ಸಮಾಜವಾದಿ ಪಕ್ಷದ ಕಚೇರಿ ಹೊರಗೆ ‘ಭವಿಷ್ಯದ ಪ್ರಧಾನಿ ಅಖಿಲೇಶ್’ ಎಂಬ ಹೋರ್ಡಿಂಗ್; ಇಂಡಿಯಾ ಮೈತ್ರಿಕೂಟದಲ್ಲಿ ಬಿಕ್ಕಟ್ಟು?
Akhilesh Yadav: ಪಕ್ಷದ ಕಚೇರಿಯ ಹೊರಗೆ ಈ ರೀತಿಯ ಪೋಸ್ಟರ್ ಹಾಕುವ ಹಿಂದಿನ ಉದ್ದೇಶದ ಬಗ್ಗೆ ಕೇಳಿದಾಗ, ಫಕ್ರುಲ್ ಹಸನ್ 'ಚಾಂದ್' ಅವರು, "ಅಖಿಲೇಶ್ ಯಾದವ್ ಅವರ ಜನ್ಮದಿನ ಜುಲೈ 1 ರಂದು, ಆದರೆ ತಮ್ಮ ನಾಯಕನ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು, ಸಮಾಜವಾದಿ ಪಕ್ಷದ ಕಾರ್ಯಕರ್ತರು ಅವರ ಜನ್ಮದಿನವನ್ನು ಅನೇಕ ಬಾರಿ ಆಚರಿಸುತ್ತಾರೆ ಎಂದಿದ್ದಾರೆ.
ದೆಹಲಿ ಅಕ್ಟೋೂಬರ್ 23: ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಭಾರತದ ‘ಭವಿಷ್ಯದ ಪ್ರಧಾನ ಮಂತ್ರಿ’ ಎಂದು ಘೋಷಿಸುವ ಹೋರ್ಡಿಂಗ್ ಪಕ್ಷದ ಲಕ್ನೋ ಕಚೇರಿಯ ಹೊರಗೆ ಕಾಣಿಸಿಕೊಂಡಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟಗಳ ನಡುವೆ ಬಿಕ್ಕಟ್ಟು ಇದೆಯೇ ಎಂಬ ಸಂದೇಹ ಹುಟ್ಟು ಹಾಕಿದೆ. ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಸದಸ್ಯರಾದ ಕಾಂಗ್ರೆಸ್ ಮತ್ತು ಎಸ್‌ಪಿ ನಡುವೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಇದು ತೋರಿಸುತ್ತಿದೆ. ಈ ಪೋಸ್ಟರ್ ಅನ್ನು ಪಕ್ಷದ ವಕ್ತಾರ ಫಕ್ರುಲ್ ಹಸನ್ ‘ಚಾಂದ್’ ಹಾಕಿದ್ದಾರೆ.
ಪಕ್ಷದ ಕಚೇರಿಯ ಹೊರಗೆ ಈ ರೀತಿಯ ಪೋಸ್ಟರ್ ಹಾಕುವ ಹಿಂದಿನ ಉದ್ದೇಶದ ಬಗ್ಗೆ ಕೇಳಿದಾಗ, ಫಕ್ರುಲ್ ಹಸನ್ ‘ಚಾಂದ್’ ಅವರು, “ಅಖಿಲೇಶ್ ಯಾದವ್ ಅವರ ಜನ್ಮದಿನ ಜುಲೈ 1 ರಂದು, ಆದರೆ ತಮ್ಮ ನಾಯಕನ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು, ಸಮಾಜವಾದಿ ಪಕ್ಷದ ಕಾರ್ಯಕರ್ತರು ಅವರ ಜನ್ಮದಿನವನ್ನು ಅನೇಕ ಬಾರಿ ಆಚರಿಸುತ್ತಾರೆ. ಇಂದು ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಅಖಿಲೇಶ್ ಯಾದವ್ ದೇಶದ ಪ್ರಧಾನಿಯಾಗಲಿ ಮತ್ತು ಜನರ ಸೇವೆ ಮಾಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪೋಸ್ಟರ್‌ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಉತ್ತರ ಪ್ರದೇಶ ಸರ್ಕಾರದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ, ಹಗಲುಗನಸು ಕಾಣುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
‘ಮುಂಗೇರಿ ಲಾಲ್ ಕೆ ಹಸೀನ್ ಸಪ್ನೆ’ ಎಂಬ ಮಾತಿದೆ. ಯಾರನ್ನೂ ಹಗಲುಗನಸು ಕಾಣುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಒಬ್ಬರ ಸಾಮರ್ಥ್ಯಕ್ಕೆ ತಕ್ಕಂತೆ ಕನಸು ಕಾಣಬೇಕು. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇಶದ ಜನತೆ ಪ್ರಧಾನಿ ಮೋದಿಯನ್ನು ನಂಬಿ ಮತ್ತು ದೇಶವು ಖಂಡಿತವಾಗಿಯೂ ಪ್ರಧಾನಿ ಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡುತ್ತದೆ ಎಂದು ಡ್ಯಾನಿಶ್ ಅನ್ಸಾರಿ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಇಂಡಿಯಾ ಬ್ಲಾಕ್‌ನ ಸದಸ್ಯರಾಗಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಈ ವರ್ಷದ ಆರಂಭದಲ್ಲಿ ರಚಿಸಲಾದ 28 ರಾಜಕೀಯ ಪಕ್ಷಗಳ ಮೈತ್ರಿಕೂಟ ಇಂಡಿಯಾ ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.
ಇದನ್ನೂ ಓದಿ: ಅಖಿಲೇಶ್ನ್ನು ವಕಿಲೇಶ್ ಎಂದ ಕಮಲ್ ನಾಥ್; ಯಾರ ಹೆಸರಲ್ಲಿ ಕಮಲ ಇರುತ್ತೋ ಅವರು ಹೀಗಂತಾರೆ ಎಂದ ಎಸ್‌ಪಿ ನಾಯಕ
ಕಳೆದ ವಾರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ವಿಫಲವಾದ ಬಗ್ಗೆ ಮಾತಿನ ಸಮರ ಭುಗಿಲೆದ್ದಿತ್ತು. ಕಾಂಗ್ರೆಸ್ ಸಮಾಜವಾದಿ ಪಕ್ಷಕ್ಕೆ “ದ್ರೋಹ” ಮಾಡಬಾರದು ಮತ್ತು ಅವರು ಮೈತ್ರಿ ಬಯಸುತ್ತೀರಾ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಯಾದವ್ ಶನಿವಾರ ಹೇಳಿದ್ದಾರೆ.
ಆದರೆ, ಈ ವಿಚಾರವಾಗಿ ಕಾಂಗ್ರೆಸ್ ನಾಯಕತ್ವ ತನ್ನನ್ನು ಸಂಪರ್ಕಿಸಿದೆ ಎಂದು ಅವರು ಸುಳಿವು ನೀಡಿದ್ದಾರೆ.
“ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಮೂಲಕ ನನಗೆ ಸಂದೇಶ ಬಂದಿದೆ. ಅವರು ಏನಾದರೂ ಹೇಳುತ್ತಿದ್ದರೆ, ನಾನು ಅನುಸರಿಸಬೇಕಾಗುತ್ತದೆ. ಅವರು ಕೆಲವು ಸಂದೇಶವನ್ನು ನೀಡಿದರು ಎಂದು ಯಾವುದೇ ಹೆಸರನ್ನು ಬಹಿರಂಗಪಡಿಸದೆ ಅಥವಾ ಹೆಚ್ಚಿನ ವಿವರಣೆಯನ್ನು ನೀಡದೆ ಯಾದವ್ ಹೇಳಿದರು. “ಆದರೆ ನಾನು ಒಂದು ವಿಷಯ ಹೇಳಲು ಬಯಸುತ್ತೇನೆ. ಅವರು ಮೈತ್ರಿ ಬಯಸದಿದ್ದರೆ ಅವರು ನಮ್ಮನ್ನು ಏಕೆ ಕರೆದರು? ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ