ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಕೇಂದ್ರದ ಘಟಾನುಘಟಿ ನಾಯಕರು ಪಶ್ಚಿಮ ಬಂಗಾಳದಲ್ಲಿಯೇ ಠಿಕಾಣಿ ಹೂಡಿದ್ದು, ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಅವಿರತ ಶ್ರಮ ಹಾಕುತ್ತಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಚುರುಕಾಗಿ ಅಧಿಕಾರ ಹಿಡಿದ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡುವ ಉತ್ಸಾಹದಲ್ಲಿ ಪಶ್ಚಿಮ ಬಂಗಾಳದ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದಾರೆ. ಈ ಹಿಂದಿನ ಚುನಾವಣಾ ಸಮೀಕ್ಷೆಗಳು ಟಿಎಂಸಿಗೆ ಲಾಭದಾಯಕ ಎಂಬ ಎಳೆ ತೋರಿಸಿದ್ದರೂ, ಬಹುತೇಕರು ಯಾರಿಗೆ ಬೆಂಬಲ ಎಂದು ಇನ್ನೂ ನಿರ್ಣಯಿಸಿಲ್ಲ ಎಂದಿದ್ದರು. ಇಂಥವರು ಬಿಜೆಪಿ ಪರವಾಗಿ ವಾಲಿದರೆ ಪಶ್ಚಿಮ ಬಂಗಾಳದ ಫಲಿತಾಂಶ ಏನು ಬೇಕಾದರೂ ಆಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಪಶ್ಚಿಮ ಬಂಗಾಳ ಚುನಾವಣೆ ಘೋಷಣೆಯಾಗುವ ಮೊದಲೇ ಅಲ್ಲಿ ಸಿದ್ಧತೆ ಆರಂಭಿಸಿದ್ದ ಬಿಜೆಪಿ ಈ ಕ್ಷಣದವರೆಗೂ ಗೆಲುವಿನ ವಿಶ್ವಾಸದಲ್ಲಿಯೇ ಇದೆ. ಕೇಂದ್ರ ಗೃಹ ಸಚಿವ ಅವರನ್ನು ಬಿಜೆಪಿ ಕಾರ್ಯಕರ್ತರು ‘ಚಾಣಕ್ಯ’ ಎಂದೇ ಗೌರವಿಸುತ್ತಾರೆ. ಹಲವು ರಾಜ್ಯಗಳನ್ನು ಪಕ್ಷಕ್ಕೆ ಗೆದ್ದುಕೊಟ್ಟಿರುವ ಬಿಜೆಪಿಯ ಈ ಚುನಾವಣಾ ಕಾರ್ಯತಂತ್ರ ನಿಪುಣ ‘ಟಿವಿ9 ಭರತ್ವರ್ಷ್’ ನ್ಯೂಸ್ ಚಾನೆಲ್ನ ಪೊಲಿಟಿಕಲ್ ಎಡಿಟರ್ ಅಮೋದ್ ರಾಯ್ ಅವರಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿಗತಿ, ಚುನಾವಣೆ ನಡೆಯುತ್ತಿರುವ ರೀತಿ ಮತ್ತು ದೇಶದಲ್ಲಿ ನಕ್ಸಲ್ ಉಪಟಳದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಅಕ್ಷರ ರೂಪ ಇಲ್ಲಿದೆ.
1) ಪಶ್ಚಿಮ ಬಂಗಾಳದಲ್ಲಿ ಎಂಥ ಫಲಿತಾಂಶ ಬರಬಹುದು ಎಂದು ನಿಮಗೆ ಅನ್ನಿಸುತ್ತೆ?
– ಪಶ್ಚಿಮ ಬಂಗಾಳದಲ್ಲಿ ನಾವು ನಿಶ್ಚಿತವಾಗಿಯೂ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರ್ತೀವಿ. ಇಂದು ನಾನು ಸಂಚರಿಸಿದ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ನಮಗೆ ಹೆಚ್ಚಿನ ಮತಗಳು ಬಂದಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಈ ವಿಧಾನಸಭಾ ಕ್ಷೇತ್ರಗಳನ್ನೂ ನಾವು ಗೆಲ್ತೀವಿ. ಪಶ್ಚಿಮ ಬಂಗಾಳ ರಾಜ್ಯದ ಜನರು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರ ಬೇಕು ಎಂದುಕೊಂಡಿದ್ದಾರೆ.
2) ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿ ಏಪ್ರಿಲ್ 10ರಂದು ಹಾರಿಸಿದ ಗುಂಡಿನಿಂದ ನಾಲ್ವರು ಮತದಾರರು ಮೃತಪಟ್ಟಿದ್ದಾರೆ. ಇದಕ್ಕೆ ನೀವೇ ಕಾರಣ ಎಂದು ಮಮತಾ ಬ್ಯಾನರ್ಜಿ ಮೇಲೆ ಆರೋಪ ಮಾಡುತ್ತಿದ್ದಾರೆ..
– ಮಮತಾ ಬ್ಯಾನರ್ಜಿ ಅವರನ್ನು ಕೀಳರಿಮೆ ಕಾಡುತ್ತಿದೆ. ಹೀಗಾಗಿಯೇ ಅವರು ಇಂಥ ಆರೋಪಗಳನ್ನು ಮಾಡುತ್ತಿದ್ದಾರೆ. ಸಿಐಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ ಅದೇ ವಿಧಾನಸಭಾ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಭಾಷಣ ಮಾಡುವಾಗ ಸಿಐಎಸ್ಎಫ್, ಸಿಆರ್ಪಿಎಫ್ ಸಿಬ್ಬಂದಿಗೆ ಘೆರಾವ್ ಮಾಡಿ ಎಂದು ಕರೆ ನೀಡಿದ್ದರು. ಭದ್ರತಾ ಸಿಬ್ಬಂದಿಯಿಂದ ಆಯುಧ ಕಸಿದುಕೊಳ್ಳಲು ಪ್ರಯತ್ನಿಸಿದಾಗಿ ಅನಿವಾರ್ಯವಾಗಿ ನಡೆದ ಗೋಲಿಬಾರ್ನಲ್ಲಿ ನಾಲ್ವರು ಮೃತಪಟ್ಟಿದ್ದು ವಿಷಾದದ ಸಂಗತಿ. ನನಗೂ ಈ ಘಟನೆಯ ಬಗ್ಗೆ ದುಃಖವಿದೆ. ಅದೇ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಒಬ್ಬ ಕಾರ್ಯಕರ್ತನೂ ಮೃತಪಟ್ಟಿದ್ದಾನೆ. ತಮ್ಮ ಪಕ್ಷದ ಬೆಂಬಲಿಗರ ಸಾವಿನ ಬಗ್ಗೆ ಮಾತನಾಡುವ ಮಮತಾ ಈ ಬಗ್ಗೆ ಏನೂ ಹೇಳಲಿಲ್ಲ. ಸಾವಿನ ವಿಚಾರದಲ್ಲೂ ಮಮತಾ ರಾಜಕಾರಣ ಮಾಡ್ತಿದ್ದಾರೆ. ನಮ್ಮ ಕಾರ್ಯಕರ್ತ ದಲಿತ. ಸಾವಿನ ವಿಚಾರದಲ್ಲೂ ಮಮತಾ ಮೈನಾರಿಟಿ-ಮೆಜಾರಿಟಿ ಅಂತ ಮಾಡಿದ್ರೆ, ಅವರ ಲೆಕ್ಕಾಚಾರ ಏನು ಎಂದು ಜನರಿಗೆ ಅರ್ಥವಾಗುತ್ತೆ. ನಾನು ಕೇಳ್ತೀನಿ, ಮಮತಾ ದೀದಿ, ನೀವು ಅದೆಂಥಾ ಮುಖ್ಯಮಂತ್ರಿ?
3) ನೀವು ರಾಜೀನಾಮೆ ನೀಡಬೇಕೆಂದು ಮಮತಾ ಬ್ಯಾನರ್ಜಿ ಒತ್ತಾಯಿಸುತ್ತಿದ್ದಾರೆ. ರಾಜೀನಾಮೆ ಕೊಡ್ತೀರಾ?
– ಬಂಗಾಳದ ಜನತೆ, ದೇಶದ ಜನತೆ ಕೇಳಿದರೆ ಖಂಡಿತ ರಾಜೀನಾಮೆ ಕೊಡ್ತೀನಿ. ಆದರೆ ಮಮತಾ ಬ್ಯಾನರ್ಜಿ ಹೇಳಿದ್ರು ಅಂತ ರಾಜೀನಾಮೆ ಕೊಡಬೇಕಾಗಿಲ್ಲ. ಆದರೆ ಮೇ 2ರಂದು ಮಾತ್ರ ಮಮತಾ ದೀದಿ ಖಂಡಿತ ರಾಜೀನಾಮೆ ಕೊಡ್ತಾರೆ. ಯಾಕಂದ್ರೆ ಅವರು ಪ್ರಚಂಡ ಬಹುಮತದಿಂದ ಸೋಲ್ತಾರೆ.
4) ಚುನಾವಣಾ ಆಯೋಗದ ಕ್ರಮಕ್ಕೆ ಪ್ರಧಾನಿ ಹೆಸರನ್ನು ಮಮತಾ ಜೋಡಿಸಿದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಬಂಗಾಳದಲ್ಲಿ ಈ ರೀತಿಯ ಅಗೌರವ ತೋರಿಸುವುದು ಹೆಚ್ಚಾಗುತ್ತಿದೆಯಲ್ಲವೇ?
– ನನ್ನ 40 ವರ್ಷದ ಸಾರ್ವಜನಿಕ ಬದುಕಿನಲ್ಲಿ ನಾನು ಸಾಕಷ್ಟು ನೋಡಿದ್ದೇನೆ. ಇವರಿಗೆ ಸೋಲಿನ ಭೀತಿ ಶುರುವಾಗಿದೆ. ಜನರು ಮನಸ್ಸು ಮಾಡಿಕೊಂಡಿದ್ದಾರೆ. ನೀವು (ಮಮತಾ ಬ್ಯಾನರ್ಜಿ) ಎಲ್ಲಿಗೆ ಓಡಿ ಹೋಗ್ತೀರಿ? ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಲ್ಲಿಯೂ ನಿಮಗೆ ಕಾಲಿಡಲು ಜಾಗವಿಲ್ಲ.
(ಚುನಾವಣಾ ಆಯೋಗವು ವಿಧಿಸುವ ಮಾದರಿ ನೀತಿ ಸಂಹಿತೆಯನ್ನು ಇಂಗ್ಲಿಷಿನಲ್ಲಿ ಮಾಡೆಲ್ ಕೋಡ್ ಆಫ್ ಕಂಡಕ್ಟ್ (MCC) ಎನ್ನುತ್ತಾರೆ. ಇದನ್ನು ಮಮತಾ ಬ್ಯಾನರ್ಜಿ ಮೋದಿ ಕೋಡ್ ಆಫ್ ಕಂಡಕ್ಟ್ ಎಂದು ಲೇವಡಿ ಮಾಡಿದ್ದರು. ಸಂವಿಧಾನತ್ಮಕ ಸಂಸ್ಥೆಗಳ ಅವಹೇಳನದ ಬಗ್ಗೆ ಇದು ಚರ್ಚೆ ಹುಟ್ಟುಹಾಕಿತ್ತು)
5) ವಲಸಿಗರ ಸಮಸ್ಯೆ ಬಂಗಾಳದಲ್ಲಿ ಜಾಸ್ತಿಯಿದೆ. ನೀವು ಪೌರತ್ವ ತಿದ್ದುಪಡಿ ಕಾಯ್ದೆ (CAA) ಬಗ್ಗೆ ಈ ಚುನಾವಣೆಯಲ್ಲಿ ಹೆಚ್ಚು ಮಾತನಾಡುತ್ತಿಲ್ಲ ಏಕೆ?
– ಹಾಗೇನಿಲ್ಲ, ನಮ್ಮ ಪ್ರಣಾಳಿಕೆಯಲ್ಲೇ ಸಿಎಎ ಬಗ್ಗೆ ನಾವು ಹೇಳಿದ್ದೇವೆ. ನಾವು ಸಿಎಎ ಜಾರಿಗೆ ತರುವುದು ಶತಃಸಿದ್ಧ. ಇಲ್ಲಿರುವ ಶರಣಾರ್ಥಿಗಳಿಗೆ ಖಂಡಿತ ಪೌರತ್ವ ಕೊಡುತ್ತೇವೆ.
6) ಮಮತಾ ಬ್ಯಾನರ್ಜಿ ಪರವಾಗಿದೆ ಎನ್ನಲಾದ ಚಿಂತಕರ ಚಾವಡಿ ‘ಕ್ಲಬ್ ಹೌಸ್’ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ಜನಪ್ರಿಯರಾಗಿದ್ದಾರೆ. ಮಮತಾ ಬ್ಯಾನರ್ಜಿ ವಿಚಾರವಾಗಿ ಆಡಳಿತ ವಿರೋಧಿ ಅಲೆಯ ಸಮಸ್ಯೆಯಿದೆ. ಆದರೂ ಇದೇ ಚಿಂತಕರ ಚಾವಡಿ ಬಂಗಾಳದಲ್ಲಿ ಬಿಜೆಪಿ 100 ಸ್ಥಾನಕ್ಕಿಂತಲೂ ಹೆಚ್ಚು ಗೆಲ್ಲುವುದಿಲ್ಲ ಎನ್ನುತ್ತಿದೆ..
– ಇವೆಲ್ಲವೂ ವಿರೋಧಾಭಾಸದ ಮಾತುಗಳು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಒಂದು ಕಡೆ ನೀವು ಹೇಳ್ತೀರಿ ಜನರಲ್ಲಿ ಆಡಳಿತ ವಿರೋಧಿ ಮನೋಭಾವ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ನೀವು ಹೇಳ್ತೀರಿ ಜನರು ಮೋದಿಯನ್ನು ಗೌರವಿಸುತ್ತಾರೆ ಅಂತ. ವಸ್ತುಸ್ಥಿತಿ ಹೀಗಿದ್ದಾಗ ಬಿಜೆಪಿಗೆ ಕೇವಲ 100 ಸ್ಥಾನಗಳು ಮಾತ್ರವೇ ಸಿಗುವುದಾ? ಇವರ ಮಾತುಗಳಿಗೆ ತಾಳಮೇಳವಿಲ್ಲ.
7) ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ನೀವು ಮಾಡುವ ಮೊದಲ ಮೂರು ಕೆಲಸಗಳು ಯಾವುದು?
– ಆದ್ಯತೆಗಳು ಏನಾಗಿರಬೇಕು ಎಂಬುದನ್ನು ಬಂಗಾಳದ ಮುಖ್ಯಮಂತ್ರಿ ಆದವರು ನಿರ್ಧರಿಸುತ್ತಾರೆ. ನಮ್ಮ ಪ್ರಣಾಳಿಕೆಯಲ್ಲಿ ಬಂಗಾಳದ ಮಹಿಳೆಯರು, ಕೃಷಿಕರು, ಮೀನುಗಾರರು, ಕೊಲ್ಕತ್ತಾ ನಗರ, ಬಂಗಾಳ ಸಂಸ್ಕೃತಿಗಾಗಿ ಸಾಕಷ್ಟು ಭರವಸೆಗಳನ್ನು ಕೊಟ್ಟಿದ್ದೇವೆ. ಪ್ರಣಾಳಿಕೆಯನ್ನು ಆಧರಿಸಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ.
8) ಸಿಆರ್ಪಿಎಫ್ ಯೋಧರ ಮೇಲೆ ಛತ್ತೀಸಗಡದಲ್ಲಿ ದಾಳಿ ನಡೆದಿದೆ. ಇದನ್ನು ಗಮನಿಸಿದಾಗ ನಕ್ಸಲರ ಮೇಲಿನ ಅಂತಿಮ ದಾಳಿಗೆ ಸಮಯ ಬಂದಿದೆ ಎನಿಸುವುದಿಲ್ಲವೇ?
– ನೀವು ಸರಿಯಾಗಿ ತಿಳಿದುಕೊಳ್ಳಬೇಕು. ಛತ್ತೀಸಗಡದಲ್ಲಿ ಸಿಆರ್ಪಿಎಫ್ ಮೇಲೆ ನಕ್ಸಲರು ದಾಳಿ ನಡೆಸಲಿಲ್ಲ. ನಕ್ಸಲರ ಮೇಲೆ ಸಿಆರ್ಪಿಎಫ್ ಸಿಬ್ಬಂದಿ ದಾಳಿ ನಡೆಸಿದ್ದರು. ಈ ಹೋರಾಟ ಈಗ ಅಂತಿಮಘಟ್ಟಕ್ಕೆ ಮುಟ್ಟಿದೆ.
(Amit shah slams mamata banerjee in an interview with TV9 Bharatvarsh ahead of West Bengal 5th phase poll)
ಇದನ್ನೂ ಓದಿ: West Bengal Elections 2021: ಟಿಎಂಸಿ ಪಕ್ಷ ಎನ್ಆರ್ಸಿ ಬಗ್ಗೆ ಸುಳ್ಳು ಹಬ್ಬಿಸುತ್ತಿದ್ದೆ: ಗೃಹ ಸಚಿವ ಅಮಿತ್ ಶಾ
ಇದನ್ನೂ ಓದಿ: West Bengal Elections 2021: ಯೋಧರನ್ನು ಅವಮಾನಿಸಬೇಡಿ: ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ನರೇಂದ್ರ ಮೋದಿ