ಮುಂಬೈನಲ್ಲಿ ₹1,400 ಕೋಟಿ ಮೌಲ್ಯದ ಮಾದಕವಸ್ತು ವಶಕ್ಕೆ; ಡ್ರಗ್ಸ್ ತಯಾರಿಸುತ್ತಿದ್ದ ಕೆಮಿಸ್ಟ್ರಿ ಪದವೀಧರನ ಬಂಧನ
ಉತ್ತರ ಪ್ರದೇಶ ನಿವಾಸಿಯಾದ ಕುಮಾರ್ ಪೂರ್ವಾಂಚಲ್ ಯುನಿವರ್ಸಿಟಿಯಿಂದ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪಡೆದಿದ್ದು, 1997ರಲ್ಲಿ ಮುಂಬೈಗೆ ಬಂದಿದ್ದ. ಈತ ನಲಸಪೋರಾದಲ್ಲಿ ವಾಸಿಸುತ್ತಿದ್ದು, ಫಾರ್ಮಾ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದನು.
ಮುಂಬೈ: ಮುಂಬೈ (Mumbai) ನಗರದಲ್ಲಿ ಒಳ್ಳೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಕೆಮಿಸ್ಟ್ರಿ ಸ್ನಾತಕೋತ್ತರ ಪದವೀಧರ ಆನಂತರ ಮಾದಕವಸ್ತು (drugs) ಮಾರಾಟ ಜಾಲ ನಡೆಸಿ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣ ಬ್ರೇಕಿಂಗ್ ಬ್ಯಾಡ್ ಎಂಬ ಟಿವಿ ಸರಣಿಯನ್ನು ಹೋಲುವಂತಿದೆ. ಮುಂಬೈಯ ಮಾದಕವಸ್ತು ನಿಗ್ರಹ ಪಡೆ (ANC) ಗುರುವಾರ ಮೆಫೆಡ್ರೋನ್ ಮಾದವಸ್ತು ಮಾರಾಟ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರವೀಣ್ ಕುಮಾರ್ (52) ಸೇರಿದಂತೆ ಐದು ಮಂದಿಯನ್ನು ಎಎನ್ಸಿ ಬಂಧಿಸಿದೆ. ಇವರ ಜತೆ ಮಹಿಳೆಯೊಬ್ಬರನ್ನು ಬಂಧಿಸಿದ್ದು, ಅವರ ಬಳಿಯಿಂದ ₹1,400 ಕೋಟಿಗಿಂತಲೂ ಹೆಚ್ಚು ಮೌಲ್ಯದ 704 ಕೆಜಿ ಮೆಫೆಡ್ರೋನ್ ಅಥವಾ ಎಂಡಿ ವಶಪಡಿಸಿಕೊಳ್ಳಲಾಗಿದೆ. ಈ ಮಾದಕವಸ್ತುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಮಾರಲಾಗುತ್ತಿದ್ದು, ಇದನ್ನು ಖರೀದಿಸಲು ನಿರ್ದಿಷ್ಟ ಗ್ರಾಹಕರು ಇದ್ದಾರೆ. ಮಾದಕವಸ್ತು ಮಾರಾಟ ಜಾಲದ ಮಾಸ್ಟರ್ ಮೈಂಡ್ ಪ್ರವೀಣ್ ಕುಮಾರ್ ಪಾಲ್ಘಾರ್ ಮತ್ತು ಅಂಬೆರ್ನಾಥ್ನಲ್ಲಿರುವ ಮಾದಕವಸ್ತು ತಯಾರಿಕಾ ಘಟಕಗಳಲ್ಲಿ ಮಾದಕವಸ್ತು ತಯಾರಿಸುತ್ತಿದ್ದನು. ಮಾರ್ಚ್ ತಿಂಗಳಲ್ಲಿ ಗೋವಂದಿ-ಮಾಖಂರ್ದ್ ಪ್ರದೇಶದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ಸಿಕ್ಕ ಮಾಹಿತಿ ಆಧರಿಸಿ ಪೊಲೀಸರು ಆ ಜಾಲ ಭೇದಿಸಿದ್ದಾರೆ. ಬಂಧಿತ ಇತರ ಆರೋಪಿಗಳು ಎಂದರೆ ಶಂಶುಲ್ಲಾ ಖಾನ್ (39), ಆಯುಬ್ ಖಾನ್(38), ರಿಯಾಜ್ ಮೆಮನ್(43) ಮತ್ತು ರಿಯಾಜ್ ಗರ್ಲ್ ಫ್ರೆಂಡ್ ರೇಷ್ಮಾ ಚಂದನ್(35). ಇವರು ಡ್ರಗ್ಸ್ ಸರಬರಾಜು ಮಾಡುತ್ತಿದ್ದು ಕುಮಾರ್ ಎಂಬವನಿಂದ ಡ್ರಗ್ಸ್ ಖರೀದಿಸಿ ಚಿಲ್ಲರೆಯಾಗಿ ಮಾರುತ್ತಿದ್ದರು. ಬಂಧಿತರ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಇವರ್ಯಾರೂ ಅಪರಾಧ ದಾಖಲೆ ಹೊಂದಿದವರಲ್ಲ.
ಈ ರೀತಿ ಭಾರೀ ಪ್ರಮಾಣದ ಡ್ರಗ್ಸ್ ವಶಪಡಿಸಿದ್ದರಿಂದ ನಗರ ಮತ್ತು ಹತ್ತಿರದ ಪ್ರದೇಶಗಳಲ್ಲಿ ಎಂಡಿ ಕೊರತೆ ಕಾಣಿಸಿಕೊಳ್ಳಲಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಮಾದಕ ವ್ಯಸನಿಗಳಿಗೆ ಕೆಟ್ಟ ಸುದ್ದಿ ಮತ್ತು ಅವರ ಕುಟುಂಬದವರಿಗೆ ಖುಷಿಯ ಸುದ್ದಿ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Anti Narcotics Cell of Mumbai Police seized 703 kg of MD drug from Nalasopara area. The seized drug consignment is worth around Rs 1400 crores. Five drug peddlers arrested: Datta Nalawade, DCP Anti-Narcotics Cell pic.twitter.com/gX4h6hYwbH
— ANI (@ANI) August 4, 2022
ಉತ್ತರ ಪ್ರದೇಶ ನಿವಾಸಿಯಾದ ಕುಮಾರ್ ಪೂರ್ವಾಂಚಲ್ ಯುನಿವರ್ಸಿಟಿಯಿಂದ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪಡೆದಿದ್ದು, 1997ರಲ್ಲಿ ಮುಂಬೈಗೆ ಬಂದಿದ್ದ. ಈತ ನಲಸಪೋರಾದಲ್ಲಿ ವಾಸಿಸುತ್ತಿದ್ದು, ಫಾರ್ಮಾ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದನು. ಸುಮಾರು15 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಈತ ಮಾದಕವಸ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಕೆಲವೇ ವರ್ಷಗಳಲ್ಲಿ ಈತ ಹೆಚ್ಚು ಗ್ರಾಹಕರನ್ನು ತಲುಪಿದ್ದು ಎಂಡಿ ಸರಬರಾಜು ಮಾಡುತ್ತಿದ್ದ. ಮೊದಲು ಸಣ್ಣ ಪ್ರಮಾಣದಲ್ಲಿ ನಂತರ ಕೆಜಿಗಟ್ಟಲೆ ಮಾರಾಟ ಮಾಡುತ್ತಿದ್ದ. ಆನಂತರ ಪಾಲ್ಘಾರ್ ನಲ್ಲಿ ಲೀಸ್ ಗೆ ಕೆಮಿಕಲ್ ಘಟಕ ಖರೀದಿಸಿ ಅಲ್ಲಿ ಎಂಡಿ ಉತ್ಪಾದನೆ ಆರಂಭಿಸಿದ್ದಾನೆ. ಇದಕ್ಕಿಂತ ಮೊದಲು ಆತ ಗುಣಮಟ್ಟದ ಎಂಡಿ ಹೇಗೆ ತಯಾರಿಸುವುದು ಎಂಬುದನ್ನು ಕಲಿತಿದ್ದ. ಇದೆಲ್ಲ ಆಗಿದ್ದು 2018 ಅಥವಾ 2019ರಲ್ಲಿ ಎಂದು ಎಎನ್ ಸಿ ಡಿಸಿಪಿ ದತ್ತಾ ನಲವಾಡೆ ಹೇಳಿದ್ದಾರೆ.
“ಮೊದಲಿಗೆ 200 ಕೆಜಿ, ನಂತರ 400 ಕೆಜಿ ಮಾರಾಟ ಮಾಡಿ ಕೊನೆಗೆ 700 ಕೆಜಿಗೆ ತನ್ನ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದ್ದ ಕುಮಾರ್. ಅವರ ಮೊದಲ ಮಧ್ಯಮ ವರ್ಗದ ಆದಾಯಕ್ಕೆ ವ್ಯತಿರಿಕ್ತವಾಗಿ, ಈಗ ಈತ ಕೋಟಿಗಳನ್ನು ಗಳಿಸುತ್ತಿದ್ದಾನೆ . ಕೇವಲ ಎರಡು ವರ್ಷಗಳಲ್ಲಿ ಕುಮಾರ್ 1,200 ಕೆಜಿಗಿಂತ ಹೆಚ್ಚು ಎಂಡಿ ಮಾರಾಟ ಮಾಡಿದ್ದಾನೆ . ಸಗಟು ಪೂರೈಕೆಯ ಮೂಲಕ ವೈಯಕ್ತಿಕವಾಗಿ 20 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಈತ ಗಳಿಸಿದ್ದಾನೆ. ಕುಮಾರ್ ಯುಪಿ ಮತ್ತು ಗುಜರಾತ್‌ನಲ್ಲಿ ಅನೇಕ ಆಸ್ತಿಗಳನ್ನು ಖರೀದಿಸಿದ್ದು ನಾವು ಅವರ ಎಲ್ಲಾ ವಹಿವಾಟುಗಳು ಮತ್ತು ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ ನಲವಾಡೆ.
Published On - 3:43 pm, Fri, 5 August 22