ಹೈದರಾಬಾದ್: ಕಳೆದ ಒಂದೂವರೆ ವರ್ಷದಿಂದ ಈ ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಾಣು ಲೆಕ್ಕವಿಲ್ಲದಷ್ಟು ಅನಾಹುತಗಳಿಗೆ ಕಾರಣವಾಗಿದೆ. ಜೀವದ ಜತೆಗಷ್ಟೇ ಅಲ್ಲದೇ ಭಾವನೆಯೊಂದಿಗೂ ಚೆಲ್ಲಾಟವಾಡುತ್ತಿರುವ ಕೊರೊನಾದಿಂದಾಗಿ ಹಲವರು ಮಾನಸಿಕವಾಗಿ ನೊಂದುಹೋಗಿದ್ದಾರೆ. ಹೆತ್ತವರ, ಒಡಹುಟ್ಟಿದವರ, ಬದುಕು ಹಂಚಿಕೊಂಡವರ ಕೊನೆ ಕ್ಷಣದಲ್ಲಿಯೂ ಜತೆಗಿರಲಾರದಂತಹ ಪರಿಸ್ಥಿತಿಯಿಂದಾಗಿ ಸಾವಿನೊಂದಿಗೆ ಬದುಕು ಕೂಡಾ ಅತ್ಯಂತ ಶೋಚನೀಯವಾಗಿದೆ. ಎಷ್ಟೋ ಕಡೆಗಳಲ್ಲಿ ತಮ್ಮವರ ಮೃತದೇಹವನ್ನು ಕಡೆಯ ಬಾರಿ ನೋಡಲಾಗದೇ, ಅಂತ್ಯ ಸಂಸ್ಕಾರ ನೆರವೇರಿಸಲಾಗದೇ ಜನರು ಗೋಳಾಡಿದ್ದರೆ ಇನ್ನು ಹಲವೆಡೆ ಪ್ಲಾಸ್ಟಿಕ್ ಒಳಗೆ ಬಂಧಿಯಾದ ಯಾರದ್ದೋ ಮೃತದೇಹವನ್ನು ತಮ್ಮವರದ್ದೆಂದು ಭಾವಿಸಿ ಅಂತಿಮ ವಿಧಿವಿಧಾನ ನೆರವೇರಿಸಿದ ಮೇಲೆ ವಿಷಯ ತಿಳಿದು ಸಂಕಟಪಟ್ಟಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇಂಥದ್ದೇ ಒಂದು ಘಟನೆ ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಯಾರದ್ದೋ ಮೃತದೇಹವನ್ನು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದ 18 ದಿನಗಳ ಬಳಿಕ ಯಾರು ತೀರಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತೋ ಅವರು ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ.
ಮೇ.15ರಂದು ಮುತ್ಯಾಲ ಗಡ್ಡಯ್ಯ ಎಂಬ ವ್ಯಕ್ತಿ ಕೊರೊನಾ ಸೋಂಕಿನಿಂದ ವಿಜಯವಾಡದ ಆಸ್ಪತ್ರೆಯಲ್ಲಿ ಮೃತಪಟ್ಟ ತಮ್ಮ ಪತ್ನಿಯ ಶವ ಸಂಸ್ಕಾರ ಮಾಡಿದ್ದಾರೆ. ಕೊರೊನಾದಿಂದ ಸಾವು ಸಂಭವಿಸಿದ್ದರಿಂದ ಶವವನ್ನು ನಿಯಮಾವಳಿಗಳಂತೆ ಸಂಪೂರ್ಣ ಪ್ಯಾಕ್ ಮಾಡಲಾಗಿದ್ದು, ಇವರು ಸಹ ಎಲ್ಲಾ ನಿಯಮಗಳನ್ನು ಪಾಲಿಸಿಯೇ ಅಂತಿಮ ಕಾರ್ಯ ಕೈಗೊಂಡಿದ್ದಾರೆ. ನಂತರ ಜೂನ್ 1ನೇ ತಾರೀಕು ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಸ್ಥರು ಕಾರ್ಯಕ್ರಮ ಮಾಡಿದ್ದು, ಅದರ ಮರುದಿನವೇ ಸತ್ತು ಹೋಗಿದ್ದಾರೆಂದು ಭಾವಿಸಲಾದ 70 ವರ್ಷದ ಮಹಿಳೆ ಮನೆಗೆ ಹಿಂತಿರುಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಂತ್ಯ ಸಂಸ್ಕಾರ ನಡೆಸಿ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ಮಹಿಳೆ ಪ್ರತ್ಯಕ್ಷವಾಗಿರುವುದು ಕುಟುಂಬಸ್ಥರಿಗೆ ನಂಬಲಾಗದಂತಾಗಿದೆ. ಸದರಿ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಮೇ 12ರಂದು ಅವರನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪ್ರತಿನಿತ್ಯ ಅವರ ಪತಿ ಗಡ್ಡಯ್ಯ ಆಸ್ಪತ್ರೆಗೆ ತೆರಳಿ ಪತ್ನಿಯನ್ನು ನೋಡಿಕೊಂಡು ಬರುತ್ತಿದ್ದರು. ಆದರೆ, ಮೇ 15ರಂದು ಪತ್ನಿ ಎಲ್ಲೂ ಕಾಣದಾದಾಗ ಆಸ್ಪತ್ರೆಯ ಸಿಬ್ಬಂದಿಗೆ, ನರ್ಸ್ಗಳಿಗೆ ವಿಷಯ ಮುಟ್ಟಿಸಿದ್ದಾರೆ.
ವ್ಯಕ್ತಿ ತನ್ನ ಹೆಂಡತಿ ಕಾಣದಿರುವ ಬಗ್ಗೆ ಅಳಲು ತೋಡಿಕೊಂಡಾಗ ಅವರನ್ನು ಶವಾಗಾರಕ್ಕೆ ಕರೆದುಕೊಂಡು ಹೋದ ಆಸ್ಪತ್ರೆ ಸಿಬ್ಬಂದಿ ವೃದ್ಧ ಮಹಿಳೆಯ ಶವವೊಂದನ್ನು ಹಸ್ತಾಂತರಿಸಿದ್ದಾರೆ. ಆದರೆ, ಕೊರೊನಾ ಕಾರಣದಿಂದ ದೇಹವನ್ನು ಸಂಪೂರ್ಣ ಪ್ಯಾಕ್ ಮಾಡಿದ್ದ ಕಾರಣ ಆ ವ್ಯಕ್ತಿ ತನ್ನ ಹೆಂಡತಿಯದ್ದೇ ಶವವೆಂದು ಭಾವಿಸಿ ದುಃಖದಿಂದ ಅದನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಬಂದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ನಂತರ ಮೇ 23ರಂದು ಮತ್ತೊಂದು ಆಘಾತ ಕುಟುಂಬಕ್ಕೆ ಬಂದೆರಗಿದ್ದು ಗಡ್ಡಯ್ಯ ಅವರ 35 ವರ್ಷದ ಪುತ್ರ ರಮೇಶ್ ಕೂಡಾ ಕೊರೊನಾದಿಂದ ಸಾವಿಗೀಡಾಗಿರುವ ಸುದ್ದಿ ಬಂದಿದೆ. 10 ದಿನಗಳ ಅಂತರದಲ್ಲಿ ತಾಯಿ, ಮಗ ಇಬ್ಬರೂ ತೀರಿಕೊಂಡಿರುವುದನ್ನು ಕಂಡು ಮನೆಯವರು ಕಂಗೆಟ್ಟುಹೋಗಿದ್ದಾರೆ. ನಂತರ ಇಬ್ಬರ ಆತ್ಮಕ್ಕೂ ಶಾಂತಿ ಕೋರಿ ಜೂನ್ 1ರಂದು ಕಾರ್ಯಕ್ರಮ ಮಾಡಿದ್ದಾರೆ.
ಆದರೆ, ಇತ್ತ ಆಸ್ಪತ್ರೆಯಲ್ಲಿ ಕೊರೊನಾದಿಂದ ಗುಣಮುಖರಾದ ಗಿರಿಜಮ್ಮ ತನ್ನನ್ನು ಮನೆಗೆ ಕರೆದುಕೊಂಡು ಹೋಗಲು ಯಾರೂ ಬಂದಿಲ್ಲವೆಂದು ದುಃಖಿಸಿದ್ದಾರೆ. ನಂತರ ಆಸ್ಪತ್ರೆಯವರೇ 3 ಸಾವಿರ ರೂ. ಕೊಟ್ಟು ಅವರನ್ನು ಮನೆಗೆ ಕಳುಹಿಸಿದ್ದು, ಮನೆಗೆ ಬಂದ ಸತ್ಯ ಸಂಗತಿ ತಿಳಿದಿದೆ. ಸದ್ಯ ಆಸ್ಪತ್ರೆಯ ಪ್ರಮಾದ ವಿರುದ್ಧ ಯಾರೂ ದೂರು ದಾಖಲಿಸಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಕೆ.ವಿ.ರಾಮಾ ರಾವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ಕೊರೊನಾ ಮೃತದೇಹ ಅದಲು ಬದಲು; ಶಿವಮೊಗ್ಗ ಮೆಗ್ಗಾನ್ ಶವಾಗಾರದಲ್ಲಿ ಯಡವಟ್ಟು
ಧಾರವಾಡ ಅಪಘಾತದಲ್ಲಿ ಮೃತದೇಹ ಅದಲುಬದಲು: ನಾಯಿಮರಿ ಟ್ಯಾಟೂ ಸಹಾಯದಿಂದ ಮಹಿಳೆಯ ಶವ ಪತ್ತೆ