
ಕೃಷ್ಣ, ಆಗಸ್ಟ್ 05: ಮದುವೆಯಾಗಿ ಕೇವಲ ಆರು ತಿಂಗಳು ಕಳೆದಿತ್ತಷ್ಟೇ, ಶ್ರೀವಿದ್ಯಾ ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಟುಂಬದವರಿಗೆ ಸಿಡಿಲು ಬಡಿದಂತಾಗಿತ್ತು. ಆಕೆ ತಮ್ಮನಿಗೆ ಬರೆದ ಪತ್ರ ಕರುಳು ಹಿಂಡುವಂತಿತ್ತು. ಈ ಸಲ ನನಗೆ ರಾಖಿ ಕಟ್ಟೋಕೆ ಆಗಲ್ಲ, ಕ್ಷಮಿಸಿಬಿಡು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. 24 ವರ್ಷದ ಶ್ರೀವಿದ್ಯಾ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಕಾಲೇಜು ಉಪನ್ಯಾಸಕಿಯಾಗಿದ್ದರು. ಆರು ತಿಂಗಳ ಹಿಂದಷ್ಟೇ ರಾಂಬಾಬು ಎಂಬುವವರನ್ನು ಮದುವೆಯಾಗಿದ್ದರು.
ಮದುವೆಯಾಗಿ ತಿಂಗಳಿನಿಂದಲೇ ಗಂಡನ ಮನೆಯವರಿಂದ ಕಿರುಕುಳ ಶುರುವಾಗಿತ್ತು ಎಂದು ಶ್ರೀವಿದ್ಯಾ ಪತ್ರದಲ್ಲಿ ಬರೆದಿದ್ದಾರೆ. ರಾಂಬಾಬು ಕುಡಿದು ಮನೆಗೆ ಬರುತ್ತಿದ್ದ. ದೈಹಿಕ ಹಿಂಸೆ ನೀಡುತ್ತಿದ್ದ, ಮಾತಿನಲ್ಲಿ ನಿಂದಿಸುತ್ತಿದ್ದ. ತನ್ನನ್ನು ಅಪಹಾಸ್ಯ ಮಾಡುತ್ತಿದ್ದ. ಬೇರೆ ಮಹಿಳೆಯರ ಮುಂದೆ ತನ್ನನ್ನು ನಿಷ್ಪ್ರಯೋಜಕ ಎಂದು ಕರೆಯುತ್ತಿದ್ದ ಎಂದು ಆಕೆ ಬರೆದಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತು ಮಹಿಳೆ ಈ ತಪ್ಪು ಹೆಜ್ಜೆ ಇಡಬೇಕಾಯಿತು.
ಮತ್ತಷ್ಟು ಓದಿ; ನನ್ನ ಗಂಡ ಒಳ್ಳೆಯವನೆ ಆದ್ರೆ….: ಡೆತ್ ನೊಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ
ಮತ್ತೊಂದು ಘಟನೆ
800 ಗ್ರಾಂ ಚಿನ್ನ, 70 ಲಕ್ಷ ಬೆಲೆ ಬಾಳುವ ಕಾರು ಕೊಟ್ಟರೂ ವರದಕ್ಷಿಣೆ ಕಾಟ, ನವವಿವಾಹಿತೆ ಆತ್ಮಹತ್ಯೆ
ಕಳೆದ ಏಪ್ರಿಲ್ನಲ್ಲಿ ಅದ್ಧೂರಿ ಮದುವೆ(Marriage) ನೆರವೇರಿತ್ತು. 800 ಗ್ರಾಂ ಚಿನ್ನ, 70 ಲಕ್ಷ ಬೆಲೆ ಬಾಳುವ ಕಾರು ವರದಕ್ಷಿಣೆಯಾಗಿ ನೀಡಿದ್ದರೂ ಕೂಡ, ಆಕೆಗೆ ಚಿತ್ರಹಿಂಸೆ ಮಾತ್ರ ತಪ್ಪಲಿಲ್ಲ. ಅದಕ್ಕೆ ಮನನೊಂದು ನವವಿವಾಹಿತೆ ರಿಧನ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ದೇಶದಲ್ಲಿ ವರದಕ್ಷಿಣೆ ಪಿಡುಗು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಇಂಥಾ ಪ್ರಕರಣಗಳು ಹೆಣ್ಣು ಹೆತ್ತವರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ರಿಧನ್ಯಾ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್ನಲ್ಲಿ 28 ವರ್ಷದ ಕವಿನ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಲ್ಲಿ 800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಮೌಲ್ಯದ ವೋಲ್ವೋ ಕಾರು ವರದಕ್ಷಿಣೆಯಾಗಿ ನೀಡಲಾಗಿತ್ತು.
ಭಾನುವಾರ ರಿಧನ್ಯಾ ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು, ದಾರಿಯಲ್ಲಿ ಆಕೆ ತನ್ನ ಕಾರನ್ನು ನಿಲ್ಲಿಸಿ ಕೀಟನಾಶಕ ಸೇವಿಸಿದ್ದಾರೆ. ಈ ಪ್ರದೇಶದಲ್ಲಿ ತುಂಬಾ ಹೊತ್ತಿನಿಂದ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ರಿಧನ್ಯಾಳ ಬಾಯಿಂದ ನೊರೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರೊಳಗೆ ಪ್ರಾಣ ಬಿಟ್ಟಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ