ಕಪ್ಪು ಟರ್ಬನ್ , ಕುರ್ತಾ ಧರಿಸಿ ಬೆಲೆ ಏರಿಕೆ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಪ್ರತಿಭಟನೆ
Mallikarjun Kharge ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ರಾಷ್ಟ್ರಪತಿ ಭವನಕ್ಕೆ ಮಾರ್ಚ್ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಮುತ್ತಿಗೆ ಹಾಕಲಿದೆ.

ದೆಹಲಿ: ದೇಶದಲ್ಲಿ ಬೆಲೆ ಏರಿಕೆ (price rise)ಮತ್ತು ನಿರುದ್ಯೋಗ ಸಮಸ್ಯೆ ಖಂಡಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದು ರಾಜ್ಯಸಭೆಯ ವಿಪಕ್ಷ ನೇತಾರ ಮಲ್ಲಿಕಾರ್ಜುನ ಖರ್ಗೆ (Mallikarjun Kharge )ಇಂದು ಕಪ್ಪು ಟರ್ಬನ್ ಮತ್ತು ಕುರ್ತಾ ತೊಟ್ಟು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ (Congress) ರಾಷ್ಟ್ರಪತಿ ಭವನಕ್ಕೆ ಮಾರ್ಚ್ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಮುತ್ತಿಗೆ ಹಾಕಲಿದೆ. ಬೆಲೆ ಏರಿಕೆ ಮತ್ತು ಜಿಎಸ್ಟಿ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಉಭಯ ಸದನಗಳಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಎಂದು ಒತ್ತಾಯಿಸುತ್ತಿವೆ. ಕಾಂಗ್ರೆಸ್ ಸಂಸದರು ಸದನದ ಒಳಗೆ ಮತ್ತು ಹೊರಗೆ ಇದೇ ವಿಷಯ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಖರ್ಗೆ ಅವರನ್ನು ಗುರುವಾರ ವಿಚಾರಣೆಗೊಳಡಿಸಿತ್ತು.
ಕಾಂಗ್ರೆಸ್ ಇಂದು ಪ್ರಧಾನಿ ನಿವಾಸಕ್ಕೆ ಮಾರ್ಚ್ ನಡೆಸಲಿದ್ದು ಆನಂತರ ಸಂಸತ್ ನಿಂದ ರೈಸಿನಾ ಹಿಲ್ಗೆ ಮಾರ್ಚ್ ನಡೆಯಲಿದೆ. ಶುಕ್ರವಾರ ರಾಜ್ಯಸಭೆ ಕಲಾಪ ಆರಂಭವಾಗಿ 5 ನಿಮಿಷದಲ್ಲಿ ಕಲಾಪ ಮುಂದೂಡಲಾಗಿದೆ.
Delhi | Leader of Opposition in Rajya Sabha Mallikarjun Kharge wears a black kurta and turban in protest against price rise and unemployment pic.twitter.com/bWs2AxMweI
— ANI (@ANI) August 5, 2022
ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಸಂಸತ್ ಭವನದಿಂದ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸುತ್ತಿದ್ದಾಗ ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಸಹ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಸಂಸತ್ತಿನ ಹೊರಗೆ ಧರಣಿ ನಡೆಸಿದ ಸಂಸದರೊಂದಿಗೆ ರಾಹುಲ್ ಗಾಂಧಿ ರಾಷ್ಟ್ರಪತಿ ಭವನದತ್ತ ಹೊರಟಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ ಮತ್ತು ಕೆ.ಸಿ ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ದೆಹಲಿಯ ಅರೆಸೇನಾ ಪಡೆಗಳು ಮತ್ತು ದೆಹಲಿ ಪೊಲೀಸರು ವಿಜಯ್ ಚೌಕ್ ರಸ್ತೆ ಮತ್ತು ಸಂಸತ್ತಿನಿಂದ ರಾಷ್ಟ್ರಪತಿ ಭವನಕ್ಕೆ ಹೋಗುವ ಮಾರ್ಗವನ್ನು ಬ್ಯಾರಿಕೇಡ್‌ಗಳ ಮೂಲಕ ನಿರ್ಬಂಧಿಸಿದ್ದಾರೆ. ಕಾಂಗ್ರೆಸ್ ಸಂಸದರ ಪ್ರತಿಭಟನೆಯನ್ನು ತಡೆಯಲು ಬ್ಯಾರಿಕೇಡ್‌ಗಳ ಇನ್ನೊಂದು ಬದಿಯಲ್ಲಿ ಮಹಿಳಾ ಪ್ಯಾರಾ ಸಿಬ್ಬಂದಿಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಪ್ರತಿಭಟನೆಗೂ ಮುನ್ನ ಸುದ್ದಿಗೋಷ್ಠಿ ಕರೆದಿದ್ದ ರಾಹುಲ್ ಗಾಂಧಿ, 70 ವರ್ಷದ ಪ್ರಜಾಪ್ರಭುತ್ವ ವ್ಯವಸ್ಥೆ 8 ವರ್ಷದಲ್ಲಿ ನಾಶವಾಗಿದೆ. ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಚರ್ಚಿಸಲು ಅವಕಾಶ ನೀಡುತ್ತಿಲ್ಲ. ದೇಶದಲ್ಲಿ ಇಂದು 4 ಜನರಿಂದ ಸರ್ವಾಧಿಕಾರ ನಡೆಯುತ್ತಿದೆ. ಯಾರಾದರೂ ಆ ಸರ್ವಾಧಿಕಾರಿಗಳ ವಿರುದ್ಧ ತಿರುಗಿಬಿದ್ದರೆ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಸುಳ್ಳು ಕೇಸ್ ಹಾಕಿ ನಮ್ಮನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಸಂಸತ್ನಲ್ಲಿ ಜನರ ಯಾವುದೇ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ನಾಲ್ಕೈದು ಉದ್ಯಮಿಗಳಿಗಾಗಿ ಇಬ್ಬರು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಬಿಜೆಪಿಯ ಬೆದರಿಕೆ ತಂತ್ರವಾಗಿದೆ. ಬಿಜೆಪಿಯವರು ನಮ್ಮ ವಿರುದ್ಧ ಏನೇ ಷಡ್ಯಂತ್ರ ಮಾಡಿದರೂ ಯಾವುದೇ ಬದಲಾವಣೆ ಆಗಲ್ಲ. ನಮ್ಮ ದೇಶ, ಅದರ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸವನ್ನು ನಾನು ಮುಂದುವರಿಸುತ್ತೇನೆ. ಸ್ವಲ್ಪ ಒತ್ತಡ ಹಾಕಿದರೆ ನಮ್ಮನ್ನು ಸುಮ್ಮನಿರಿಸಬಹುದು ಎಂದು ಅವರು ಭಾವಿಸಿದ್ದಾರೆ. ಆದರೆ, ನಾವು ಸುಮ್ಮನಿರುವುದಿಲ್ಲ. ಬಿಜೆಪಿಯವರ ವಿರುದ್ಧ ನಾವು ನಿಲ್ಲುತ್ತೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Fri, 5 August 22








