ಆಂತರಿಕ ಭದ್ರತೆ ಮತ್ತು ಮಾವೋವಾದ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ: ಅಮಿತ್ ಶಾ ಕಾರ್ಯವೈಖರಿ ಕೊಂಡಾಡಿದ ನರೇಂದ್ರ ಮೋದಿ

ಅಮಿತ್ ಶಾ ಅವರ 62ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಹಾಗೂ ಮಾವೋವಾದವನ್ನು ನಿರ್ಮೂಲನೆ ಮಾಡುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ. ದೇಶವನ್ನು ಮಾದಕವಸ್ತು ಮುಕ್ತಗೊಳಿಸುವ ಸಂಕಲ್ಪ ಮತ್ತು ಸಹಕಾರ ಕ್ಷೇತ್ರಕ್ಕೆ ಅವರ ಕೊಡುಗೆಯನ್ನೂ ನಾಯಕರು ಸ್ಮರಿಸಿದ್ದಾರೆ. ಶಾ ಅವರ ದೀರ್ಘಾಯುಷ್ಯಕ್ಕೆ ಗಣ್ಯರು ಹಾರೈಸಿದ್ದಾರೆ.

ಆಂತರಿಕ ಭದ್ರತೆ ಮತ್ತು ಮಾವೋವಾದ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ: ಅಮಿತ್ ಶಾ ಕಾರ್ಯವೈಖರಿ ಕೊಂಡಾಡಿದ ನರೇಂದ್ರ ಮೋದಿ
ಅಮಿತ್ ಶಾ, ಮೋದಿ
Image Credit source: PTI

Updated on: Oct 22, 2026 | 9:46 AM

ನವದೆಹಲಿ, ಅಕ್ಟೋಬರ್ 22: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಗುರುವಾರ 62ನೇ ವಸಂತಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವು ಗಣ್ಯರು ಅವರಿಗೆ ಆತ್ಮೀಯ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ರಾಷ್ಟ್ರೀಯ ಭದ್ರತೆ ಹಾಗೂ ಜನಕಲ್ಯಾಣಕ್ಕಾಗಿ ಅಮಿತ್ ಶಾ ತೋರುತ್ತಿರುವ ಬದ್ಧತೆಯನ್ನು ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರ ಅತ್ಯುತ್ತಮ ಆಡಳಿತಾತ್ಮಕ ತಿಳುವಳಿಕೆಯು ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಸುದೃಢ ಹಾಗೂ ಪರಿಣಾಮಕಾರಿಯಾಗಿಸಿದೆ. ದೇಶದಲ್ಲಿ ಮಾವೋವಾದದ ಪಿಡುಗನ್ನು ಮಟ್ಟಹಾಕುವಲ್ಲಿ ಮತ್ತು ಡ್ರಗ್ಸ್ ಮುಕ್ತ ಭಾರತ ನಿರ್ಮಿಸುವ ನಮ್ಮ ಸಂಕಲ್ಪವನ್ನು ಮುನ್ನಡೆಸುವಲ್ಲಿ ಅವರ ಪಾತ್ರ ಗಮನಾರ್ಹ. ದೇಶದ ಜನಸೇವೆಯಲ್ಲಿ ಅವರು ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದಿಂದ ಇರಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್

ರಾಷ್ಟ್ರದ ರಕ್ಷಣೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಅಮಿತ್ ಶಾ ಅವರ ಕೊಡುಗೆ ಅನನ್ಯ ಎಂದಿರುವ ಜೈಶಂಕರ್, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸಮರ್ಪಣಾ ಮನೋಭಾವ ಶ್ಲಾಘನೀಯ. ದೇವರು ನಿಮಗೆ ಉತ್ತಮ ಆರೋಗ್ಯ, ಸುಖ-ಶಾಂತಿ ಮತ್ತು ದೀರ್ಘಾಯುಷ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಸಮಾಜದ ಏಕತೆ, ಸೇವೆ ಮತ್ತು ಪಂಚ ಪರಿವರ್ತನೆ: ಮೋಹನ್ ಭಾಗವತರ ವಿಜಯದಶಮಿ ಭಾಷಣ ಮೆಚ್ಚಿದ ಪ್ರಧಾನಿ ಮೋದಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್

ಅಮಿತ್‌ ಶಾ ಅವರು ಭಾರತದ ಆಂತರಿಕ ರಕ್ಷಣೆಯನ್ನು ಬಲಪಡಿಸಲು ಮತ್ತು ಸಹಕಾರ ಕ್ಷೇತ್ರಕ್ಕೆ ನವ ಆವೇಗ ನೀಡಲು ಸಂಪೂರ್ಣ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ನಿರಂತರ ಸಕ್ರಿಯ ಸೇವೆ ದೇಶಕ್ಕೆ ಮುಂದುವರಿಯಲಿ ಎಂದು ಶುಭಕೋರಿದ್ದಾರೆ.

ಅಮಿತ್ ಶಾ ಹಿನ್ನಲೆ

1964ರ ಅಕ್ಟೋಬರ್ 22 ರಂದು ಜನಿಸಿದ ಅಮಿತ್ ಶಾ, ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು. 2014 ರಿಂದ 2020 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ದೇಶಾದ್ಯಂತ ಸಂಘಟಿಸುವಲ್ಲಿ ಪ್ರಮುಖ ಚಾಣಕ್ಯನಾಗಿ ಕಾರ್ಯನಿರ್ವಹಿಸಿದರು. 2019 ರಲ್ಲಿ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದತಿ, ಹೊಸ ಅಪರಾಧ ಕಾನೂನುಗಳ (ಭಾರತೀಯ ನ್ಯಾಯ ಸಂಹಿತಾ) ಜಾರಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಒಪ್ಪಂದಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2021 ರಲ್ಲಿ ನೂತನವಾಗಿ ಆರಂಭವಾದ ಕೇಂದ್ರ ಸಹಕಾರ ಸಚಿವಾಲಯದ ಚೊಚ್ಚಲ ಸಚಿವರಾಗಿಯೂ ಅವರು ದೇಶದ ಸಹಕಾರ ರಂಗದ ಸುಧಾರಣೆಗೆ ಶ್ರಮಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:45 am, Thu, 22 October 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us