ಉತ್ತರ ಪ್ರದೇಶ ಸರ್ಕಾರದಿಂದ ಧಾರ್ಮಿಕ ಸ್ಥಳಗಳಲ್ಲಿನ 45 ಸಾವಿರಕ್ಕೂ ಹೆಚ್ಚು ಧ್ವನಿವರ್ಧಕಗಳ ತೆರವು

| Updated By: ಸುಷ್ಮಾ ಚಕ್ರೆ

Updated on: Apr 30, 2022 | 5:21 PM

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ತಿಂಗಳ ಆರಂಭದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಧ್ವನಿಯನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದ್ದರು.

ಉತ್ತರ ಪ್ರದೇಶ ಸರ್ಕಾರದಿಂದ ಧಾರ್ಮಿಕ ಸ್ಥಳಗಳಲ್ಲಿನ 45 ಸಾವಿರಕ್ಕೂ ಹೆಚ್ಚು ಧ್ವನಿವರ್ಧಕಗಳ ತೆರವು
ಲೌಡ್ ಸ್ಪೀಕರ್
Follow us on

ಲಕ್ನೋ: ಉತ್ತರ ಪ್ರದೇಶದ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಹಾಕಲಾಗಿದ್ದ 45,773 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು (UP Police) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದು, ಉತ್ತರ ಪ್ರದೇಶದ ವಿವಿಧ ಧಾರ್ಮಿಕ ಸ್ಥಳಗಳಿಂದ ಇದುವರೆಗೆ 45,773 ಧ್ವನಿವರ್ಧಕಗಳನ್ನು (Loudspeakers) ತೆಗೆದುಹಾಕಲಾಗಿದೆ ಮತ್ತು 58,861 ಧ್ವನಿವರ್ಧಕಗಳ ಧ್ವನಿ ಮಟ್ಟವನ್ನು ಕಡಿಮೆ ಮಾಡಲು ಸೂಚಿಸಲಾಗಿದೆ ಎಂದಿದ್ದಾರೆ.

ಧಾರ್ಮಿಕ ಸ್ಥಳಗಳಿಂದ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಲು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದ ಕೆಲವು ದಿನಗಳ ನಂತರ ಈ ಆದೇಶ ನೀಡಲಾಗಿದೆ. ಈ ಘೋಷಣೆಗೂ ಮುನ್ನ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ತಿಂಗಳ ಆರಂಭದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಧ್ವನಿಯನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡಿದ್ದರು.

“ರಾಜ್ಯದ ಧಾರ್ಮಿಕ ಸ್ಥಳಗಳಿಂದ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಲು ಶನಿವಾರ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಏಪ್ರಿಲ್ 30ರೊಳಗೆ ಎಲ್ಲ ಜಿಲ್ಲೆಗಳಿಂದ ಅನುಸರಣೆ ವರದಿಯನ್ನು ಕೇಳಲಾಗಿದೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ತಿ ತಿಳಿಸಿದ್ದಾರೆ.

ಧಾರ್ಮಿಕ ಮುಖಂಡರೊಂದಿಗೆ ಮಾತುಕತೆಗಳನ್ನು ಸ್ಥಾಪಿಸಲು ಮತ್ತು ಅವರೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 13ರಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಟಿಮೇಟಮ್ ನೀಡಿದ್ದರು. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದರು. ಮೇ 3ರೊಳಗೆ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ ಸರ್ಕಾರವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು. ಮಸೀದಿಗಳಲ್ಲಿ ಆಜಾನ್ ಬದಲಿಗೆ ಹನುಮಾನ್ ಚಾಲೀಸಾ ನುಡಿಸುತ್ತೇವೆ ಎಂದು ಹೇಳುವ ಮೂಲಕ ಹಲವಾರು ಮುಖಂಡರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Sat, 30 April 22