚಿವ ಪಾಟೀಲ್ ಇದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಳೆ ವಿಮೆಯಲ್ಲಿ ಭಾರಿ ಅಕ್ರಮದ ಅನುಮಾನ: ಮಧ್ಯವರ್ತಿಗಳ ಮೂಲಕ ವಿಮೆ ಮಾಡಿದ ರೈತರಿಗಷ್ಟೇ ಹಣ ಜಮೆ
ಇದೇ 28 ರಂದು ಅಧ್ಯಕ್ಷರ ಚುನಾವಣೆ ನಿಗದಿಯಾಗಿದೆ. ಇಷ್ಟೆಲ್ಲ ರಾದ್ಧಾಂತ ನಡುವೆಯೂ ಕೋರ್ಟ್ ಮೊರೆಹೋಗೋದಾಗಿ ಸದಸ್ಯರು ಹೇಳ್ತಿದ್ದಾರೆ. ಚುನಾವಣೆಯಲ್ಲಿ ನಮಗೆ ಅವಕಾಶ ಕೊಡಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ನಗರಸಭೆ ಗದ್ದುಗೆ ಗುದ್ದಾಟದಲ್ಲಿ ಬಿಜೆಪಿ ಪಾಲಾಗಲಿದೆಯೋ ಅಥವಾ ಕಾಂಗ್ರೆಸ್ ಪಾಲಾಗುಗಲಿದೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Wed, 26 February 25