ತಿರುಪತಿಯಲ್ಲಿ ವಿಐಪಿ ದರ್ಶನಕ್ಕಾಗಿ ಸುಳ್ಳು ಹೇಳಿದ ನಕಲಿ ಐಆರ್​ಎಸ್​ ಅಧಿಕಾರಿ ಬಂಧನ

|

Updated on: Oct 23, 2023 | 1:50 PM

ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಎಂದು ಹೇಳಿಕೊಳ್ಳಲು ದೊಡ್ಡ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ನಕಲಿ ಗುರುತಿನ ಚೀಟಿ, ವಿಸಿಟಿಂಗ್ ಕಾರ್ಡ್, ಆಧಾರ್ ಕಾರ್ಡ್​ಗಳನ್ನೂ ಸೃಷ್ಟಿಸಿದ್ದರು.

ತಿರುಪತಿಯಲ್ಲಿ ವಿಐಪಿ ದರ್ಶನಕ್ಕಾಗಿ ಸುಳ್ಳು ಹೇಳಿದ ನಕಲಿ ಐಆರ್​ಎಸ್​ ಅಧಿಕಾರಿ ಬಂಧನ
ತಿರುಪತಿ ದೇವಸ್ಥಾನ
Follow us on

ತಿರುಮಲ: ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಗಂಟೆಗಟ್ಟಲೆ ಸಾಲಿನಲ್ಲಿ ಕಾದು ತಿಮ್ಮಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ವಾರಾಂತ್ಯದಲ್ಲಿ ಮತ್ತು ಸಾಲು ಸಾಲು ರಜೆ ಇದ್ದಾಗಲಂತೂ ತಿರುಪತಿ ವೆಂಕಟೇಶ್ವರನ ದರ್ಶನ ಸಿಗುವುದೇ ಕಷ್ಟಕರವಾಗಿರುತ್ತದೆ. ಹೀಗಾಗಿ, ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಪ್ಲಾನ್ ಮಾಡಿದ ವ್ಯಕ್ತಿಯೊಬ್ಬರು ಸುಲಭವಾಗಿ ದರ್ಶನ ಪಡೆಯಲು ಐಆರ್‌ಎಸ್ ಅಧಿಕಾರಿಯೆಂದು ಹೇಳಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಐಆರ್​ಎಸ್​ ಅಧಿಕಾರಿಯೆಂದು ನಕಲಿ ಗುರುತಿನ ದಾಖಲೆಗಳನ್ನೂ ಸಿದ್ಧಪಡಿಸಿಕೊಂಡಿದ್ದರು. ಬಳಿಕ ವಿಐಪಿ ಬ್ಯಾಡ್ಜ್‌ಗಳನ್ನು ತೆಗೆದುಕೊಂಡು ವಿಐಪಿ ದರ್ಶನ ಪಡೆದಿದ್ದಾರೆ.

ಆದರೆ, ಆ ಅಧಿಕಾರಿಯ ವರ್ತನೆಯನ್ನು ನೋಡಿದ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಅವರನ್ನು ತಪಾಸಣೆ ಮಾಡಿದಾಗ ಆ ವ್ಯಕ್ತಿಯ ನಿಜವಾದ ಗುರುತು ಪತ್ತೆಯಾಗಿದೆ. ನಂತರ ತಿರುಮಲ ಟೌನ್ ಪೊಲೀಸರು ಈ ನಕಲಿ ಅಧಿಕಾರಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆತ ಈಗ ಕಂಬಿ ಎಣಿಸುತ್ತಿದ್ದಾರೆ.

ಇದನ್ನೂ ಓದಿ: ತಿರುಪತಿ ಬೆಟ್ಟದ ಕಾಲುದಾರಿಯಲ್ಲಿ ಮತ್ತೊಂದು ಚಿರತೆ ಸೆರೆ; ಇದುವರೆಗೂ ಬೋನಿಗೆ ಬಿದ್ದಿವೆ 6 ಚಿರತೆಗಳು

ತಿರುಪತಿ ದರ್ಶನಕ್ಕಾಗಿ ಐಆರ್​ಎಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯನ್ನು ವಿಜಯವಾಡದ ಶ್ರೀನಿವಾಸನಗರ ಬ್ಯಾಂಕ್ ಕಾಲೋನಿಯ ವೇದಾಂತಂ ಶ್ರೀನಿವಾಸ್ ಭರತ್ ಭೂಷಣ್ (52) ಎಂದು ಗುರುತಿಸಲಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಎಂದು ಹೇಳಿಕೊಳ್ಳಲು ದೊಡ್ಡ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ನಕಲಿ ಗುರುತಿನ ಚೀಟಿ, ವಿಸಿಟಿಂಗ್ ಕಾರ್ಡ್, ಆಧಾರ್ ಕಾರ್ಡ್​ಗಳನ್ನೂ ಸೃಷ್ಟಿಸಿದ್ದರು. ಹಲವು ಬಾರಿ ತಿರುಪತಿ ದೇವಸ್ಥಾನಕ್ಕೆ ಬಂದಿದ್ದ ಈ ನಕಲಿ ಅಧಿಕಾರಿ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಎಂದು ಟಿಟಿಡಿ ಅಧಿಕಾರಿಗಳಿಗೆ ಪರಿಚಯಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಅವರು ಜಾರಿ ನಿರ್ದೇಶನಾಲಯದ (ED) ಹೆಚ್ಚುವರಿ ಕಮಿಷನರ್ ಎಂದು ಹೇಳಿಕೊಳ್ಳುತ್ತಿದ್ದರು. ಇದರಿಂದ ಟಿಟಿಡಿ ಅಧಿಕಾರಿಗಳು ಆ ವ್ಯಕ್ತಿಯ ಮೇಲೆ ಅನುಮಾನಗೊಂಡು ಮೊದಲು ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ಇಲಾಖೆಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: Aparna Ramesh: ಅಪ್ಪ ನಿವೃತ್ತ ಐಆರ್​ಎಸ್ ಅಧಿಕಾರಿ, ​ತಾಯಿ ಇಂಗ್ಲೀಷ್​ ಅಧ್ಯಾಪಕಿ; ಪುತ್ರಿ 35ನೇ Rank ಪಡೆದು ಐಎಎಸ್ ಆದರು! ​

ಆ ವ್ಯಕ್ತಿಯ ಬಳಿಯಿದ್ದ ಗುರುತಿನ ದಾಖಲೆಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂಬುದು ಗೊತ್ತಾಯಿತು. ಇದರಿಂದ ಶ್ರೀನಿವಾಸ್ ವಂಚಿಸುತ್ತಿದ್ದುದನ್ನು ದೃಢಪಡಿಸಿದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಟಿಟಿಡಿ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಂಗ್ ನೀಡಿದ ದೂರಿನ ಪ್ರಕಾರ ತಿರುಮಲ ಪೊಲೀಸರು ಆರೋಪಿ ಶ್ರೀನಿವಾಸ್ ವಿರುದ್ಧ ವಂಚನೆ ಮತ್ತು ಫೋರ್ಜರಿ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ ಎಂದು ತಿರುಮಲ ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ