ಭಾರತದಲ್ಲಿ ಕೊರೊನಾ ಲಸಿಕೆ 3ನೇ ಡೋಸ್ಗಾಗಿ ಕಾರ್ಬೆವ್ಯಾಕ್ಸ್ ಬಳಕೆ?-3ನೇ ಹಂತದ ಕ್ಲಿನಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ
ಕಾರ್ಬೆವ್ಯಾಕ್ಸ್ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ , ಬಯಾಲಾಜಿಕಲ್ ಇ ಕಂಪನಿ, ಜಾಗತಿಕವಾಗಿಯೂ 1 ಬಿಲಿಯನ್ ಡೋಸ್ಗಳ ಪೂರೈಕೆಗೆ ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ.
ದೇಶದಲ್ಲಿ ಜನವರಿ 10ರಿಂದ ಆಯ್ದ ವರ್ಗದ ಜನರಿಗೆ ಕೊರೊನಾ ಲಸಿಕೆ ಬೂಸ್ಟರ್ ಡೋಸ್ ನೀಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ ಬೆನ್ನಲ್ಲೆ, ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಜ.10ರಿಂದ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರಿಗೆ ಕೊಡಲಾಗುವ ಮೂರನೇ ಡೋಸ್ ಲಸಿಕೆ, ಇಷ್ಟು ದಿನ ಕೊಟ್ಟ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಆಗಿರುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ. ಆದರೆ ಬೂಸ್ಟರ್ ಡೋಸ್ ಆಗಿ ಯಾವ ಲಸಿಕೆಯನ್ನು ನೀಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಕೇಂದ್ರ ಸರ್ಕಾರ ಮಾಹಿತಿ ಇಲ್ಲ. ಹೀಗಿರುವಾಗ ಇತ್ತೀಚೆಗಷ್ಟೇ ಭಾರತದಲ್ಲಿ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಅನುಮೋದನೆ ಪಡೆದ, ಕಾರ್ಬೆವ್ಯಾಕ್ಸ್ (Corbevax-ಸ್ವದೇಶಿ ಲಸಿಕೆ) ಲಸಿಕೆಯನ್ನು 3 ನೇ ಡೋಸ್ ಆಗಿ ಬಳಸುವ ಸಂಬಂಧ 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುವಂತೆ, ಅದರ ತಯಾರಿಕಾ ಕಂಪನಿ ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಗೆ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರ (DCGI-Drug Controller General of India) ತಿಳಿಸಿದೆ.
ಕಾರ್ಬೆವ್ಯಾಕ್ಸ್ ಲಸಿಕೆ ಬಗ್ಗೆ ವಿಸ್ತೃತ ಪರಿಶೀಲನೆ ಮತ್ತು ಚರ್ಚೆಯ ಬಳಿಕ ಕೊವಿಡ್ 19 ವಿಷಯ ತಜ್ಞರ ಸಮಿತಿ, ಈ ವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಅನುಮೋದನೆ ನೀಡುವಂತೆ ಶಿಫಾರಸ್ಸು ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ಬಯಾಲಾಜಿಕಲ್ ಇ ಕಂಪನಿ ಕಾರ್ಬೆವ್ಯಾಕ್ಸ್ ಲಸಿಕೆ ಸಂಬಂಧ ನೀಡಿದ್ದ ಡಾಟಾಗಳನ್ನು ಪರಿಶೀಲಿಸಲು ವಿಷಯ ತಜ್ಞರ ಸಮಿತಿ ಡಿಸೆಂಬರ್ 10ರಂದು ಸಭೆ ನಡೆಸಿತ್ತು. ಅದಾದ ಬಳಿಕ ಮೂರನೇ ಡೋಸ್ ಘೋಷಣೆ ನಂತರ ಮತ್ತೊಮ್ಮೆ ಈ ಕಂಪನಿ ಪರಿಷ್ಕೃತ ಡಾಟಾವನ್ನು ಸಲ್ಲಿಸಿ, ಕಾರ್ಬೆವ್ಯಾಕ್ಸ್ ಮೂರನೇ ಹಂತದ ಪ್ರಯೋಗ ನಡೆಸಲು ಮನವಿ ಮಾಡಿತ್ತು. ಇದೀಗ 3ನೇ ಡೋಸ್ ಆಗಿ ಬಳಸಬಹುದಾ ಎಂಬುದನ್ನು ಪರಿಶೀಲಿಸಲು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ ಸಿಕ್ಕಿದೆ.
ಕೊವಿಶೀಲ್ಡ್, ಕೊವ್ಯಾಕ್ಸಿನ್ಗಳಂತೆ ಇದೂ ಕೂಡ ಭಾರತದಲ್ಲೇ ತಯಾರಾದ ಲಸಿಕೆ. ಆದರೆ ಇದು ಭಾರತದ ಮೊದಲ ಪ್ರೊಟಿನ್ ಉಪಘಟಕ ಲಸಿಕೆಯಾಗಿದೆ. ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ , ಬಯಾಲಾಜಿಕಲ್ ಇ ಕಂಪನಿ, ಜಾಗತಿಕವಾಗಿಯೂ 1 ಬಿಲಿಯನ್ ಡೋಸ್ಗಳ ಪೂರೈಕೆಗೆ ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ಇದೂ ಸಹ ಎರಡು ಡೋಸ್ಗಳ ಲಸಿಕೆಯೇ ಆಗಿದೆ. ಇನ್ನು ಜನವರಿ 10ರಿಂದ ಬೂಸ್ಟರ್ ಡೋಸ್ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಎರಡನೇ ಡೋಸ್ ಪಡೆದು 9 ತಿಂಗಳು ಕಳೆದ ಅರ್ಹ ಫಲಾನುಭವಿಗಳು ಮೂರನೇ ಡೋಸ್ ಪಡೆಯಬಹುದಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಗೋವಾದಲ್ಲಿ ಪಾರ್ಟಿ ಮಾಡೋ ಪ್ಲಾನ್ ಇದೆಯಾ?; ಹೊಸ ಕೊವಿಡ್ ನಿಯಮಗಳು ಹೀಗಿವೆ