ಪಥನಟುಲಿಯಲ್ಲಿ ಬೂತ್ ಸಂಖ್ಯೆ 85ರ ಹೊರಗೆ ದುಷ್ಕರ್ಮಿಗಳು 18 ವರ್ಷದ ಮತದಾರ ಆನಂದ ಬರ್ಮನ್ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ವರದಿ ಆಗಿದೆ. ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ಏರ್ಪಟ್ಟ ನಂತರ ಈ ಘಟನೆ ಸಂಭವಿಸಿದೆ. ಇನ್ನು ಈ ಕೃತ್ಯಕ್ಕೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಬೇಕಿದೆ. ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಬಾಂಬ್ಗಳನ್ನು ಎಸೆಯಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವುದಕ್ಕೆ ಕೇಂದ್ರ ಪಡೆಗಳನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತಪಟ್ಟ ಬರ್ಮನ್ ತಮ್ಮ ಪಕ್ಷಕ್ಕೆ ಸೇರಿದ ವ್ಯಕ್ತಿ ಎಂದು ಬಿಜೆಪಿ ಹಾಗೂ ಟಿಎಂಸಿ ಎರಡೂ ಹೇಳಿಕೊಂಡಿವೆ. ಆದರೆ ಆತನ ಕುಟುಂಬ ಸದಸ್ಯರು ಹೇಳುವಂತೆ, ಬರ್ಮನ್ ಕೇಸರಿ ಪಕ್ಷದ ಬೆಂಬಲಿಗ. “ಕೂಚ್ಬೆಹರ್ನ ಸೀತಾಲಕುಚಿಯಲ್ಲಿ ಮತದಾನದ ಬೂತ್ ಹೊರಗೆ ವ್ಯಕ್ತಿಯೊಬ್ಬರಿಗೆ ಗುಂಡಿಟ್ಟು ಕೊಲ್ಲಲಾಗಿದೆ ಎಂಬ ಮಾಹಿತಿ ನಮಗೆ ಬಂದಿದೆ. ಈ ಬಗ್ಗೆ ಮೈಕ್ರೋ ಅಬ್ಸರ್ವರ್ರಿಂದ ವರದಿ ಕೇಳಿದ್ದೇವೆ,” ಎಂದು ಚುನಾವಣೆ ಆಯೋಗದ ಅಧಿಕಾರಿ ಹೇಳಿದ್ದಾರೆ. ಇನ್ನು ಕೂಚ್ಬೆಹರ್ನ ನಟಬರಿ, ಸೀತಾಲಕುಚಿ, ತೂಫಾನ್ಗಂಜ್, ಮಾತಾಭಂಗ ಮತ್ತು ದಿನ್ಹಾತದಲ್ಲಿ ತಮ್ಮ ಪಕ್ಷದ ಏಜೆಂಟರಿಗೆ ಬೂತ್ ಪ್ರವೇಶಿಸಲು ಬಿಜೆಪಿ ಅವಕಾಶ ನೀಡುತ್ತಿಲ್ಲ ಎಂದು ಟಿಎಂಸಿ ಆರೋಪಿಸಿದೆ. ಆದರೆ ಇದನ್ನು ಬಿಜೆಪಿ ನಿರಾಕರಿಸಿದೆ.
ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಪ್ರಾಥಮಿಕ ವರದಿಯಂತೆ, ಹಳ್ಳಿಯೊಂದರಲ್ಲಿ ಸಿಐಎಸ್ಎಫ್ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದಾಗ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳೀಯರು ಸಿಐಎಸ್ಎಫ್ ಅಧಿಕಾರಿಗಳಿಗೆ ಘೇರಾವ್ ಹಾಕಿ, ರೈಫಲ್ ಕಸಿದುಕೊಳ್ಳುವುದಕ್ಕೆ ಯತ್ನಿಸಿದಾಗ ಕೇಂದ್ರ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿವೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಏಕೆಂದರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ. ಸುಮಾರು 400 ಜನರಿದ್ದ ಗುಂಪು ಕೇಂದ್ರ ಪಡೆಗಳ ಮೇಲೆ ದಾಳಿ ನಡೆಸಿವೆ.
ಇನ್ನು ಹೂಗ್ಲಿ ಜಿಲ್ಲೆಯಲ್ಲಿ ಸಂಸದೆ ಲಾಕೆಟ್ ಚಟರ್ಜಿ ಕಾರಿನ ಮೇಲೆ ದಾಳಿ ನಡೆದಿದ್ದು, ಕಾರಿನ ಗಾಜು ಪುಡಿಪುಡಿಯಾಗಿದೆ. ನನ್ನ ಮೇಲೆ ಹಲ್ಲೆಯಾಗಿದೆ, ಗಾಯಗೊಂಡಿದ್ದೇನೆ ಎಂದ ಲಾಕೆಟ್ ಚಟರ್ಜಿ ಹೇಳಿದ್ದಾರೆ. ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಆಯೋಗಕ್ಕೆ ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 2ನೇ ನೋಟಿಸ್ ನೀಡಿದ ಚುನಾವಣಾ ಆಯೋಗ
(During West Bengal assembly elections 4th phase 4 people shot dead after a clash broke out between BJP and TMC workers on Saturday.)