ದೆಹಲಿ: ಒಂದೆಡೆ ಹೊಸವರ್ಷ ಸಮೀಪಿಸುತ್ತಿದೆ..ಇನ್ನೊಂದೆಡೆ ದೇಶದಲ್ಲಿ ಒಮಿಕ್ರಾನ್ ವೈರಾಣು (Omicron Variant) ಸೋಂಕಿತರ ಸಂಖ್ಯೆಯೂ ಏರುತ್ತಿದೆ. ಹೀಗಿರುವಾಗ ಒಂದೊಂದೇ ರಾಜ್ಯಗಳು ಕಠಿಣ ನಿರ್ಬಂಧ ಹೇರಲು ಶುರುಮಾಡಿವೆ. ಈಗಾಗಲೇ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಹರ್ಯಾಣಗಳಲ್ಲಿ ರಾತ್ರಿ ಕರ್ಫ್ಯೂ (Night Curfew) ಸೇರಿ, ಇನ್ನಿತರ ನಿರ್ಬಂಧಗಳನ್ನು ಹೇರಲಾಗಿದೆ. ಇದೀಗ ರಾಷ್ಟ್ರರಾಜಧಾನಿ ದೆಹಲಿ ಕೂಡ ಅದೇ ಸಾಲಿಗೆ ಸೇರಿದೆ. ದೆಹಲಿಯಲ್ಲಿ ಕೊವಿಡ್ 19 ಸೋಂಕು ಮತ್ತು ಒಮಿಕ್ರಾನ್ ಸೋಂಕಿನ ಪ್ರಮಾಣದಲ್ಲಿ ತುಸು ಏರಿಕೆಯಾದ ಬೆನ್ನಲ್ಲೇ, ಅಲ್ಲಿ ಸೋಮವಾರದಿಂದ ರಾತ್ರಿ ಕರ್ಫ್ಯೂ ಪ್ರಾರಂಭವಾಗಲಿದೆ.
ದೆಹಲಿಯಲ್ಲಿ ಸೋಮವಾರ (ಡಿ.27)ದಿಂದ ರಾತ್ರಿ 11ರಿಂದ ಮುಂಜಾನೆ 5ಗಂಟೆವರೆಗೆ ಕರ್ಫ್ಯೂ ಇರಲಿದೆ. ಕಳೆದ 24ಗಂಟೆಯಲ್ಲಿ 290 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದೆಹಲಿಯಲ್ಲೀಗ ಶೇ.0.55ರಷ್ಟು ಪಾಸಿಟಿವಿಟಿ ರೇಟ್ ಇದೆ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 14,43,352ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1103 ಆಗಿದೆ. ಸದ್ಯ 583 ಕೊರೊನಾ ರೋಗಿಗಳು ಐಸೋಲೇಶನ್ನಲ್ಲಿದ್ದಾರೆ. ದೆಹಲಿಯಲ್ಲಿ ಶನಿವಾರ 249 ಕೊವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಇದು ಜೂನ್ 13ರ ನಂತರ ದಾಖಲಾದ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ.
ಈಗಂತೂ ಒಮಿಕ್ರಾನ್ ಕೂಡ ಹೆಚ್ಚುತ್ತಿರುವುದರಿಂದ ದೆಹಲಿಯ ಆರೋಗ್ಯ ತಜ್ಞರು, ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಜನರು ಗುಂಪುಗೂಡಬಾರದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಒಮಿಕ್ರಾನ್ ಮಿತಿಮೀರಿದರೂ ಕೂಡ ಸುಮಾರು ಒಂದು ಲಕ್ಷ ರೋಗಿಗಳಿಗೆ ಎಲ್ಲ ರೀತಿಯ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವೈದ್ಯಕೀಯ ಸಿಬ್ಬಂದಿ, ಬೆಡ್ಗಳು, ಔಷಧಿಗಳು ಮತ್ತು ಆಕ್ಸಿಜನ್ ಲಭ್ಯ ಇರಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ವಿಧಾನಸಭಾ ಚುನಾವಣೆ; 15 ಅಭ್ಯರ್ಥಿಗಳ ಹೆಸರುಳ್ಳ 4ನೇ ಪಟ್ಟಿ ಬಿಡುಗಡೆ ಮಾಡಿದ ಆಪ್
Published On - 9:25 pm, Sun, 26 December 21