ಆಜಾದಿ ಕಾ ಅಮೃತ್ ಮಹೋತ್ಸವ್: ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸೇಡನ್ನು ಸರ್ದಾರ್ ಉಧಮ್ ಸಿಂಗ್ 21-ವರ್ಷ ನಂತರ ತೀರಿಸಿಕೊಂಡರು!

ಉಧಮ್ ಅವರು ವಾಲಾಬಾಗ್ ನಲ್ಲಿನ ಮಣ್ಣನ್ನು ಕೈಯಲ್ಲಿ ತೆಗೆದುಕೊಂಡು ಕರ್ನಲ್ ರೆಜಿನಾಲ್ಡ್ ಡೈಯರ್ ಮತ್ತು ಪಂಜಾಬ್ ನ ಆಗಿನ ಗವರ್ನರ್ ಮೈಕೆಲ್ ಫ್ರಾನ್ಸಿಸ್ ಒಡ್ವೈಯರನ್ನು ಕೊಲ್ಲುವ ಶಪಥ ಮಾಡಿದ್ದರು.

ಆಜಾದಿ ಕಾ ಅಮೃತ್ ಮಹೋತ್ಸವ್: ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸೇಡನ್ನು ಸರ್ದಾರ್ ಉಧಮ್ ಸಿಂಗ್ 21-ವರ್ಷ ನಂತರ ತೀರಿಸಿಕೊಂಡರು!
ಸರ್ದಾರ್ ಉಧಮ್ ಸಿಂಗ್
TV9kannada Web Team

| Edited By: Arun Belly

Aug 05, 2022 | 2:28 PM

ಆಜಾದಿ ಕಾ ಅಮೃತ್ ಮಹೋತ್ಸವ್:   ಏಪ್ರಿಲ್ 13, 1919 ರಂದು ಜಲಿಯನ್ ವಾಲಾಬಾಗ್‌ನಲ್ಲಿ (Jallianwala Bagh) ನಡೆದ ಘೋರ ಹತ್ಯಾಕಾಂಡ (massacre) ಇಡೀ ದೇಶದ ಜನಅ ಬ್ರಿಟಿಷರ ವಿರುದ್ಧ ಬೆಂಕಿಯುಗುಳುವಂತೆ ಮಾಡಿತ್ತು. ವಿಶೇಷವಾಗಿ ಪಂಜಾಬ್‌ ಪ್ರಾಂತ್ಯದ ಯುವಕರು ಈ ನಿರ್ದಯಿ ಹತ್ಯಾಕಾಂಡದ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದರರು. ಅವರಲ್ಲಿ ಒಬ್ಬ ಯುವಕ ಸರ್ದಾರ್ ಉಧಮ್ ಸಿಂಗ್ (Sardar Udham Singh). ಆ ಘಟನೆಯಿಂದ ಬಹಳ ವ್ಯಗ್ರರಾಗಿ ಕೋಪದಿಂದ ಕುದಿಯುತ್ತಿದ್ದ ಉಧಮ್ ಅವರು ವಾಲಾಬಾಗ್ ನಲ್ಲಿನ ಮಣ್ಣನ್ನು ಕೈಯಲ್ಲಿ ತೆಗೆದುಕೊಂಡು ಕರ್ನಲ್ ರೆಜಿನಾಲ್ಡ್ ಡೈಯರ್ ಮತ್ತು ಪಂಜಾಬ್ ನ ಆಗಿನ ಗವರ್ನರ್ ಮೈಕೆಲ್ ಫ್ರಾನ್ಸಿಸ್ ಒಡ್ವೈಯರನ್ನು ಕೊಲ್ಲುವ ಶಪಥ ಮಾಡಿದ್ದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು 21 ವರ್ಷಗಳ ಬಳಿಕ ಅಂದರೆ 1940 ರಲ್ಲಿ ಅವರು ಮೈಕೆಲ್ ಒಡ್ವೈಯರ್ ಅವರನ್ನು ಕೊಲ್ಲುವ ಮೂಲಕ ತಮ್ಮ ಸೇಡು ತೀರಿಸಿಕೊಂಡರು. ಅಷ್ಟರಲ್ಲಾಗಲೇ ಕರ್ನಲ್ ರೆಜಿನಾಲ್ಡ್ ಡೈಯರ್ ಇಹಲೋಕದ ಯಾತ್ರೆ ತ್ಯಜಿಸಿದ್ದ. ಹತ್ಯೆ ನಡೆಸಿದ ಬಳಿಕ ಓಡಿಹೋಗಲು ಯತ್ನಿಸಿದ್ದ ಅವರನ್ನು ಬಂಧಿಸಲಾಗಿತ್ತು.

ಪಂಜಾಬ್‌ನ ಸುನಮ್‌ನಲ್ಲಿ ಜನಿಸಿದರು ಉಧಮ್

ಸರ್ದಾರ್ ಉಧಮ್ ಸಿಂಗ್ ಅವರು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುನಮ್ ಗ್ರಾಮದಲ್ಲಿ 28 ಡಿಸೆಂಬರ್, 1899 ರಂದು ಜನಿಸಿದರು, ಅವರ ತಂದೆಯ ಹೆಸರು ತಹಲ್ ಸಿಂಗ್ ಮತ್ತು ತಾಯಿ ನಾರಾಯಣ ಕೌರ್. ಅಸಲಿಗೆ ತಾಯಿ-ತಂದೆ ಅವರಿಗೆ ಇಟ್ಟ ಹೆಸರು ಶೇರ್ ಸಿಂಗ್. ಉಧಮ್ ಹುಟ್ಟಿದ ಎರಡು ವರ್ಷಗಳ ನಂತರ ಅವರ ತಾಯಿ ತೀರಿಕೊಂಡರು. ಕೆಲವೇ ವರ್ಷಗಳ ನಂತರ ಅಂದರೆ 1907 ರಲ್ಲಿ ಅವರ ತಂದೆಯೂ ನಿಧನರಾದರು. ಸಂಪೂರ್ಣವಾಗಿ ಅನಾಥರಾಗಿದ್ದ ಅವರು ತಮ್ಮ ಸಹೋದರನೊಂದಿಗೆ ಅನಾಥಾಶ್ರಮವೊಂದನ್ನು ಸೇರಿದರು. ಅವರಿಗೆ ಉಧಮ್ ಸಿಂಗ್ ಹೆಸರು ಸಿಕ್ಕಿದ್ದು ಅದೇ ಅನಾಥಾಶ್ರಮದಲ್ಲಿ.

1919 ರಲ್ಲಿ ಉಧಮ್ ಅನಾಥಾಶ್ರಮ ತ್ಯಜಿಸಿದರು

ಸರ್ದಾರ್ ಉಧಮ್ ಸಿಂಗ್ ಅವರ ಸಹೋದರ 1917 ರಲ್ಲಿ ನಿಧನ ಹೊಂದಿದ ನಂತರ 1919 ರಲ್ಲಿ ಉಧಮ್ ಅನಾಥಾಶ್ರಮದಿಂದ ಹೊರಬಿದ್ದರು. ಅದೇ ಸಮಯದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ಅದಕ್ಕೆ ಕಾರಣರಾದ ಅಪರಾಧಿಗಳನ್ನು ಕೊಲ್ಲಲು ಅವರು ನಿರ್ಧರಿಸಿದರು. ಇದಕ್ಕಾಗಿ ಅವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಕಾರ್ಮಿಕನಾಗಿ ಸೇರಿ ವಿದೇಶ ಪ್ರವಾಸ ಮಾಡಿದರು.

ಬೇರೆ ಬೇರೆ ದೇಶಗಳಿಗೆ ಹೋಗಿ ಹೋದೆಡೆಯೆಲ್ಲ ಹೆಸರು ಬದಲಾಯಿಸಿಕೊಂಡರು!

ವಿದೇಶಿ ಪ್ರವಾಸಗಳ ಸಮಯದಲ್ಲಿ, ಸರ್ದಾರ್ ಉಧಮ್ ಸಿಂಗ್ ಅನೇಕ ಹೆಸರುಗಳನ್ನು ಬದಲಾಯಿಸಿಕೊಂಡರು. ವಿದೇಶಗಳಲ್ಲಿ ಅವರು ಫ್ರಾಂಕ್ ಬ್ರೆಜಿಲ್, ಉದಯ್ ಸಿಂಗ್, ಉಧನ್ ಸಿಂಗ್ ಮತ್ತು ಮೊಹಮ್ಮದ್ ಸಿಂಗ್, ಆಜಾದ್ ಮೊದಲಾದ ಹೆಸರುಗಳಿಂದ ಗುರುತಿಸಿಕೊಂಡಿದ್ದರು.

ಉಧಮ್ ಸಿಂಗ್ 1920 ರ ದಶಕದ ಆರಂಭದಲ್ಲಿ ಗದರ್ ಚಳವಳಿಗೆ ಸೇರಿದರು. ಹಾಗೆಯೇ ಅವರು ಲಂಡನ್ ಮೂಲದ ವರ್ಕರ್ಸ್ ಅಸೋಸಿಯೇಷನ್‌ ಸದಸ್ಯತ್ವ ಕೂಡ ಪಡೆದರು. 1927 ರಲ್ಲಿ ಭಾರತಕ್ಕೆ ವಾಪಸ್ಸಾಗಿ ನಿಷೇಧಿತ ಸಾಹಿತ್ಯದ ಪುಸ್ತಕಳೊಂದಿಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡಿದರು. ಆ ವರ್ಷದ ಆಗಸ್ಟ್ 30 ರಂದು ಅವರನ್ನು ಬಂಧಿಸಿ ಐದು-ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಯಿತು.

1934 ರಲ್ಲಿ ಮತ್ತೆ ಇಂಗ್ಲೆಂಡ್ ಗೆ ಹೋದರು

ಸೆರೆಮನೆಯಲ್ಲಿ ಅವರು ತೋರಿಸಿದ ಉತ್ತಮ ನಡವಳಿಕೆಯಿಂದ ಸರ್ದಾರ್ ಉಧಮ್ ಸಿಂಗ್ ಶಿಕ್ಷೆಯನ್ನು ಒಂದು ವರ್ಷ ಕಡಿಮೆ ಮಾಡಲಾಯಿತು. ನಾಲ್ಕು ವರ್ಷಗಳ ಸೆರೆವಾಸ ಅನುಭವಿಸಿದ ನಂತರ 23 ಅಕ್ಟೋಬರ್, 1931 ರಂದು ಜೈಲಿನಿಂದ ಬಿಡುಗಡೆ ಹೊಂದಿದರು. ಪೊಲೀಸರ ಹದ್ದಿನ ಕಣ್ಣು ಅವರ ಮೇಲೆ ನಿರಂತರವಾಗಿತ್ತು. ಆದರೆ ಅವರನ್ನು ಕ್ರಾಂತಿಕಾರಿ ಚಟುವಟಿಕೆಗಳನ್ನು ರಹಸ್ಯವಾಗಿ ನಡೆಸುವುದರಿಂದ ತಡೆಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.

ಏತನ್ಮಧ್ಯೆ, 1933ರಲ್ಲಿ ಮತ್ತೊಮ್ಮೆ ವಿದೇಶಕ್ಕೆ ಹಾರುವ ಅವಕಾಶ ಗಿಟ್ಟಿಸಿ ಜರ್ಮನಿಗೆ ಹೋದರು ಮತ್ತು ಅಲ್ಲಿಂದ ಲಂಡನ್ ತಲುಪಿ ವರ್ಷಗಟ್ಟಲೆ ಕಾಯುತ್ತಿದ್ದ ಅವಕಾಶಕ್ಕಾಗಿ ತಾಳ್ಮೆಯಿಂದ ಹೊಂಚುಹಾಕಲಾರಂಭಿಸಿದ್ದರು. ಲಂಡನ್‌ನಲ್ಲಿ ಅವರು ಭಾರತೀಯ ಕಾರ್ಮಿಕರ ಸಂಘಕ್ಕೆ ಸೇರ್ಪಡೆಗೊಂಡರು.

ಆರು ವರ್ಷಗಳ ನಂತರ ಸಿಕ್ಕಿತು ಅವಕಾಶ

1934 ರಲ್ಲಿ ಇಂಗ್ಲೆಂಡ್ ತಲುಪಿದ, ಸರ್ದಾರ್ ಉಧಮ್ ಸಿಂಗ್ ಸೇಡು ತೀರಿಸಿಕೊಳ್ಳಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಮಾರ್ಚ್ 13, 1940 ರಂದು, ಲಂಡನ್‌ನ ಕ್ಯಾಕ್ಸ್‌ಟನ್ ಹಾಲ್‌ನಲ್ಲಿ ಬಹುದಿನಗಳಿಂದ ಅವರು ಎದರು ನೋಡುತ್ತಿದ್ದ ಅವಕಾಶ ಸಿಕ್ಕಿತು. ಅಲ್ಲಿನ ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿಯ ಸಹಯೋಗದಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಶನ್‌ ಸಭೆ ನಡೆಯುತ್ತಿತ್ತು. ಸರ್ದಾರ್ ಉಧಮ್ ಸಿಂಗ್ ತಮ್ಮ ಡೈರಿಯಲ್ಲಿ ಬಚ್ಚಿಟ್ಟಿದ್ದ ರಿವಾಲ್ವರ್ ತೆಗೆದುಕೊಂಡು ಅಲ್ಲಿ ಹೋದರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತೀಕಾರ ತೀರಿಸಿಕೊಂಡರು!!

ಕ್ಯಾಕ್ಸ್‌ಟನ್ ಹಾಲ್‌ನಲ್ಲಿ ಸಭೆ ನಡೆಯುತ್ತಿದ್ದಾಗ, ಉಧಮ್ ಸಿಂಗ್ ಮೈಕೆಲ್ ಒಡ್ವೈಯರ್ ಮೇಲೆ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದರಿಂದ ಅವನು ಸ್ಥಳದಲ್ಲೇ ಕೊನೆಯುಸಿರೆಳೆದ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಾಗ ಒಡ್ವೈಯರ್ ಆಗಿನ ಪಂಜಾಬ್ ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಆದೇಶ ನೀಡಿದ ರೆಜಿನಾಲ್ಡ್ ಡೈಯರ್ 1927 ರಲ್ಲೇ ನಿಧನ ಹೊಂದಿದ್ದ. ಉಧಮ್ ಸಿಂಗ್ 21 ವರ್ಷಗಳ ಹಿಂದೆ ಮಾಡಿದ್ದ ತಮ್ಮ ಶಪಥ ಹಾಗೆ ತೀರಿಸಿಕೊಂಡರು.

ಲಂಡನ್‌ನಲ್ಲಿ ಗಲ್ಲಿಗೇರಿಸಲಾಯಿತು

ಸರ್ದಾರ್ ಉಧಮ್ ಸಿಂಗ್ ಅವರು ಮೈಕೆಲ್ ಒಡ್ವೈಯರ್ ಕೊಂದ ಆರೋಪದಲ್ಲಿ ವಿಚಾರಣೆಗೊಳಗಾದರು. ಅವರು ಜೈಲಿನಲ್ಲಿದ್ದಾಗ ಉಪವಾಸ ಸತ್ಯಾಗ್ರಹ ನಡೆಸಿದರು. ಸೆಂಟ್ರಲ್ ಕ್ರಿಮಿನಲ್ ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಲಾಯಿತು. ನ್ಯಾಯಾಲಯದಲ್ಲಿ ಮತ್ತೊಂದು ಮೇಲ್ಮನವಿ ಸಲ್ಲಿಸಲಾದರೂ ಅದನ್ನು ವಜಾಗೊಳಿಸಲಾಯಿತು. 31 ಜುಲೈ 1940 ರಂದು, ಭಾರತಮಾತೆಯ ವೀರ ಪುತ್ರ ಉಧಮ್ ಸಿಂಗ್ ಲಂಡನ್ ಜೈಲಿನಲ್ಲಿ ನೇಣುಗಂಬಕ್ಕೆ ಕೊರಳೊಡ್ಡಿದರು.

35 ವರ್ಷಗಳ ನಂತರ ಅವಶೇಷಗಳನ್ನು ತಾಯ್ನಾಡಿಗೆ ತರಲಾಯಿತು

ನೇಣಿಗೇರಿದ ಸರ್ದಾರ್ ಉಧಮ್ ಸಿಂಗ್ ಅವರ ದೇಹವನ್ನು ಜೈಲಿನಲ್ಲಿ ಸಮಾಧಿ ಮಾಡಲಾಯಿತು. 1974 ರಲ್ಲಿ, ಅಂದಿನ ಪಂಜಾಬ್ ಮುಖ್ಯಮಂತ್ರಿ ಗ್ಯಾನಿ ಜೈಲ್ ಸಿಂಗ್ ಅವರು ಉಧಮ್ ಸಿಂಗ್ ಅವರ ಚಿತಾಭಸ್ಮವನ್ನು ತಮ್ಮ ಸ್ವಂತ ಪ್ರಯತ್ನದಿಂದ ಭಾರತಕ್ಕೆ ತಂದರು. ಚಿತಾಭಸ್ಮವನ್ನು ಭಾರತಕ್ಕೆ ಬಂದಾಗ ಹುತಾತ್ಮರಿಗೆ ದಕ್ಕುವ ಗೌರವದೊಂದಿಗೆ ಅದನ್ನು ಸ್ವಾಗತಿಸಲಾಯಿತು.

ಆಗಸ್ಟ್ 2, 1974 ರಂದು ಅಂತಿಮ ಸಂಸ್ಕಾರ ನಡೆಸಿ ಐದು ಅಸ್ಥಿಕಲಶಗಳಲ್ಲಿ ಚಿತಾಭಸ್ಮ ತುಂಬಿಸಲಾಗಿತ್ತು. ಒಂದು ಕಲಶದಲ್ಲಿದ್ದ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಮುಳುಗಿಸಿದರೆ, ಮತ್ತೊಂದನ್ನು ಹುತಾತ್ಮರ ಸ್ಮಾರಕವಾಗಿ ಜಲಿಯನ್ ವಾಲಾಬಾಗ್ ನಲ್ಲಿ ಇರಿಸಲಾಯಿತು. ಉಳಿದ ಮೂರು ಚಿತಾಭಸ್ಮದ ಕಲಶಗಳನ್ನು ಹಿಂದೂ, ಮುಸ್ಲಿಂ ಮತ್ತು ಸಿಕ್ಖರ ಪವಿತ್ರ ಸ್ಥಳಗಳಲ್ಲಿ ಸಮಾಧಿ ಮಾಡಲಾಯಿತು.

ಭಗತ್ ಸಿಂಗ್ ಭಾವಚಿತ್ರಗಳು ಸರ್ದಾರ ಉಧಮ್ ಸಿಂಗ್ ಪರ್ಸ್​ನಲ್ಲಿ ಸಿಕ್ಕವು!

ಸರ್ದಾರ್ ಉಧಮ್ ಸಿಂಗ್ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ಅಮಲೇರಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲೇ ಭಗತ್ ಸಿಂಗ್ ರಿಂದ ಭಾರಿ ಪ್ರಭಾವಕ್ಕೊಳಗಾಗಿದ್ದ ಅವರು ಸದಾ ತಮ್ಮ ಪರ್ಸ್ನಲ್ಲಿ ಭಗತ್ ಸಿಂಗ್ ಚಿತ್ರ ಇಟ್ಟುಕೊಂಡಿರುತ್ತಿದ್ದರು. ಇತ್ತೀಚೆಗಷ್ಟೇ ಅವರ ಬದುಕಿನ ಮೇಲೆ ಒಂದು ಚಲನಚಿತ್ರವನ್ನು ನಿರ್ಮಿಸಲಾಗಿದ್ದು; ವಿಕ್ಕಿ ಕೌಶಲ್, ಸರ್ದಾರ್ ಉಧಮ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಇನ್ನಷ್ಟು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada