ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಸೋದರಿ ಶರ್ಮಿಳಾರಿಂದ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭದ ಘೋಷಣೆ
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ,ಎಸ್, ಜಗನ್ ಮೋಹನ್ ರೆಡ್ಡಿ ಸೋದರಿ ವೈ.ಎಸ್. ಶರ್ಮಿಳಾ ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭಿಸುವುದಾಗಿ ಹೇಳಿದ್ದಾರೆ.
ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್. ಶರ್ಮಿಳಾ ತೆಲಂಗಾಣದಲ್ಲಿ ರಾಜಕೀಯ ಪಕ್ಷವೊಂದನ್ನು ಆರಂಭಿಸಲಿದ್ದಾರೆ. ಈ ಬಗ್ಗೆ ಖಮ್ಮಂನಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಪಕ್ಷದ ಹೆಸರು, ಕಾರ್ಯಸೂಚಿ ಮುಂತಾದ ವಿವರಗಳನ್ನು ಜುಲೈ 8ನೇ ತಾರೀಕಿನಂದು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಭರವಸೆ ನೀಡಿದ ಪ್ರಕಾರ ಸರ್ಕಾರಿ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸದಿದ್ದಲ್ಲಿ ಏಪ್ರಿಲ್ 15ರಿಂದ ಮೂರು ದಿನಗಳ ಕಾಲ ಹೈದರಾಬಾದ್ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಉಪವಾಸ ಸತ್ಯಾಗ್ರಹವು ಎಲ್ಲ ಜಿಲ್ಲೆಗಳಲ್ಲೂ ಆಕೆಯ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತು ಬೇಡಿಕೆ ಈಡೇರುವ ತನಕ ಮುಂದುವರಿಯಲಿದೆ. ತೆಲಂಗಾಣದಲ್ಲಿ ಅಧಿಕಾರದಲ್ಲಿ ಇರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರಶ್ನೆ ಮಾಡುವುದಕ್ಕೆ ಪಕ್ಷವೊಂದನ್ನು ಆರಂಭಿಸುವ ಅಗತ್ಯ ಇದೆ ಎಂದು ಶರ್ಮಿಳಾ ಹೇಳಿದ್ದಾರೆ. ಚಂದ್ರಶೇಖರ್ ರಾವ್ ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡುವುದಕ್ಕೆ ನಮ್ಮ ಪಕ್ಷದ ಅಗತ್ಯ ಇದೆ. ತೆಲಂಗಾಣ ರಾಜ್ಯ ಸ್ಥಾಪನೆಯಾಗಿ 7 ವರ್ಷ ಆಗಿರಬಹುದು. ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಅಂದಹಾಗೆ ಶರ್ಮಿಳಾ ಅವರ ತಂದೆ ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ. ಅವರನ್ನು ವೈಎಸ್ಆರ್ ಅಂತಲೇ ಕರೆಯಲಾಗುತ್ತಿತ್ತು. 2004ರಿಂದ 2009ರ ತನಕ ಅವಿಭಜಿತ ಆಂಧ್ರಪ್ರದೇಶದಕ್ಕೆ ವೈಎಸ್ಆರ್ ಮುಖ್ಯಮಂತ್ರಿ ಆಗಿದ್ದರು. ಅವರು ಮುಖ್ಯಮಂತ್ರಿ ಆಗಿರುವಾಗಲೇ 2009ರ ಸೆಪ್ಟೆಂಬರ್ನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಅಂದಹಾಗೆ ತೆಲಂಗಾಣದಲ್ಲಿ ವೈಎಸ್ಆರ್ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶರ್ಮಿಳಾ ನೆನಪಿಸಿಕೊಂಡಿದ್ದಾರೆ.
(Andhra Pradesh CM YS Jagan Mohan Reddy sister YS Sharmila in a public meeting at Khammam announced about new political party float in Telangana.)