ವಯನಾಡು: ಕೇರಳದ ವಯನಾಡ್ ಜಿಲ್ಲೆಯ 2 ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿದ 1 ದಿನದ ನಂತರ, ಸಾವಿನ ಸಂಖ್ಯೆ ಇಂದು ಕನಿಷ್ಠ 158ಕ್ಕೆ ಏರಿಕೆಯಾಗಿದೆ. ಜುಲೈ 23ರಂದು ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಮಂಗಳವಾರ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ 158 ಜನರು ಸಾವನ್ನಪ್ಪಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ಕೆಲವೆಡೆ ‘ಅತಿ ಭಾರೀ ಮಳೆ’ ಆಗುವ ಮುನ್ಸೂಚನೆ ನೀಡಿದೆ. ಭೂಕುಸಿತದ ಪರಿಣಾಮವಾಗಿ ಕೇರಳದ ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ವಯನಾಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಇಡುಕ್ಕಿ, ಎರ್ನಾಕುಲಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಎಂಬ 11 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಇಂದು ರಜೆ ಘೋಷಿಸಲಾಗಿದೆ. ಕೇರಳ ಸರ್ಕಾರವು ಅಧಿಕೃತ ರಾಜ್ಯ ಶೋಕಾಚರಣೆಯನ್ನು ಘೋಷಿಸಿರುವುದರಿಂದ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುತ್ತದೆ. ಸರ್ಕಾರ ನಿಗದಿಪಡಿಸಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ಇದನ್ನೂ ಓದಿ: ವಯನಾಡು ಪ್ರವಾಹ; ಬೇರೆಯವರ ಮಗುವನ್ನು ಉಳಿಸಲು ಹೋಗಿ ತನ್ನ ಮಗಳನ್ನೇ ಕಳೆದುಕೊಂಡ ತಾಯಿ
ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅಮಿತ್ ಶಾ, ಈ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ ಎಂದು ಹೇಳಿದ್ದಾರೆ. “2014ರಿಂದ ಕೇಂದ್ರವು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು 2,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಜುಲೈ 23ರಂದು ಅಂದರೆ ಈ ದುರಂತದ 7 ದಿನಗಳ ಮೊದಲು ಕೇಂದ್ರವು ಕೇರಳ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು. ನಂತರ ಜುಲೈ 24ರಂದು ಮತ್ತು 25ರಂದು 20 ಸೆಂ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿತ್ತು’’ ಎಂದು ಅಮಿತ್ ಶಾ ಹೇಳಿದ್ದಾರೆ.
#WATCH | Delhi: Union Home Minister Amit Shah says, “My condolences to the bereaved families… I want to clarify something for the country… They kept on talking about early warning. I want to clarify that on July 23, the government of India gave an early warning to the… pic.twitter.com/pyi8WCFPq2
— ANI (@ANI) July 31, 2024
ಭೂಕುಸಿತದ ಸಾಧ್ಯತೆಯನ್ನು ಪರಿಗಣಿಸಿ ನನ್ನ ನಿರ್ದೇಶನದ ಮೇರೆಗೆ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಬಳಸಿಕೊಂಡು ಜುಲೈ 23ರಂದು 9 ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, “ನಾವು ಮುನ್ನೆಚ್ಚರಿಕೆ ನೀಡಿದರೂ ಕೇರಳ ಸರ್ಕಾರ ಏನು ಮಾಡಿದೆ? ಜನರನ್ನು ಸ್ಥಳಾಂತರಿಸಲಾಗಿದೆಯೇ? ಅವರನ್ನು ಸ್ಥಳಾಂತರಿಸಿದರೆ ಅವರು ಹೇಗೆ ಸತ್ತರು?” ಎಂದು ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Wayanad landslide: ಗುಡ್ಡ ಕುಸಿತದಿಂದ ಮೃತಪಟ್ಟವರ ಸಂಖ್ಯೆ 146ಕ್ಕೆ ಏರಿಕೆ, ಕೋಳಿಕ್ಕೋಡ್ನಲ್ಲಿ 9 ಬಾರಿ ಭೂಕುಸಿತ
ಆದರೆ, ಈ ಲೋಪಕ್ಕೆ ಯಾರನ್ನೂ ದೂಷಿಸಲು ಬಯಸುವುದಿಲ್ಲ ಎಂದ ಅಮಿತ್ ಶಾ, ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಈಗ ಕೇರಳದ ಜೊತೆ ನಿಲ್ಲುವ ಸಮಯ ಬಂದಿದೆ ಎಂದಿದ್ದಾರೆ.
ಭಾರೀ ಮಳೆಯ ನಡುವೆ ಮಂಗಳವಾರ 4 ಗಂಟೆಗಳ ಅವಧಿಯಲ್ಲಿ ವಯನಾಡ್‌ನಲ್ಲಿ 3 ಭೂಕುಸಿತಗಳು ಸಂಭವಿಸಿದ್ದು, ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್‌ಪುಳ ಗ್ರಾಮಗಳಲ್ಲಿ ದುರಂತದ ಪ್ರಮಾಣ ಹೆಚ್ಚಾಗಿದೆ. ಚಾಲಿಯಾರ್ ನದಿಯಲ್ಲಿ ಹಲವರು ಕೊಚ್ಚಿ ಹೋಗಿದ್ದಾರೆ. ಈ ಜಿಲ್ಲೆಯಲ್ಲಿ ಒಟ್ಟು 45 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 3,069 ಜನರಿಗೆ ವಸತಿ ಕಲ್ಪಿಸಲಾಗಿದೆ.
ಈ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿರುವುದರಿಂದ ಮತ್ತೊಮ್ಮೆ ಭೂಕುಸಿತವಾಗುವ ಸಾಧ್ಯತೆಗಳಿವೆ ಎಂದು ಎನ್‌ಡಿಆರ್‌ಎಫ್ ಸಿಬ್ಬಂದಿಯೊಬ್ಬರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಕೇರಳ ಸರ್ಕಾರದಿಂದ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ