ಚೀನಾದಿಂದ ಹಣ ಪಡೆದು ಅವರ ಪರವಾಗಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ಸಂಸ್ಥಾಪಕರಾದ ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಿದ್ದಾರೆ. ವಿದೇಶಿ ನಿಧಿಯ ತನಿಖೆಗೆ ಸಂಬಂಧಿಸಿದಂತೆ ದಾಳಿಯ ನಂತರ ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್‌ನ ಕಚೇರಿಯನ್ನು ಪೊಲೀಸ್ ವಿಶೇಷ ಸೆಲ್ ಸೀಲ್ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ ಇಬ್ಬರು ಆರೋಪಿಗಳಾದ ಪ್ರಬೀರ್ ಪುರ್ಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 37 ಪುರುಷ ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಯಿತು ಮತ್ತು 9 ಮಹಿಳಾ ಶಂಕಿತರನ್ನು ಅವರ ನಿವಾಸದಲ್ಲಿ ವಿಚಾರಣೆ ನಡೆಸಲಾಯಿತು. ಈ ಅವಧಿಯಲ್ಲಿ, ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ/ತನಿಖೆಗೆ ಸಂಗ್ರಹಿಸಲಾಗಿದೆ.
ಮತ್ತಷ್ಟು ಓದಿ:ಚೀನಾ ಫಂಡಿಂಗ್, ಅಕ್ರಮ ಹಣ ವರ್ಗಾವಣೆ ಆರೋಪ, ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸರಿಂದ ದಾಳಿ
ಸರ್ಕಾರ ಹೇಳಿದ್ದೇನು?
ದಾಳಿ ಕುರಿತು ಪ್ರತಿಪಕ್ಷಗಳ ಟೀಕೆಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಭುವನೇಶ್ವರದಲ್ಲಿ ಮಾತನಾಡಿ, ದೇಶದ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿವೆ ಮತ್ತು ಅವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸುತ್ತವೆ.
ಯಾರಾದರೂ ತಪ್ಪು ಮಾಡಿದ್ದರೆ ತನಿಖಾ ಸಂಸ್ಥೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು. ನೀವು ಅಕ್ರಮವಾಗಿ ಹಣ ಪಡೆದಿದ್ದರೆ ಅಥವಾ ಆಕ್ಷೇಪಾರ್ಹವಾಗಿ ಏನಾದರೂ ಮಾಡಿದ್ದರೆ, ತನಿಖಾ ಸಂಸ್ಥೆ ಅದನ್ನು ತನಿಖೆ ಮಾಡೇ ಮಾಡುತ್ತವೆ ಎಂದರು.
ಏನಿದು ಆರೋಪ?
ಚೀನಾದಿಂದ ಹಣ ಪಡೆದು ಚೀನಾ ಪರವಾದ ಸುದ್ದಿಗಳನ್ನು ನ್ಯೂಸ್‌ಕ್ಲಿಕ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿದೆ.
ಭಾರತದಲ್ಲಿ ಚೀನಾ ಪರ ಪ್ರಚಾರಕ್ಕಾಗಿ ಅಮೆರಿಕದ ಮಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣ ಪಡೆದ ಆರೋಪದಲ್ಲಿ ವೆಬ್‌ಸೈಟ್ ಇತ್ತೀಚೆಗೆ ಸುದ್ದಿಯಾಗಿತ್ತು.
ಚೀನಾ ಪರ ಪ್ರಚಾರಕ್ಕಾಗಿ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣವನ್ನು ಆಗಸ್ಟ್ 17ರಂದು ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಹೀಗಾಗಿ, ಇಂದು ಬೆಳಗ್ಗೆ ನ್ಯೂಸ್‌ಕ್ಲಿಕ್ ಮತ್ತು ಅದರ ಪತ್ರಕರ್ತರಿಗೆ ಸಂಬಂಧಿಸಿದ 30 ಸ್ಥಳಗಳಲ್ಲಿ ಏಕಕಾಲಕಕ್ಕೆ ದಾಳಿ ನಡೆಸಿ, ಶೋಧ ನಡೆಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ