National Herald case: ಮೋತಿಲಾಲ್ ವೋರಾ ಹಣಕಾಸು ವಹಿವಾಟು ನಡೆಸಿದ್ದಕ್ಕೆ ಯಾವುದೇ ಪುರಾವೆ ಇಲ್ಲ : ಇಡಿ
ಎಲ್ಲಾ ಹಣಕಾಸಿನ ವಹಿವಾಟುಗಳನ್ನು ದಿವಂಗತ ಮೋತಿಲಾಲ್ ವೋರಾ ನಿರ್ವಹಿಸಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಕಾಂಗ್ರೆಸ್ ನಾಯಕರು ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ಜಾರಿ ನಿರ್ದೇಶನಾಲಯದ (ಇಡಿ) ಆಪ್ತ ಮೂಲಗಳು ತಿಳಿಸಿವೆ.
ದೆಹಲಿ: ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (AJL) ಮತ್ತು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ದಿವಂಗತ ಮೋತಿಲಾಲ್ ವೋರಾ ನಿರ್ವಹಿಸಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಕಾಂಗ್ರೆಸ್ ನಾಯಕರು ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ಜಾರಿ ನಿರ್ದೇಶನಾಲಯದ (ED) ಆಪ್ತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘ ಕಾಲ ಖಂಜಾಂಚಿಯಾಗಿದ್ದ ವೋರಾ, 2020ರಲ್ಲಿ ಇಹಲೋಕ ತ್ಯಜಿಸಿದ್ದರು. ಆರ್ಥಿಕ ವಹಿವಾಟು ಬಗ್ಗೆ ರಾಹುಲ್ ಗಾಂಧಿಯನ್ನು ವಿಚಾರಣೆಗೊಳಪಡಿಸಿದಾಗ ಎಲ್ಲ ವಹಿವಾಟುಗಳನ್ನು ವೋರಾ ನಿರ್ವಹಿಸುತ್ತಿದ್ದರು ಎಂದು ಅವರು ಅಧಿಕಾರಿಗಳಿಗೆ ಹೇಳಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅಲ್ಲದೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಕುಮಾರ್ ಬನ್ಸಾಲ್ ಅವರು ಕೂಡಾ ವೋರಾ ಅವರ ಹೆಸರನ್ನೇ ಇಡಿ ಮುಂದೆ ಹೇಳಿದ್ದರು. ಆದರೆ ಈ ಎಲ್ಲಾ ನಾಯಕರು ಈ ಬಗ್ಗೆ ಸಭೆ ನಡೆದಿದ್ದರೆ ಸಭೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಸಂಸತ್ ನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದರೂ ಅದರ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಡಿ ವಿಚಾರಣೆಗೆ ಕರೆಯದೆ ಬೇರೆ ನಿರ್ವಾಹವಿರಲಿಲ್ಲ. ಯಾಕೆಂದರೆ ಖರ್ಗೆ ಅವರೊಬ್ಬರೇ ಯಂಗ್ ಇಂಡಿಯನ್ ಉದ್ಯೋಗಿಯಾಗಿದ್ದಾರೆ.
ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತ ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಕಚೇರಿ ಆವರಣದಲ್ಲಿರುವ ಯಂಗ್ ಇಂಡಿಯನ್ ಕಚೇರಿಯನ್ನು ಇಡಿ ತಾತ್ಕಾಲಿಕವಾಗಿ ಬೀಗ ಮುದ್ರೆ ಹಾಕಿದೆ.
ಏನಿದು ಯಂಗ್ ಇಂಡಿಯನ್-ಎಜಿಎಲ್ ಡೀಲ್?
ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿತ್ತು. ಇದು 1937ರಲ್ಲಿ 5,000 ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಅದರ ಷೇರುದಾರರಾಗಿ ಸ್ಥಾಪಿಸಿತು. ಈ ಕಂಪನಿಯು ಯಾವುದೇ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ. 2010ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ 1,057 ಷೇರುದಾರರನ್ನು ಹೊಂದಿತ್ತು. ಇದು ತೀವ್ರ ನಷ್ಟವನ್ನು ಅನುಭವಿಸಿತು. ಹೀಗಾಗಿ, ಅದರ ಹಿಡುವಳಿಗಳನ್ನು 2011ರಲ್ಲಿ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL)ಗೆ ವರ್ಗಾಯಿಸಲಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅದರ ನಿರ್ದೇಶಕರ ಮಂಡಳಿಯಲ್ಲಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಾಗ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
2012ರಲ್ಲಿ ಬಿಜೆಪಿ ನಾಯಕ ಮತ್ತು ವಕೀಲ ಸುಬ್ರಮಣಿಯನ್ ಸ್ವಾಮಿ ಅವರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಕೆಲವು ಕಾಂಗ್ರೆಸ್ ನಾಯಕರು ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಚಾರಣಾ ನ್ಯಾಯಾಲಯದ ಮುಂದೆ ದೂರು ಸಲ್ಲಿಸಿದರು. ವೈಐಎಲ್ ನ್ಯಾಷನಲ್ ಹೆರಾಲ್ಡ್ನ ಆಸ್ತಿಯನ್ನು ‘ದುರುದ್ದೇಶಪೂರಿತ’ ರೀತಿಯಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಗಾಂಧಿ ಕುಟುಂಬದವರು ವಂಚನೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ಸುಬ್ರಮಣ್ಯನ್ ಸ್ವಾಮಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಪತ್ರಿಕೆಯ ಹಿಂದಿನ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಅನ್ನು ಯಂಗ್ ಇಂಡಿಯನ್ (ವೈಐ) ಎಂಬ ಸಂಸ್ಥೆಯ ಮೂಲಕ ಖರೀದಿಸುವ ಮೂಲಕ ನ್ಯಾಷನಲ್ ಹೆರಾಲ್ಡ್ ಒಡೆತನದ ಆಸ್ತಿಯನ್ನು ಗಾಂಧಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಕಾಂಗ್ರೆಸ್‌ಗೆ ಎಜೆಎಲ್ ನೀಡಬೇಕಿದ್ದ 90.25 ಕೋಟಿ ಹಣವನ್ನು ವಸೂಲಿ ಮಾಡುವ ಹಕ್ಕನ್ನು ಪಡೆಯಲು ವೈಐ ಮೂಲಕ 50 ಲಕ್ಷ ರೂ. ಪಾವತಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಎಜೆಎಲ್‌ಗೆ 90 ಕೋಟಿ ರೂ. ಸಾಲ ನೀಡಿರುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅದನ್ನು ಸರಿದೂಗಿಸಲು ಎಜೆಎಲ್ ತನ್ನ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಿ ಅದನ್ನು ಗಾಂಧಿಯವರ ಒಡೆತನದ ಯಂಗ್ ಇಂಡಿಯನ್‌ಗೆ ಮಾರಾಟ ಮಾಡಿದೆ. ಆದರೆ, ಇಡಿಯಿಂದ ಪ್ರಶ್ನಿಸಲ್ಪಟ್ಟ ಯಾವುದೇ ಕಾಂಗ್ರೆಸ್ ನಾಯಕರೂ ಇದಕ್ಕೆ ಸಾಕ್ಷ್ಯವನ್ನು ನೀಡಲು ಸಾಧ್ಯವಾಗಿಲ್ಲ.
ಜವಾಹರಲಾಲ್ ನೆಹರು ಅವರು 1938ರಲ್ಲಿ ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು 90 ಕೋಟಿ ರೂ.ಗೂ ಅಧಿಕ ಸಾಲದೊಂದಿಗೆ ಮುಚ್ಚಲ್ಪಟ್ಟಿತು. ಅವನತಿ ಹಂತದಲ್ಲಿದ್ದ ಆ ಪತ್ರಿಕೆಯನ್ನು ಉಳಿಸಲು ಆಗಿನ ಆಡಳಿತ ಪಕ್ಷ ಕಾಂಗ್ರೆಸ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL)ಗೆ 90 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲವನ್ನು ನೀಡಿತು. ಆದರೂ ಆ ಪತ್ರಿಕೆಯನ್ನು ಮರಳಿ ಮಾರುಕಟ್ಟೆಗೆ ತರುವ ಪ್ರಯತ್ನ ವಿಫಲವಾಯಿತು. ಹಾಗೇ, ಆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ.
ಯಂಗ್ ಇಂಡಿಯಾ ಲಿಮಿಟೆಡ್ (YIL) ಅನ್ನು ನವೆಂಬರ್‌ನಲ್ಲಿ ಸ್ಥಾಪಿಸಲಾಯಿತು. ಇದರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 76%ರಷ್ಟು ಬಹುಪಾಲು ಪಾಲನ್ನು ಹೊಂದಿದ್ದರು. ಮೋತಿಲಾಲ್ ವೋರಾ 24% ಮತ್ತು ಆಸ್ಕರ್ ಫೆರ್ನಾಂಡಿಸ್ 12% ಕಂಪನಿಯ ಷೇರುಗಳನ್ನು ಹೊಂದಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಮೂಲತಃ ಹಣವನ್ನು ಸಾಲವಾಗಿ ನೀಡಿದ ಕಾಂಗ್ರೆಸ್ ಯಂಗ್ ಇಂಡಿಯಾ ಲಿಮಿಟೆಡ್‌ಗೆ ಸಾಲವನ್ನು ನಿಗದಿಪಡಿಸಿತು. ಇದರರ್ಥ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಯಂಗ್ ಇಂಡಿಯಾ ಲಿಮಿಟೆಡ್‌ಗೆ 90 ಕೋಟಿ ರೂ.ಗಳನ್ನು ಮರುಪಾವತಿಸಬೇಕಾಗಿತ್ತು.
AJL ಸಾಲವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲದ ಕಾರಣ, ಕಂಪನಿಯು ತನ್ನ ಷೇರುಗಳನ್ನು ಗಾಂಧಿ ಒಡೆತನದ ಯಂಗ್ ಇಂಡಿಯಾ ಲಿಮಿಟೆಡ್‌ಗೆ ವರ್ಗಾಯಿಸಿತು. ಇದಕ್ಕಾಗಿ ಅವರು 50 ಲಕ್ಷ ರೂ. ಕಂಪನಿಯು 2,000 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಆಸ್ತಿಯನ್ನು ಹೊಂದಿದೆ ಎಂದು ಪರಿಗಣಿಸಿ ಕೇವಲ 50 ಲಕ್ಷ ರೂ.ಗಳನ್ನು ಪಾವತಿಸಿ ಸಾರ್ವಜನಿಕವಾಗಿ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಆರೋಪವನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ಮೇಲೆ ಹೊರಿಸಲಾಗಿದೆ.
ಈ ಪ್ರಕರಣದ ಎಲ್ಲಾ ಐವರು ಆರೋಪಿಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್ ಮತ್ತು ಸುಮನ್ ದುಬೆ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಲಾಯಿತು. ಆದರೆ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಿಲ್ಲ.
ಹೆಚ್ಚಿನ ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Fri, 5 August 22