ಅನ್ನಮಯ್ಯ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ತಂಬಲಪಲ್ಲೆ ಬಳಿ ರೈತನೊಬ್ಬ ತನ್ನ ಹೊಲವನ್ನು ಉಳುಮೆ ಮಾಡುತ್ತಿದ್ದಾಗ ಕಲ್ಲು ತಗುಲಿದಂತೆ ಭಾಸವಾಯಿತು. ಇದರಿಂದ ಅನುಮಾನಗೊಂಡ ಅವರು ಕೆಲಸ ನಿಲ್ಲಿಸಿ, ಮಣ್ಣನ್ನು ಅಗೆದರು. ಆಗ ವಿಗ್ರಹವೊಂದು ಕಂಡುಬಂದಿತು. ಆ ವಿಗ್ರಹವನ್ನು ತೊಳೆದು ನೋಡಿದಾಗ ಪ್ರಾಚೀನ ಕಾಲದ ವಿಷ್ಣುವಿನ ವಿಗ್ರಹ ಅದಾಗಿತ್ತು. ಮಣ್ಣನ್ನು ತೊಳೆದು ಸ್ವಚ್ಛಗೊಳಿಸಿದ ನಂತರ ವಿಷ್ಣುವಿನ ಪುರಾತನ ಪ್ರತಿಮೆ ಅದು ಎಂದು ತಿಳಿದುಬಂದಿದೆ. ಇದರಿಂದಾಗಿ ಆ ಪ್ರತಿಮೆಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಆ ಪ್ರದೇಶಕ್ಕೆ ಬರುತ್ತಿದ್ದಾರೆ.
ಅನ್ನಮಯ್ಯ ಜಿಲ್ಲೆಯಲ್ಲಿ ಈ ಪವಾಡ ನಡೆದಿದೆ. ಹೊಲವನ್ನು ಉಳುಮೆ ಮಾಡುವಾಗ ಪ್ರಾಚೀನ ವಿಷ್ಣುವಿನ ವಿಗ್ರಹ ಪತ್ತೆಯಾಗಿದೆ. ತಂಬಳ್ಳಪಲ್ಲೆ ಮಂಡಲದ ಕೋಟಕೊಂಡ ಪಂಚಾಯತ್‌ನ ಏಟಗಡಪಲ್ಲೆ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ವಿಷ್ಣುವಿನ ಈ ವಿಗ್ರಹ ಸುಮಾರು 3 ಅಡಿ ಎತ್ತರವಿದೆ. ಅದರ ಮೇಲಿನ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಲಾಗಿದೆ. ಈ ವಿಷಯ ತಿಳಿದ ನಂತರ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿಗ್ರಹವನ್ನು ಭೇಟಿ ಮಾಡಿ ದೇವರನ್ನು ಪೂಜಿಸುತ್ತಿದ್ದಾರೆ.
ಇದನ್ನೂ ಓದಿ: Fact Check: ಸಂಭಾಲ್ನಲ್ಲಿ ಮಸೀದಿ ಸಮೀಕ್ಷೆ ವೇಳೆ ವಿಗ್ರಹ ಪತ್ತೆ ಆಗಿದೆಯೇ?, ಇಲ್ಲ, ಇದು ರಾಯಚೂರಿನಲ್ಲಿ ಸಿಕ್ಕ ಮೂರ್ತಿ
ಈ ವಿಷಯ ಸ್ಥಳೀಯ ಅಧಿಕಾರಿಗಳಿಗೆ ತಿಳಿದಾಗ ಅವರು ಸ್ಥಳಕ್ಕೆ ಬಂದು ಕೃಷಿ ಭೂಮಿಯಲ್ಲಿ ಪತ್ತೆಯಾದ ವಿಗ್ರಹವನ್ನು ಪರಿಶೀಲಿಸಿದ್ದಾರೆ. ಮುಂದಿನ ಆದೇಶ ನೀಡುವವರೆಗೆ ಯಾರೂ ಹೊಲವನ್ನು ಉಳುಮೆ ಮಾಡಬಾರದು ಎಂದು ತಹಶೀಲ್ದಾರ್ ಆದೇಶಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಂಡಲದ ಕೋಟಕೊಂಡದಲ್ಲಿ ಕೂಡ ಎರಡು ದೇವತೆಗಳ ವಿಗ್ರಹಗಳು ಪತ್ತೆಯಾಗಿವೆ. ಮಡ್ಡಿರಲ್ಲಪಳ್ಳೆಯ ವೆಂಕಟೇಶ್ ಎಂಬ ರೈತ ರಂಗರಾವ್ ಅವರ ಹೊಲವನ್ನು ಉಳುತ್ತಿದ್ದಾಗ ಈ ವಿಗ್ರಹಗಳು ಪತ್ತೆಯಾಗಿವೆ. ಹೀಗಾಗಿ, ಈ ಪ್ರದೇಶದಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳು ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಕೆತ್ತಲು ಶಿಲೆ ಸಿಕ್ಕ ಮೈಸೂರು ಬಳಿಯ ಜಾಗದಲ್ಲಿ ಶಾಸಕ ಮತ್ತು ಸ್ಥಳೀಯರಿಂದ ಪೂಜೆ
ಈ ನಿಟ್ಟಿನಲ್ಲಿ, ಪುರಾತತ್ವ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲೇ ಈ ಪ್ರದೇಶದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಇದೀಗ ಪತ್ತೆಯಾದ ವಿಷ್ಣುವಿನ ವಿಗ್ರಹವು ಎಷ್ಟು ವರ್ಷ ಹಿಂದಿನದು ಎಂದು ಪುರಾತತ್ವ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ. ಈ ವಿಗ್ರಹದ ಆವಿಷ್ಕಾರವು ಸ್ಥಳೀಯವಾಗಿ ಚರ್ಚೆಯ ವಿಷಯವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ