ಬಿಗಡಾಯಿಸುತ್ತಿದೆ ಏಲೂರು ಪರಿಸ್ಥಿತಿ: ಆಸ್ಪತ್ರೆಗೆ ಆಂಧ್ರ ಸಿಎಂ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಭೇಟಿ

ಪಟ್ಟಣದಲ್ಲಿ ಇಷ್ಟೆಲ್ಲ ಮಂದಿ ಒಂದೇ ಸಲಕ್ಕೆ ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಮಾತ್ರ ನಿಗೂಢವಾಗಿಯೇ ಉಳಿದಿದೆ. ಕಾಯಿಲೆಗೆ ತುತ್ತಾಗಿರುವವರ ರಕ್ತಪರೀಕ್ಷೆ, ಸಿಟಿ ಸ್ಕ್ಯಾನ್ ಮಾಡಲಾಗಿದ್ದರೂ ಏನೂ ಗೊತ್ತಾಗುತ್ತಿಲ್ಲ.

ಬಿಗಡಾಯಿಸುತ್ತಿದೆ ಏಲೂರು ಪರಿಸ್ಥಿತಿ: ಆಸ್ಪತ್ರೆಗೆ ಆಂಧ್ರ ಸಿಎಂ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಭೇಟಿ
ಅಸ್ವಸ್ಥರಾದ ಮಹಿಳೆ (ಪಿಟಿಐ ಚಿತ್ರ)
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 07, 2020 | 3:12 PM

ಅಮರಾವತಿ: ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದ 340 ಮಂದಿಯಲ್ಲಿ ನಿಗೂಢ ಕಾಯಿಲೆ ಕಾಣಿಸಿಕೊಂಡಿದೆ. ಒಂದು ಜೀವ ಬಲಿಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ವಾಕರಿಕೆ, ತಲೆಸುತ್ತು, ಅಪಸ್ಮಾರ, ಸುಸ್ತು, ಬೆನ್ನು, ತಲೆನೋವಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬರುವವರ ಸಂಖ್ಯೆ ಏರುತ್ತಲೇ ಇದೆ. ಆಂಧ್ರ ಮುಖ್ಯಮಂತ್ರಿ ವೈ.ಎಸ್​. ಜಗನ್ ಮೋಹನ್ ರೆಡ್ಡಿ ಸೋಮವಾರ ಏಲೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ.

ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಆಂಧ್ರಪ್ರದೇಶ ರಾಜ್ಯ ಮುಖ್ಯಕಾರ್ಯದರ್ಶಿ ನೀಲಂ ಸಾಹ್ನಿ ಅವರೊಂದಿಗೆ ಫೋನ್​ನಲ್ಲಿ ಮಾತನಾಡಿ, ಏಲೂರಿನ ಜನರ ಪರಿಸ್ಥಿತಿಯ ವಿವರಣೆ ಪಡೆದಿದ್ದಾರೆ. ಯಾವುದೇ ಸಹಾಯ ಬೇಕಿದ್ದರೂ ಕೇಂದ್ರದಿಂದ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹಾಗೇ, ಆಂಧ್ರ ರಾಜ್ಯಪಾಲರ ಕಚೇರಿಗೂ ಕರೆ ಮಾಡಿದ್ದಾರೆ.

ನಿಗೂಢವಾಗಿಯೇ ಉಳಿದಿದೆ ಕಾರಣ ಇಡೀ ಪಟ್ಟಣದಲ್ಲಿ ಇಷ್ಟೆಲ್ಲ ಮಂದಿ ಒಂದೇ ಸಮಯ ಅನಾರೋಗ್ಯಕ್ಕೆ ತುತ್ತಾಗುತ್ತಿರಲು ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ರೋಗಿಗಳ ರಕ್ತಪರೀಕ್ಷೆ, ಸಿಟಿ ಸ್ಕ್ಯಾನ್ ಮಾಡಲಾಗಿದ್ದರೂ ಏನೂ ಗೊತ್ತಾಗುತ್ತಿಲ್ಲ. ಕೆಲವರಿಗಂತೂ ಬೆನ್ನುಮೂಳೆ ದ್ರವವನ್ನೂ ತಪಾಸಣೆ ಮಾಡಲಾಗಿದ್ದು, ಅದೂ ಕೂಡ ನಾರ್ಮಲ್​ ಎಂದು ರಿಪೋರ್ಟ್ ಬಂದಿದೆ. ಇನ್ನು ರಕ್ತದಲ್ಲಿ ಬ್ಯಾಕ್ಟೀರಿಯಾ, ಯೀಸ್ಟ್, ವೈರಸ್​ಗಳನ್ನು ಪರೀಕ್ಷಿಸುವ ಕಲ್ಚರ್ ಟೆಸ್ಟ್, ಮಲ-ಮೂತ್ರ ಪರೀಕ್ಷೆಯನ್ನೂ ಮಾಡಲಾಗಿದ್ದು, ರಿಪೋರ್ಟ್​ಗೆ ಕಾಯುತ್ತಿರುವುದಾಗಿ ಸ್ಥಳೀಯ ಆಸ್ಪತ್ರೆಗಳು ತಿಳಿಸಿವೆ.

ಹೈದರಾಬಾದ್​ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ತಜ್ಞ ವಿಜ್ಞಾನಿಗಳು ಏಲೂರಿಗೆ ಆಗಮಿಸಿದ್ದು, ರೋಗಕ್ಕೆ ಕಾರಣ ಕಂಡು ಹಿಡಿಯಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಏಲೂರು ಮುನ್ಸಿಪಲ್​ ಕಾರ್ಪೋರೇಶನ್​ನಿಂದ 24×7 ಸಹಾಯವಾಣಿ ತೆರೆಯಲಾಗಿದೆ.

ಹಾಲಿನ ಮಾದರಿ ಪರೀಕ್ಷೆಗೆ ಹೀಗೆ ಒಮ್ಮೆಲೇ ಅನಾರೋಗ್ಯಕ್ಕೆ ಒಳಗಾಗುವ ಅನೇಕರು ಕೆಲವೇ ಹೊತ್ತಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಏಳು ಮಂದಿ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದು, ವಿಜಯವಾಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ರೋಗಿಗಳ ಕೊವಿಡ್​-19 ನೆಗೆಟಿವ್​ ಬಂದಿದ್ದು ಸಮಾಧಾನಕರ ಸಂಗತಿ. ಇನ್ನುಳಿದಂತೆ ಏಲೂರಿನ ವಿವಿಧ ಡೇರಿಗಳ ಹಾಲಿನ ಮಾದರಿಯನ್ನು ತಪಾಸಣೆಗೆ ಕಳಿಸಲಾಗಿದೆ. ಇನ್ನೊಂದೆಡೆ ನುರಿತ ವೈದ್ಯರ ತಂಡ ಏಲೂರಿಗೆ ತೆರಳಿದ್ದು, ಮನೆಮನೆಗೆ ಭೇಟಿ ಕೊಟ್ಟು, ತಪಾಸಣೆ ಮಾಡುತ್ತಿದೆ. ನೀರಿನಿಂದ ಏನೂ ಸಮಸ್ಯೆಯಾಗಿಲ್ಲ. ಇಲ್ಲಿನ ನೀರು ಕಲುಷಿತಗೊಂಡಿರಲಿಲ್ಲ ಎಂದು ಹೇಳಲಾಗಿದೆ.

ಆಂಧ್ರಪ್ರದೇಶದ ಏಲೂರು ಪಟ್ಟಣದಲ್ಲಿ ನಿಗೂಢ ಕಾಯಿಲೆ; 227 ಮಂದಿ ಅಸ್ವಸ್ಥ

Published On - 3:10 pm, Mon, 7 December 20