ಅಮರಾವತಿ: ಆಂಧ್ರಪ್ರದೇಶದಲ್ಲಿ 2024ರಲ್ಲಿ ವಿಧಾನಸಭೆ ಚುನಾವಣೆ (Andhra Pradesh Assembly Elections) ನಡೆಯಲಿದೆ. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಕೇವಲ 70 ರೂ.ಗೆ ಮದ್ಯ ಸಿಗುವಂತೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸೋಮು ವೀರಜ್ಜು ತಿಳಿಸಿದ್ದಾರೆ. ಮಂಗಳವಾರ ವಿಜಯವಾಡದಲ್ಲಿ ಮಾತನಾಡುತ್ತ ಈ ಭರವಸೆ ನೀಡಿದ್ದಾರೆ. 2024ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದರೆ ಖಂಡಿತ 70 ರೂ.ಗೆ ಮದ್ಯ ಮಾರಾಟ ಮಾಡುತ್ತೇವೆ. ರಾಜ್ಯ ಖಜಾನೆಯಲ್ಲಿ ಸಾಕಷ್ಟು ಹಣ ಇದ್ದರೆ, 50 ರೂ.ಗೆ ಮದ್ಯ ನೀಡಲಾಗುವುದು ಎಂದು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ. ಬಿಜೆಪಿ ಅಧ್ಯಕ್ಷರ ಈ ಭರವಸೆ ಇದೀಗ ಭರ್ಜರಿ ಸುದ್ದಿಯಾಗಿದೆ.
ವಿಜಯವಾಡದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಹಲವು ಯೋಜನೆಗಳ ಭರವಸೆ ನೀಡಿದರು. ಅಷ್ಟೇ ಅಲ್ಲ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಈ ರಾಜ್ಯದಲ್ಲಿ ಅಪಾರ ಸಂಪನ್ಮೂಲ, ಸಂಪತ್ತು ಇದೆ. ಆದರೆ ಯಾವುದೇ ಅಭಿವೃದ್ಧಿಯನ್ನೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಆಂಧ್ರವನ್ನು ಆಳಿದ ರಾಜಕೀಯ ಪಕ್ಷಗಳು ಎಂದು ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗು ದೇಸಂ ಪಕ್ಷಗಳನ್ನು ದೂಷಿಸಿದರು. ಈ ರಾಜ್ಯದಲ್ಲಿ ಕೋಟ್ಯಂತರ ಜನರು ಮದ್ಯ ಸೇವನೆ ಮಾಡುತ್ತಾರೆ ಎಂಬುದು ನನಗೆ ಗೊತ್ತು. ನೀವು ನಮ್ಮ ಬಿಜೆಪಿಗೆ ಮತ ಹಾಕಿ. ನಾವು ಸರ್ಕಾರ ರಚನೆ ಮಾಡಿದರೆ ಖಂಡಿತವಾಗಿಯೂ ಕಡಿಮೆ ಬೆಲೆಗೆ ಮದ್ಯ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ. ಇವರ ಭಾಷಣದ ತುಣುಕು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಾವು ಹಾಕಿದ ಲೆಕ್ಕಾಚಾರದ ಪ್ರಕಾರ ಆಂಧ್ರಪ್ರದೇಶದಲ್ಲಿ ಪ್ರತಿ ತಿಂಗಳೂ ಅಂದಾಜು 12 ಸಾವಿರ ರೂಪಾಯಿ ವೆಚ್ಚದ ಮದ್ಯ ಖಾಲಿಯಾಗುತ್ತದೆ. ಇದೇ ಹಣವನ್ನು ಜಗನ್ ಮೋಹನ್ ರೆಡ್ಡಿ ಸರ್ಕಾರ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಯೋಜನೆ ಮೂಲಕ ಜನರಿಗೆ ಕೊಡುತ್ತದೆ. ಅಲ್ಲಿಗೆ ಜನರಿಗೆ ಹೆಚ್ಚಿಗೆಯೇನೂ ಈ ಸರ್ಕಾರ ಕೊಡುವುದಿಲ್ಲ ಎಂದು ಸೋಮು ವೀರಜ್ಜು ಪ್ರತಿಪಾದಿಸಿದರು. ಅಷ್ಟೇ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯನ್ನಾಗಿ ಮಾಡಲಾಗುವುದು. ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ಈ ನಗರವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ, ಕಮ್ಯುನಿಸ್ಟರನ್ನು ಬೊಗಳುವ ನಾಯಿಗಳು ಎಂದು ಹೇಳುವ ಮೂಲಕವೂ ವಿವಾದ ಸೃಷ್ಟಿಸಿದ್ದಾರೆ. ಪ್ರಸ್ತುತ ಸಭೆಯಲ್ಲಿ ಮಾಜಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ರಾಜ್ಯಸಭಾ ಸದಸ್ಯರಾದ ವೈ.ಎಸ್.ಚೌಧರಿ, ಎಂ.ಸಿ.ರಮೇಶ್ ಇತರರು ಇದ್ದರು.
ಇದನ್ನೂ ಓದಿ: ಕೊಪ್ಪಳ: ರೆಸಾರ್ಟ್‌ಗಳ ಬಗ್ಗೆ 48 ಗಂಟೆಯಲ್ಲಿ ವರದಿ ನೀಡುವಂತೆ ಡಿಸಿ ಆದೇಶ; ಮಾಲೀಕರು ಕಂಗಾಲು