ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 2ನೇ ನೋಟಿಸ್ ನೀಡಿದ ಚುನಾವಣಾ ಆಯೋಗ

ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಘೋಷಣೆಯಾದ ದಿನದಿಂದಲೂ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು.

  • TV9 Web Team
  • Published On - 10:03 AM, 9 Apr 2021
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 2ನೇ ನೋಟಿಸ್ ನೀಡಿದ ಚುನಾವಣಾ ಆಯೋಗ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಕೊಲ್ಕತ್ತಾ:  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗ ಎರಡನೇ ನೋಟಿಸ್ ನೀಡಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಮತದಾನದ ವೇಳೆ ಸಿಆರ್​ಪಿಎಫ್ ಭದ್ರತಾ ಪಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಮತದಾರರನ್ನು ಬೆದರಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಕ್ಕೆ ಸ್ಪಷ್ಟನೆ ಕೋರಿ ಚುನಾವಣಾ ಆಯೋಗ ಎರಡನೇ ನೋಟಿಸ್ ಹೊರಡಿಸಿದೆ. ಎರಡು ದಿನಗಳಲ್ಲಿ ಈ ನೋಟಿಸ್​ಗೆ ಉತ್ತರಿಸುವಂತೆ ಚುನಾವಣಾ ಆಯೋಗ ಸಿಎಂ ಮಮತಾ ಬ್ಯಾರ್ಜಿ ಅವರಿಗೆ ತಿಳಿಸಿದೆ.

ಭದ್ರತಾ ಪಡೆಗಳ ಮೇಲಿನ ಆರೋಪ ಒಂದೇ ಅಲ್ಲದೇ ಮತದಾನಕ್ಕೆ ಅಡ್ಡಿ ಆರೋಪವನ್ನು ಸಿಎಂ ಮಮತಾ ಬ್ಯಾನರ್ಜಿ ಮಾಡಿದ್ದರು. ‘ನೀವು ಚುನಾವಣಾ ಆಯೋಗದ ಮೇಲೆ ಮಾಡಿದ ಆರೋಪಗಳು ವಾಸ್ತವಿಕವಾಗಿ ದೋಷಪೂರಿತವಾಗಿವೆ. ಪ್ರಾಯೋಗಿಕವಾಗಿ ಯಾವುದೇ ಪುರಾವೆ ಇಲ್ಲದೇ ಆರೋಪ ಮಾಡಿದ್ದೀರಿ’ ಎಂದು ಚುನಾವಣಾ ಆಯೋಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈ ಮೊದಲೇ ಖಾರ ಉತ್ತರ ನೀಡಿತ್ತು. ಅಲ್ಲದೇ, ಇಂತಹ ಆರೋಪ ಮಾಡಿದ್ದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ನಂದಿಗ್ರಾಮ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಅಡ್ಡಿಪಡಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗವನ್ನು ಆರೋಪಿಸಿ ಕೈಬರಹದ ಪತ್ರ ಬರೆದಿದ್ದರು.

ಪಶ್ಚಿಮ ಬಂಗಾಳಕ್ಕೆ ಎಂಟು ಹಂತಗಳ ಸುದೀರ್ಘಾವಧಿಯ ಚುನಾವಣೆಯನ್ನು ಘೋಷಿಸಿದ ಸಮಯದಿಂದಲೂ ಚುನಾವಣಾ ಆಯೋಗದ ಮಮತಾ ಬ್ಯಾನರ್ಜಿ ಮೇಲೆ ಕೋಪಿಸಿಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಸ್ತಕ್ಷೇತ್ರ ಚುನಾವಣಾ ಆಯೋಗದ ಪ್ರಕ್ರಿಯೆಗಳಲ್ಲಿ ಕಂಡುಬರುತ್ತಿದೆ ಎಂದು ಅವರು ಆಪಾದಿಸಿದ್ದರು. ಈ ಕುರಿತು ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿ, ಅವರ ದೀದಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿತ್ತು.

ಗೃಹ ಸಚಿವ ಅಮಿತ್ ಶಾ ಮೇಲೆ ಇನ್ನೊಂದು ಆರೋಪ
ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಬಿಜೆಪಿ ಮತಗಟ್ಟೆಗಳನ್ನು ವಶಕ್ಕೆ ಪಡೆದಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದರು.

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯುವಾಗ ಸ್ಥಳೀಯ ಮತಗಟ್ಟೆಯೊಂದಕ್ಕೆ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್​​ನ ಕಾರ್ಯಕರ್ತರ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. ಝಡ್ ಪ್ಲಸ್ ಸುರಕ್ಷತೆ ಹೊಂದಿದ್ದರೂ ಸಹ ಪರಿಸ್ಥಿತಿ ಕೈಮೀರಿ ಸಿಎಂ ಮಮತಾ ಬ್ಯಾನರ್ಜಿ ಈ ವೇಳೆ ಕೊಠಡಿಯೊಂದರಲ್ಲಿ ಎರಡು ಗಂಟೆಗಳ ಕಾಲ ಸಿಲುಕಿದ್ದರು. ನಂತರ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸಿದ್ದರು. ಈ ಘಟನೆಯ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆಯೋಗ ವಿಫಲವಾಗಿದೆ ಎಂದು ದೂರಿದ್ದರು. ತೃಣಮೂಲ ಕಾಂಗ್ರೆಸ್​ನ ಪೋಲಿಂಗ್ ಏಜೆಂಟ್​ರನ್ನು ಮತಗಟ್ಟೆಯ ಒಳಗೆ ಬಿಡುತ್ತಿಲ್ಲ ಎಂದು ದೂರಿದ್ದರು.

ಇದನ್ನೂ ಓದಿ: ‘ದೀದೀ.. ಓ ದೀದಿ’ ಎಂದು ಕರೆದ ಪ್ರಧಾನಿ ಮೋದಿ; ‘ಒಂದೇ ಕಾಲಲ್ಲಿ ಪಶ್ಚಿಮ ಬಂಗಾಳವನ್ನು ಗೆಲ್ಲುತ್ತೇನೆಂದು’ ಗುಡುಗಿದ ಮಮತಾ ಬ್ಯಾನರ್ಜಿ

ವ್ಯಕ್ತಿ-ವ್ಯಕ್ತಿತ್ವ: ಬಡತನದಲ್ಲಿ ನೊಂದಿದ್ದ ಮಮತಾ ಬ್ಯಾನರ್ಜಿಗೆ ಹೋರಾಟದ ರಾಜಕೀಯ ರಕ್ತಗತ, ಇಲ್ಲಿದೆ ಮಮತಾ ದೀದಿ ಬದುಕು ಸಾಗಿ ಬಂದ ಹಾದಿ